ನವದೆಹಲಿ: ಮಾಜಿ ಐಎಎಸ್ ತರಬೇತಿ ಅಧಿಕಾರಿ ಪೂಜಾ ಖೇಡ್ಕರ್‌ಗೆ (Puja Khedkar) ನಿರೀಕ್ಷಣಾ ಜಾಮೀನು ನೀಡಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ. ಯುಪಿಎಸ್‌ಎ ಪರೀಕ್ಷೆಯಲ್ಲಿ ಒಬಿಸಿ ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪದಡಿಯಲ್ಲಿ ಪೂಜಾ ಖೇಡ್ಕರ್ ಅವರನ್ನು ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.
ಸೋಮವಾರ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ದಿಲ್ಲಿ ಹೈಕೋರ್ಟ್,”ದೊಡ್ಡ ಮಟ್ಟದಲ್ಲಿ ವಂಚನೆ ಮಾಡಲು ಅವರು (ಪೂಜಾ ಖೇಡ್ಕರ್) ಪ್ರಯತ್ನ ನಡೆಸಿದ್ದಾರೆ ಹಾಗೂ ವಂಚನೆಯು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಇದನ್ನು ಗಮನಿಸಿದರೆ, ಪೂಜಾ ಖೇಡ್ಕರ್ ನೇಮಕಗೊಳ್ಳಲು ಅನರ್ಹರಾಗಿದ್ದಾರೆ,” ಎಂದು ತಿಳಿಸಿದೆ.
“ಯುಪಿಎಸ್‌ಸಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾತ್ರ ವಂಚನೆ ನಡೆದಿಲ್ಲ, ಇದು ರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ದೊಡ್ಡ ವಂಚನೆ,” ಎಂದು ಸೋಮವಾರ ದಿಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಾಧೀಶ ಚಂದ್ರ ಧರಿ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಅರ್ಜಿದಾರರ ನಡವಳಿಕೆಯು ಸಂಪೂರ್ಣವಾಗಿ ದೂರುದಾರ ಯುಪಿಎಸ್‌ಸಿ ಅಥವಾ ನಾಗರೀಕ ಸೇವಾ ಕಮಿಷನ್ ಅನ್ನು ವಂಚಿಸುವ ಉದ್ದೇಶದಿಂದ ನಡೆಸಲ್ಪಟ್ಟಿದೆ ಮತ್ತು ಆಕೆಯಿಂದ ನಕಲಿಯಾಗಿರುವ ಎಲ್ಲಾ ದಾಖಲೆಗಳನ್ನು ಸಮಾಜದ ಹಿಂದುಳಿದ ಗುಂಪುಗಳಿಗೆ ಉದ್ದೇಶಿಸಿರುವ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೂಪಿಸಲಾಗಿದೆ,” ನ್ಯಾಯಾಲಯ ತಿಳಿಸಿದೆ.
“ಅರ್ಜಿದಾರರು (ಪೂಜಾ ಖೇಡ್ಕರ್) ಹಿಂದುಳಿದ ವರ್ಗಗಳಿಗೆ ಮೀಸಲಾದ ಪ್ರಯೋಜನಗಳನ್ನು ಪಡೆಯಲು ಅರ್ಹ ಅಭ್ಯರ್ಥಿಯಲ್ಲ ಎಂದು ಈ ಪ್ರಕರಣದ ಪ್ರಾಥಮಿಕ ತನಿಖೆಯಿಂದ ಲಭ್ಯವಿರುವ ದಾಖಲೆಗಳು ತಿಳಿಸುತ್ತವೆ,” ಎಂದು ಕೋರ್ಟ್ ಹೇಳಿದೆ.
