ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸೋಮವಾರ ಸಭೆ ನಡೆಸಿದರು. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ವತಿಯಿಂದ 13 ಹಳ್ಳಿಗಳ ವ್ಯಾಪ್ತಿಯಲ್ಲಿ 1777 ಎಕರೆ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿರುವುದರಿಂದ ಹೊಸದಾಗಿ ಭೂಸ್ವಾಧೀನ ನಡೆಸಬಾರದು ಎಂದು ರೈತರು ಮನವಿ ಮಾಡಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎನ್ನುವ ರೈತರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, 430 ಎಕರೆ ಜಮೀನು ಭೂಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಅಂತಿಮ ಅಧಿಸೂಚನೆ ಆಗಿರುವ ಜಮೀನು ವಾಪಾಸು ಪಡೆಯಲು ಸಾಧ್ಯವಿಲ್ಲ. ಸರ್ಕಾರ ರೈತರ ಪರವಾಗಿದ್ದು, ಈ ವಿಷಯದ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ಭರವಸೆ ನೀಡಿದರು.
ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಸಹ ಪಡೆದುಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಈ ವೇಳೆ ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ ನಾರಾಯಣಸ್ವಾಮಿ, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಸೇರಿ ಹಿರಿಯ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Laxmi Hebbalkar: ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೊ ರಿಲೀಸ್ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್
ರಾಜ್ಯದಲ್ಲಿ 9,823 ಕೋಟಿ ರೂ. ಹೂಡಿಕೆಗೆ ಸಿಎಂ ನೇತೃತ್ವದ ಸಮಿತಿ ಒಪ್ಪಿಗೆ ; 5,605 ಉದ್ಯೋಗ ಸೃಷ್ಟಿ
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು 9,823 ಕೋಟಿ ರೂ. ಮೊತ್ತ ಹೂಡಿಕೆಯ 9 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 64ನೇ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಇದರಿಂದ ಸುಮಾರು 5605 ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಮೆ.ಡಿ.ಎನ್ ಸಲ್ಯೂಷನ್ಸ್ ಇಂಡಿಯಾ ಪ್ರೈ.ಲಿ ಸಂಸ್ಥೆಯ 998 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 467 ಉದ್ಯೋಗ , ಮೆ. ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಪ್ರೈ.ಲಿ ಸಂಸ್ಥೆಯ 3425.60 ಕೋಟಿ ರೂ. ಹೂಡಿಕೆಯಿಂದ 460 ಉದ್ಯೋಗ ಹಾಗೂ ಮೆ: ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ 2150 ಕೋಟಿ ರೂ. ಹೂಡಿಕೆಯಿಂದ 3500 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ತಿಳಿಸಿದರು.
ಇನ್ನು ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ 3425 ಕೋಟಿ ರೂ. ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಇನ್ನು ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಲಾಭಾಂಶದಲ್ಲಿ ಪಾಲು ನೀಡುವ ಕುರಿತು ಪರಿಶೀಲನೆ ನಡೆಸಬೇಕು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಕುರಿತು ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸಲು ಸೂಚನೆ ನೀಡಿದರು.
ಕೆಐಎಡಿಬಿಯಿಂದ ಕೈಗಾರಿಕೆಗಳನ್ನು ಆರಂಭಿಸಲು ಜಮೀನು ಪಡೆಯುವ ಕಂಪೆನಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ ವಿಧಿಸುವುದು ಸೇರಿ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಬೇಕು. ಸರ್ಕಾರದ ನಿಯಮಾವಳಿಗೆ ಅನುಸಾರವಾಗಿ ಕೈಗಾರಿಕೆಗಳು ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ಮುಖ್ಯಮಂತ್ರಿ ಅವರು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಚೆಲುವರಾಯಸ್ವಾಮಿ, ಪ್ರಿಯಾಂಕ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್ ಕೆ ಅತೀಕ್, ವಾಣಿಜ್ಯ ಮತ್ರು ಕೈಗಾರಿಕಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.
ಈ ಸುದ್ದಿಯನ್ನೂ ಓದಿ | Laxmi Hebbalkar: ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೊ ರಿಲೀಸ್ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್