Monday, 23rd December 2024

New year Celebration: ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಮತ್ತಷ್ಟು ಬಿಗಿ: ಜಿ.ಪರಮೇಶ್ವರ್

happy new year 2025

ಬೆಂಗಳೂರು: ರಾಜಧಾನಿಯಲ್ಲಿ ನೂತನ ವರ್ಷದ ಮೊದಲ ದಿನವನ್ನು ಸ್ವಾಗತಿಸುವ (New year Celebration) ಹೊತ್ತು ಯಾವಾಗಲೂ ರಂಗುರಂಗಾಗಿರುತ್ತದೆ. ಇನ್ನೇನು ಕೇವಲ ಒಂದು ವಾರದಲ್ಲಿ ಹೊಸ ವರ್ಷಾಚರಣೆ ಸಮೀಪಿಸಿದೆ. ಎಂಜಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆಗಳು (Brigade Road) ಯುವಜನರಿಂದ ತುಂಬಿ ಥಳಥಳಿಸುತ್ತವೆ. ಇಲ್ಲಿ ಅಹಿತಕರ ಘಟನೆಗಳು ಸಂಭವಿಸುವುದು ಸಾಮಾನ್ಯ. ಹಾಗಾಗದಂತೆ ಬಿಗಿ ಕ್ರಮಗಳನ್ನು ಈ ಬಾರಿ ಕೈಗೊಳ್ಳಲಾಗಿದೆಯಂತೆ.

ಬೆಂಗಳೂರಿನಲ್ಲಿ ನ್ಯೂ ಇಯರ್‌ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್‌ ಕೈಗೊಳ್ಳುವಂತೆ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಯ ದಿನ ಯಾವುದೇ ಅಹಿತಕರ ಘಟನೆ ಆಗಬಾರದು. ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ರೀತಿಯ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಸಭೆ ನಡೆಸಲಾಗಿದೆ. ಮಹಿಳಾ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.

ಈ ಬಗ್ಗೆ ಸಭೆ ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ನಗರದಲ್ಲಿ 7 ಲಕ್ಷ ಜನ ಮಿಡ್ ನೈಟ್ ಸೆಲೆಬ್ರೇಶನ್‌ನಲ್ಲಿ ಭಾಗಿಯಾಗುತ್ತಾರೆ. ಏನೇ ಅಹಿತಕರ ಘಟನೆ ನಡೆದರೂ ಆ ಏರಿಯಾ ಡಿಸಿಪಿ ಹೊಣೆಯಾಗಲಿದ್ದಾರೆ. ಟ್ರಾಫಿಕ್ ನಿರ್ವಹಣೆಯ ಸಮಸ್ಯೆ ಆಗದಂತೆ ಮೆಟ್ರೋ, ಆಟೋಗಳು ಮತ್ತು ಬಸ್ಸುಗಳ ಓಡಾಟ ಸೇರಿದಂತೆ ಹಲವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗೆ ನಿರ್ಬಂಧ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಎಂಜಿ ರೋಡ್, ಕೋರಮಂಗಲ ಸೇರಿದಂತೆ ಎಲ್ಲೆಲ್ಲಿ ಜನದಟ್ಟಣೆ ಇರುತ್ತದೊ ಅಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೊಸ ವರ್ಷಾಚರಣೆಗೆ ಅವರ ಸಂತೋಷಕ್ಕೆ ಅಡ್ಡಿಯಾಗಬಾರದು ಎಂದು ಈಗಾಗಲೇ ಈ ಕುರಿತು ಕ್ರಮ ಕೈಗೊಳ್ಳಲು ಸಭೆ ನಡೆಸಲಾಗಿದೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚು ಗಮನ ಹರಿಸಲಾಗುತ್ತಿದೆ. ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಅದರಲ್ಲೂ ಪ್ರಮುಖವಾಗಿ ಡ್ರಗ್ಸ್ ಕುರಿತಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

ಇದನ್ನೂ ಓದಿ: Money Tips: ಹೊಸ ವರ್ಷದಲ್ಲಿ ಶ್ರೀಮಂತರಾಗಲು ಏನು ಮಾಡಬೇಕು? ಇಲ್ಲಿದೆ Step-by-step guide!