“ನಾಗರೀಕ ಸೇವಾ ಹುದ್ದೆಯನ್ನು ಪಡೆಯುವ ಸಲುವಾಗಿ ಒಬಿಸಿ ಮತ್ತು ಅಂಗವೈಕಲ್ಯ ದಾಖಲೆಗಳನ್ನು ಪಡೆಯಲು ಪೂಜಾ ಖೇಡ್ಕರ್ ಅಥವಾ ಅವರ ಕುಟುಂಬದ ಸದಸ್ಯರು ಸರ್ಕಾರಿ ಅಧಿಕಾರಿಗಳೊಂದಿಗೆ ಒಪ್ಪಂಧ ಮಾಡಿಕೊಂಡಿರುವ ಸಾಧ್ಯತೆ ಇರಬಹುದು. ಈ ಸಂಬಂಧ ಕೂಡ ತನಿಖೆಯನ್ನು ನಡೆಸುವ ಸಾಧ್ಯತೆ ಇದೆ,” ಎಂದು ನ್ಯಾಯಾಲಯ ತಿಳಿಸಿದೆ.
ಏನಿದು ಪ್ರಕರಣ?
ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಪಟ್ಟಾದ್ರಿ ತೆಹ್ಸಿಲ್‌ನ ದಿಲೀಪ್ ರಾವ್ ಖೇಡ್ಕರ್ ಅವರ ಪುತ್ರಿ ಪೂಜಾ ಖೇಡ್ಕರ್ ಅವರು 2020-21ರ ಸಾಲಿನ ಒಬಿಸಿ ಕೋಟಾದಡಿ ‘ಪೂಜಾ ದಿಲೀಪ್‌ರಾವ್ ಖೇಡ್ಕರ್’ ಎಂಬ ಹೆಸರಿನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ತಮ್ಮ ಎಲ್ಲಾ ಪ್ರಯತ್ನಗಳನ್ನು ಮುಗಿಸಿದ ನಂತರ, ಅವರು ಒಬಿಸಿ ಮತ್ತು ಪಿಡಬ್ಲ್ಯೂಬಿಡಿ ಕೋಟಾದಡಿ 2021-22ರ ಸಾಲಿನ ಯುಪಿಎಸ್‌ಸಿ ಪರೀಕ್ಷೆಗೆ ‘ಪೂಜಾ ಮನೋರಮಾ ದಿಲೀಪ್ ಖೇಡ್ಕರ್ʼ ಹೆಸರಿನಲ್ಲಿ ಹಾಜರಾಗಿದ್ದರು. ಅದರಂತೆ ಈ ಪರೀಕ್ಷೆಯಲ್ಲಿ ಅವರು 821ನೇ ಶ್ರೇಯಾಂಕ ಪಡೆದು ಉತ್ತೀರ್ಣರಾಗಿದ್ದರು.
ಸೆಪ್ಟಂಬರ್ 6 ರಂದು ಸೇವೆಯಿಂದ ವಜಾ
ಆದರೆ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಒಬಿಸಿ ಮತ್ತು ಅಂಗವೈಕಲ್ಯ ಕೋಟಾ ಪ್ರಯೋಜನಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪೂಜಾ ಖೇಡ್ಕರ್ ಅವರನ್ನು ಸೆಪ್ಟಂಬರ್ 6 ರಂದು ಭಾರತೀಯ ಆಡಳಿತ ಸೇವೆಯಿಂದ (ಐಎಎಸ್) ಸರ್ಕಾರ ವಜಾ ಮಾಡಲಾಗಿತ್ತು. ಇದಕ್ಕೂ ಮುನ್ನ ಅವರು ಪುಣೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಸಹಾಯಕ ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ದೈಹಿಕ ವಿಕಲಚೇತನರ ವಿಭಾಗದಲ್ಲಿ ತಪ್ಪಾಗಿ ನಿರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾಯಿಸಲಾಗಿತ್ತು.
ಈ ಸುದ್ದಿಯನ್ನು ಓದಿ: Puja Khedkar : ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಜಾಗೊಳಿಸಿದ ಕೇಂದ್ರ ಸರ್ಕಾರ