Monday, 23rd December 2024

KMF Milk Price Hike: ಹಾಲು ಉತ್ಪಾದಕರಿಗೆ ಗುಡ್‌ನ್ಯೂಸ್‌, ಖರೀದಿ ದರ ಹೆಚ್ಚಿಸಲು ಕೆಎಂಎಫ್‌ ನಿರ್ಧಾರ

Nandini Ghee

ಬೆಂಗಳೂರು: ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲು ಕೆಎಂಎಫ್‌ ನಿರ್ಧರಿಸಿದ್ದು, ಹೊಸ ವರ್ಷದಲ್ಲಿ ಹಾಲು ಖರೀದಿ ದರ ಹೆಚ್ಚಳ (KMF Milk Price Hike) ಮಾಡಲು ನಿರ್ಧರಿಸಿದೆ. ಕೆಎಂಎಫ್‌ ಅಧ್ಯಕ್ಷ ಎಸ್‌.ಭೀಮನಾಯ್ಕ ಈ ವಿಚಾರ ತಿಳಿಸಿದ್ದಾರೆ.

ವಿಜಯನಗರ (Vijayanagar news) ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಿಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಬಿಎಂಸಿ ಘಟಕ ಉದ್ಘಾಟಿಸಿ, ಬಳಿಕ ನಡೆದ ಸಮಾರಂಭದಲ್ಲಿ ಕೆಎಂಎಫ್‌ ಅಧ್ಯಕ್ಷ ಎಸ್‌ ಭೀಮನಾಯ್ಕ ಮಾತನಾಡಿದರು.

ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಸಿಎಂ ಸಿದ್ದರಾಮಯ್ಯ ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ಹಾಲು ಉತ್ಪಾದಕ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿ ದರ ಹೆಚ್ಚಿಸುವ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರ ಹಿತಕ್ಕಾಗಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ 15 ಒಕ್ಕೂಟಗಳಲ್ಲಿ ರೈತರಿಗೆ ಹಾಲಿನ ದರ ಇಳಿಸಲಾಗಿದೆ. ಆದರೆ, ರಾಜ್ಯದಲ್ಲಿ ರೈತರಿಗೆ ಹಾಲಿನ ದರ ತಗ್ಗಿಸಿದ ಏಕೈಕ ಒಕ್ಕೂಟ ರಾಬಕೋವಿ ಒಕ್ಕೂಟವಾಗಿದೆ ಎಂದರು. ವಿಜಯನಗರ ಜಿಲ್ಲೆಯಲ್ಲಿ ಹೊಸ ವರ್ಷದಿಂದ ಪ್ರತಿದಿನ 300 ಸಾವಿರ ಮೆಟ್ರಿಕ್‌ ಪಶು ಆಹಾರ ಉತ್ಪಾದಿಸುವ ಘಟಕ ಕಾರ್ಯಾರಂಭವಾಗಲಿದೆ. ಕೋಲಾರದಲ್ಲಿ ಸ್ಥಾಪಿತವಾಗುತ್ತಿದ್ದ ಪಶು ಆಹಾರ ಘಟಕವನ್ನು ವಿಜಯನಗರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಫೆಬ್ರವರಿಯಿಂದ ಹಾಲು ಉತ್ಪಾದಕ ರೈತರಿಗೆ ಧಾರವಾಡದಿಂದ ಪೂರೈಸಲಾಗುತ್ತಿದ್ದ ಪಶು ಆಹಾರ ಹೊಸಪೇಟೆಯಲ್ಲೆ ಲಭ್ಯವಾಗಲಿದೆ ಎಂದರು.

ರಾಜ್ಯ ರೈತರ ಅಸ್ಮಿತೆಯಾದ ನಂದಿನಿ ಹಾಲು ಉತ್ಪನ್ನಗಳಲ್ಲಿ ರಾಸಾಯನಿಕ ಬಳಕೆ ಇಲ್ಲ. ದಿಲ್ಲಿಯಲ್ಲಿ ಹಲವರು ನಂದಿನಿ ಹಾಲು ಖರೀದಿಸಿ ರಸ್ತೆಗೆ ಚೆಲ್ಲುವ ಮೂಲಕ ಕೃತಕ ಅಭಾವ ಸೃಷ್ಠಿಸಿದ್ದರು. ಇದೀಗ ಸತತ 4 ದಿನ ಅಧಿಕಾರಿಗಳೊಂದಿಗೆ ದಿಲ್ಲಿಯಲ್ಲಿ ಕಾರ್ಯಾಚರಣೆ ನಡೆಸಿದ ಫಲವಾಗಿ ದಿಲ್ಲಿಯಲ್ಲಿ 15 ಸಾವಿರ ಲೀ.ನಂದಿನಿ ಹಾಲು ಮಾರಾಟವಾಗುತ್ತಿದೆ. ಕೆಂಎಂಎಫ್‌ನಿಂದ ಕೋಟಿ ಲೀ.ಹಾಲು ಉತ್ಪಾದನೆ ಗುರಿ ಸಾಧಿಸಲಾಗಿದೆ. ಹೊಸ ವರ್ಷದಿಂದ ರಾಜಸ್ಥಾನದ ಜೈಪುರ, ಗುಜರಾತ್‌ನಲ್ಲಿ ಸಂಕ್ರಾಂತಿಯಿಂದ ನಂದಿನಿ ಉತ್ಪನ್ನ ಮಾರಾಟವಾಗಲಿದೆ ಎಂದರು.

ಇದನ್ನೂ ಓದಿ: Pralhad Joshi: ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ನಂ.1