Monday, 23rd December 2024

Kidnap Case: ಸುನೀಲ್ ಪಾಲ್, ಮುಷ್ತಾಕ್ ಖಾನ್ ಕಿಡ್ನಾಪ್‌ ಕೇಸ್‌; ಪ್ರಮುಖ ಆರೋಪಿ ಕಾಲಿಗೆ ಫೈರಿಂಗ್‌!

UP Horror

ಲಖನೌ: ಹಾಸ್ಯನಟ ಸುನೀಲ್ ಪಾಲ್ (Sunil Pal) ಮತ್ತು ನಟ ಮುಷ್ತಾಕ್ ಖಾನ್ (Mushtaq Khan)  ಅವರ ಅಪಹರಣ ಪ್ರಕರಣಗಳ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು ನಾಟಕೀಯ ಎನ್‌ಕೌಂಟರ್ ನಂತರ ಭಾನುವಾರ ಬಂಧಿಸಿದ್ದಾರೆ. ಆರೋಪಿಯನ್ನು ಲವಿ ಪಾಲ್ ಎಂದು ಗುರುತಿಸಲಾಗಿದ್ದು, ಆತ ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ನಂತರ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಆರೋಪಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ(Kidnap Case)

ವರದಿಗಳ ಪ್ರಕಾರ, ಪಾಲ್ ಮತ್ತು ಅವರ ಸಹಚರರು ಭಾನುವಾರ ರಾತ್ರಿ ಬಿಜ್ನೋರ್‌ನ ಮಂದಾವರ್ ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದರು. ಸುಳಿವು ಸಿಗುತ್ತಿದ್ದಂತೆ ಪೊಲೀಸರು ಬಲೆ ಬೀಸಿ ಇಬ್ಬರನ್ನು ಹಿಡಿದಿದ್ದಾರೆ. ಆದರೆ, ಆರೋಪಿಗಳು ಪೊಲೀಸರತ್ತ ಗುಂಡು ಹಾರಿಸಿದ್ದು, ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿ ಪಾಲ್‌ ಬಲಗಾಲಿಗೆ ಗುಂಡು ತಗುಲಿದೆ.

ಬಿಜ್ನೋರ್‌ನ ಪೊಲೀಸ್ ಅಧೀಕ್ಷಕ ಸಂಜೀವ್ ಬಾಜ್‌ಪೈ ಮಾಧ್ಯಮಗಳಿಗೆ ಮಾಹಿತಿ ನೀಡಿ, “ನಾವು ಲವಿ ಪಾಲ್ ಬಳಿಯಿಂದ 35,000 ರೂ ಜೊತೆಗೆ ಒಂದು ದೇಶ ನಿರ್ಮಿತ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಮೀರತ್ ಮತ್ತು ಬಿಜ್ನೋರ್ ಪೊಲೀಸರು ಈಗಾಗಲೇ ಗ್ಯಾಂಗ್‌ನ ಆರು ಸದಸ್ಯರನ್ನು ಬಂಧಿಸಿದ್ದಾರೆ ಮತ್ತು ಬಂಧಿತ ಗ್ಯಾಂಗ್ ಸದಸ್ಯರಿಂದ ಇದುವರೆಗೆ 4 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಪಾಲ್‌ನನ್ನು ಪ್ರಸ್ತುತ ಬಿಜ್ನೋರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನ ಮೇಲೆ ದರೋಡೆಕೋರ ಕಾಯಿದೆಯಡಿ, ಅಪಹರಣ ಮತ್ತು ಸುಲಿಗೆಗಾಗಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಗ್ಯಾಂಗ್‌ ನಟರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಂತರ ಅವರನ್ನು ಅಪಹರಿಸಿ ಅವರಿಂದ ಹಣ ಕೀಳುವ ಕೆಲಸವನ್ನು ಮಾಡುತ್ತಿದ್ದರು. ಬಾಲಿವುಡ್‌ ನಟ ಶಕ್ತಿ ಕಪೂರ್‌ ಅವರನ್ನು ಇವರು ಅಪಹರಿಸಲು ಯೋಜನೆ ಹಾಕಿಕೊಂಡಿದ್ದರು ಎಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಈ ಸುದ್ದಿಯನ್ನೂ ಓದಿ : Bihar Teacher Kidnapped: ಶಿಕ್ಷಕನ ಅಪಹರಣ; ಬಂದೂಕು ತೋರಿಸಿ ಮದುವೆ ಮಾಡಿಸಿದ ಯುವತಿಯ ಪೋಷಕರು!