Monday, 23rd December 2024

IND vs AUS: ಕೊನೆಯ 2 ಟೆಸ್ಟ್‌ಗಳ ಭಾರತ ತಂಡಕ್ಕೆ ಸೇರ್ಪಡೆಯಾದ ತನುಷ್‌ ಕೋಟ್ಯಾನ್‌!

IND vs AUS: Mumbai all-rounder Tanush Kotian added to India's squad for Melbourne, Sydney Tests

ನವದೆಹಲಿ: ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ಕೊನೆಯ ಎರಡು ಪಂದ್ಯಗಳ ನಿಮಿತ್ತ ಭಾರತ ತಂಡಕ್ಕೆ ಮುಂಬೈ ಆಲ್‌ರೌಂಡರ್‌ ತನುಷ್‌ ಕೋಟ್ಯಾನ್‌ (Tanush Kotian) ಸೇರ್ಪಡೆಯಾಗಿದ್ದಾರೆ. ಡಿಸೆಂಬರ್‌ 26 ರಂದು ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೂ ಮುನ್ನ ಅವರು ಭಾರತ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರುಮಂಗಳವಾರ ಮೆಲ್ಬರ್ನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಭಾರತದ ಮಾಜಿ ಸ್ಪಿನ್‌ ಆಲ್‌ರೌಂಡರ್‌ ರವಿಚಂದ್ರನ್‌ ಅಶ್ವಿನ್‌ ಅವರು ಮೂರನೇ ಹಾಗೂ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ 26ನೇ ವಯಸ್ಸಿನ ಸ್ಪಿನ್‌ ಆಲ್‌ರೌಂಡರ್‌ ಅವರನ್ನು ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಎರಡು ಪಂದ್ಯಗಳ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದಿದ್ದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ತನುಷ್‌ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಅವರು ಬೌಲ್‌ ಮಾಡಿದ್ದ 10 ಓವರ್‌ಗಳಲ್ಲಿ ಕೇವಲ 38 ರನ್‌ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಮುಂಬೈ ತಂಡ ಮೂರು ವಿಕೆಟ್‌ಗಳಿಂದ ಗೆಲುವು ಪಡೆಯಿತು.

ತನುಷ್‌ ಕೋಟ್ಯಾನ್‌ರ ಅಂಕಿ ಅಂಶಗಳು

ಕರ್ನಾಟಕದ ಉಡುಪಿ ಜಿಲ್ಲೆಯ ತನುಷ್‌ ಕೋಟ್ಯಾನ್‌ ಅವರು ಹಲವು ವರ್ಷಗಳಿಂದ ಮುಂಬೈ ತಂಡದ ಪರ ದೇಶಿ ಕ್ರಿಕೆಟ್‌ ಆಡುತ್ತಿದ್ದಾರೆ. ಅವರು ಆಫ್‌ ಸ್ಪಿನ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಈಗಾಗಲೇ ಭಾರತ ತಂಡದಲ್ಲಿರುವ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಒಳಗೊಂಡಿರುವ ಸ್ಪಿನ್‌ ವಿಭಾಗಕ್ಕೆ ಮೀಸಲು ಸ್ಪಿನ್ನರ್‌ ಆಗಿ ತನುಷ್‌ ಸೇರ್ಪಡೆಯಾಗಲಿದ್ದಾರೆ.

ತನುಷ್‌ ಕೋಟ್ಯಾನ್‌ ಅವರು 33 ಪ್ರಥಮ ದರ್ಜೆ ಪಂದ್ಯಗಳಿಂದ ಇಲ್ಲಿಯವರೆಗೂ 101 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಇವರು ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ಮೂರು ಬಾರಿ 5 ವಿಕೆಟ್‌ ಸಾಧನೆ ಹಾಗೂ ಐದು ಬಾರಿ 4 ವಿಕೆಟ್‌ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿರುವ ತನುಷ್‌ ಕೋಟ್ಯಾನ್‌ ಅವರು ಎರಡು ಶತಕಗಳು ಹಾಗೂ 13 ಅರ್ಧಶತಕಗಳೊಂದಿಗೆ 1525 ರನ್‌ಗಳನ್ನು ಕಲೆ ಹಾಕಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ ಪರ ಆಡಿದ್ದ ತನುಷ್‌

ಕಳೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌ 2024) ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ತನುಷ್‌ ಕೋಟ್ಯಾನ್‌ ಪ್ರತಿನಿಧಿಸಿದ್ದರು. ಆದರೆ, ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇನ್ನು ಇತ್ತೀಚೆಗೆ ನಡೆದಿದ್ದ 2025ರ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ಕನ್ನಡಿಗನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಈ ಸುದ್ದಿಯನ್ನು ಓದಿ: IND vs AUS: ದಾಖಲೆ ಸನಿಹ ಬುಮ್ರಾ, ಸ್ಮಿತ್‌