ಜೊಹಾನ್ಸ್‌ಬರ್ಗ್: ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ(SA VS PAK) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದೆ. ವಿಶ್ವದ ಬಲಿಷ್ಠ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಸೇರಿದಂತೆ ಯಾವುದೇ ತಂಡಕ್ಕೂ ದಕ್ಷಿಣ ಆಫ್ರಿಕಾವನ್ನು ಇದುವರೆಗೂ ತವರಿನಲ್ಲಿ ಕ್ಲೀನ್‌ಸ್ವೀಪ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪಾಕಿಸ್ತಾನ ಈ ಸಾಧನೆಗೈದಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಗೆದ್ದು ಈ ಸಾಧನೆಗೈದ ವಿಶ್ವ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ.
ಇಲ್ಲಿನ ವಾಂಡರರ್ ಸ್ಟೇಡಿಯಂನಲ್ಲಿ ನಡೆದ ಮಳೆ ಪೀಡಿದ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಯುವ ಬ್ಯಾಟರ್ ಸೈಮ್ ಆಯುಬ್ ಬಾರಿಸಿದ ಸೊಗಸಾದ ಶತಕದ ನೆರವಿನಿಂದ 47 ಓವರ್‌ಗೆ 9 ವಿಕೆಟ್‌ಗೆ 308 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 271 ರನ್‌ಗೆ ಸರ್ವಪತನ ಕಂಡಿತು. ಸರಣಿಯಲ್ಲಿ 2 ಶತಕ ಬಾರಿಸಿ ಮಿಂಚಿದ ಸೈಮ್ ಆಯುಬ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ IND vs AUS: ದಾಖಲೆ ಸನಿಹ ಬುಮ್ರಾ, ಸ್ಮಿತ್
ಅಂತಿಮ ಪಂದ್ಯದಲ್ಲಿ ಸೈಮ್ ಆಯುಬ್ ಎರಡು ಸಿಕ್ಸರ್ ಹಾಗೂ 13 ಬೌಂಡರಿಗಳೊಂದಿಗೆ 101 ರನ್‌ಗಳನ್ನು ಕಲೆ ಹಾಕಿದರು. ಇದಕ್ಕೂ ಮುನ್ನ ಅವರು ಮೊದಲನೇ ಏಕದಿನ ಪಂದ್ಯದಲ್ಲಿ 109 ರನ್ ಬಾರಿಸಿ ಚೊಚ್ಚಲ ಏಕದಿನ ಶತಕ ಸಂಭ್ರಮಿಸಿದ್ದರು. ಸದ್ಯ ಆಯುಬ್ ಪಾಕ್ ತಂಡದ ಉದಯೋನ್ಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಕ್ರಿಕೆಟ್‌ನಲ್ಲಿ ಹಲವು ಶತಕಗಳನ್ನು ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ವಿಶೇಷ ದಾಖಲೆಯನ್ನು ಸೈಮ್ ಆಯುಬ್ ಬರೆದಿದ್ದಾರೆ. ಪಾಕಿಸ್ತಾನ ತಂಡದ 22ನೇ ವಯಸ್ಸಿನ ಸೈಮ್ ಆಯುಬ್ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಶತಕಗಳನ್ನು ಸಿಡಿಸಿದ್ದಾರೆ. ಇದಕ್ಕೂ ಮುನ್ನ 22ನೇ ವಯಸ್ಸಿನಲ್ಲಿ ಅಬ್ದುಲ್ ಶಫಿಕ್, ಕೇನ್ ವಿಲಿಯಮ್ಸನ್ ಹಾಗೂ ರೆಹಮಾನುಲ್ಹಾ ಗುರ್ಬಾಝ್ ಅವರು ದಕ್ಷಿಣ ಆಫ್ರಿಕಾ ವಿರುದ್ದ ಶತಕಗಳನ್ನು ಸಿಡಿಸಿದ್ದರು. ಆದರೆ, ಸೈಮ್ ಆಯುಬ್ ಅವರು ಎರಡು ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.