Monday, 23rd December 2024

Manu Bhaker: ಖೇಲ್ ರತ್ನಕ್ಕೆ ನಾಮನಿರ್ದೇಶನಗೊಳ್ಳದ ಅವಳಿ ಒಲಿಂಪಿಕ್ಸ್‌ ಪದಕ ವಿಜೇತೆ ಮನು ಭಾಕರ್

ನವದೆಹಲಿ: ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ(Major Dhyan Chand Khel Ratna) ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಿಂದ ಪ್ಯಾರಿಸ್ ಅವಳಿ ಒಲಿಂಪಿಕ್ಸ್(Paris Olympics) ಪದಕ ವಿಜೇತ ಮನು ಭಾಕರ್(Manu Bhaker) ಹೆಸರನ್ನು ಕೈಬಿಡಲಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ವಿ ರಾಮಸುಬ್ರಮಮ್ ನೇತೃತ್ವದ 12 ಸದಸ್ಯರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿಯು ಶೂಟರ್ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಲಿಲ್ಲ ಎಂದು ತಿಳಿದುಬಂದಿದೆ.

ಮನು ಭಾಕರ್ ಅವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿಕೊಂಡಿದೆ. ಆದರೆ ಮನು ಭಾಕರ್ ಅವರ ತಂದೆ ರಾಮಕೃಷ್ಣ ಅವರು ಗೌರವಕ್ಕಾಗಿ ಅರ್ಜಿ ಸಲ್ಲಿಸಿದರೂ ಸಮಿತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾ-ಅಥ್ಲೀಟ್ ಪ್ರವೀಣ್ ಕುಮಾರ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಕಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ರಾಮಕೃಷ್ಣ, “ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಪ್ರಶಸ್ತಿಗಾಗಿ ಭಿಕ್ಷೆ ಬೇಡಿದರೆ ಏನು ಪ್ರಯೋಜನ?” ಎಂದು ಹೇಳಿದರು.”ಒಬ್ಬ ಸರ್ಕಾರಿ ಅಧಿಕಾರಿ ಪ್ರಶಸ್ತಿಯನ್ನು ನಿರ್ಧರಿಸುತ್ತಿದ್ದಾರೆ. ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯವನ್ನು ನೀಡದೆ ಮೌನವಾಗಿದ್ದಾರೆ. ಇದು ನನಗೆ ಅರ್ಥವಾಗುತ್ತಿಲ್ಲ. ನೀವು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ರೀತಿ ಇದೇನಾ? ಎಂದು ರಾಮಕೃಷ್ಣ ಹೇಳಿದ್ದಾರೆ.

ಮನು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಇನ್ನೊಂದು ಮಿಶ್ರ 10m ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಪದಕ ಜಯಿಸಿದ್ದರು.

ಮನು ಭಾಕರ್ 2020 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದರು. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸದಿದ್ದರೂ ಮೊಹಮ್ಮದ್ ಶಮಿ ಅವರಿಗೆ ಈ ವರ್ಷದ ಆರಂಭದಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಧ್ಯಪ್ರವೇಶಿಸಿ ಪ್ರಶಸ್ತಿ ನೀಡುವಂತೆ ಮಾಡಿತ್ತು.