ಮೆಲ್ಬರ್ನ್: ಬಾರ್ಡರ್-ಗವಾಸ್ಕರ್(IND vs AUS) ಟ್ರೋಫಿಯ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ(jasprit bumrah) ಮತ್ತು ಆಸ್ಟ್ರೇಲಿಯಾದ ಹಿರಿಯ ಬ್ಯಾಟರ್ ಸ್ಟೀವನ್ ಸ್ಮಿತ್(steve smith) ದಾಖಲೆಯೊಂದರ ಸನಿಹಲದಲ್ಲಿದ್ದಾರೆ. ಡಿ.26ರಿಂದ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಒಟ್ಟು 6 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆಗೈದ ಭಾರತದ 6ನೇ ವೇಗಿ ಎನಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ 12ನೇ ಭಾರತೀಯ ಬೌಲರ್ ಆಗಲಿದ್ದಾರೆ. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ಮಾತ್ರ 200 ಪ್ಲಸ್ ವಿಕೆಟ್ ಕಿತ್ತಿದ್ದಾರೆ.
ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವನ್ ಸ್ಮಿತ್ ಕಳೆದ ಬ್ರಿಸ್ಬೇನ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದರು. ಇದೀಗ ನಾಲ್ಕನೇ ಟೆಸ್ಟ್‌ನಲ್ಲಿ ಸ್ಮಿತ್ 191 ರನ್ ಕಲೆ ಹಾಕಿದರೆ, ಟೆಸ್ಟ್‌ನಲ್ಲಿ 10 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ. ಈ ಮೈಲುಗಲ್ಲು ತಲುಪಿದ ಆಸ್ಟ್ರೇಯಾದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ಸ್ಮಿತ್ 112 ಟೆಸ್ಟ್ ಪಂದ್ಯಗಳನ್ನಾಡಿ 9809 ರನ್ ಬಾರಿಸಿದ್ದಾರೆ. ಅಲನ್ ಬಾರ್ಡರ್, ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಮಾತ್ರ ಆಸ್ಟ್ರೇಲಿಯಾದ ಆಟಗಾರನಾಗಿ 10,000 ಟೆಸ್ಟ್ ರನ್ ಗಳಿಸಿದ್ದಾರೆ.
ಎಂಸಿಜಿನಲ್ಲಿ ಭಾರತದ ದಾಖಲೆ
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾರತ ತಂಡ ಇಲ್ಲಿಯವರೆಗೂ ಆಡಿದ 14 ಟೆಸ್ಟ್ ಪಂದ್ಯಗಳಿಂದ ಕೇವಲ 4ರಲ್ಲಿ ಗೆದ್ದಿದ್ದು, ಎಂಟು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. 1948ರಲ್ಲಿ ಮೊಟ್ಟ ಮೊದಲ ಬಾರಿ ಭಾರತ ತಂಡ ಎಂಸಿಜಿನಲ್ಲಿ ಟೆಸ್ಟ್ ಆಡಿತ್ತು. ಈ ವೇಳೆ ಡೊನಾಲ್ಡ್ ಬ್ರಾಡ್‌ಮನ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಲಾಲ್ ಅಮರನಾಥ್ ಅವರ ನಾಯಕತ್ವದ ಭಾರತ 233 ರನ್‌ಗಳಿಂದ ಸೋಲು ಅನುಭವಿಸಿತ್ತು. 2014ರ ಬಳಿಕ ಭಾರತ ಎಂಸಿಜಿಯಲ್ಲಿ ಸೋತಿಲ್ಲ. ಒಂದರಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯಿಸಿದೆ.