Monday, 23rd December 2024

Vinod Kambli: ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು!

Vinod Kambli Faces Major Health Scare; Admitted To Thane Hospital In 'Critical Condition'

ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ವಿನೋದ್‌ ಕಾಂಬ್ಳಿ (Vinod Kambli) ಅವರ ಆರೋಗ್ಯ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಐಎಎನ್‌ಎಸ್‌ ವರದಿ ಮಾಡಿದೆ. ಅವರು ಇತ್ತೀಚೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ತಮ್ಮ ಹಾಗೂ ಬಾಲ್ಯದ ಗೆಳೆಯ ಸಚಿನ್‌ ತೆಂಡೂಲ್ಕರ್‌ ಕೋಚ್‌ ರಮಾಕಾಂತ್‌ ಆರ್ಚೇಕರ್‌ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅಂದ ಹಾಗೆ ಇತ್ತೀಚೆಗೆ ವರ್ಷಗಳಲ್ಲಿ ವಿನೋದ್‌ ಕಾಂಬ್ಳಿ ಅವರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

52ನೇ ವಯಸ್ಸಿನ ವಿನೋದ್‌ ಕಾಂಬ್ಳಿ ಅವರು ತಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ಶನಿವಾರ ರಾತ್ರಿ ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಐಎಎನ್‌ಎಸ್‌ ವರೆದಿ ಮಾಡಿದೆ. ಅಂದ ಹಾಗೆ ಮಾಜಿ ಕ್ರಿಕೆಟಿಗನ ಆರೋಗ್ಯದ ಸಂಪೂರ್ಣ ವರದಿ ಬಂದ ಬಳಿಕ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

ವಿನೋದ್‌ ಕಾಂಬ್ಳಿ ಸಹಾಯಕ್ಕೆ ನಿಂತ 1983ರ ವಿಶ್ವಕಪ್‌ ವಿಜೇತ ತಂಡ

ಇತ್ತೀಚೆಗೆ ಮುಂಬೈನಲ್ಲಿ ರಮಾಕಾಂತ್‌ ಆರ್ಚೇಕರ್‌ ಅವರ ಕಾರ್ಯಕ್ರಮದಲ್ಲಿ ವಿನೋದ್‌ ಕಾಂಬ್ಳಿ ಭಾಗವಹಿಸಿದ್ದರು ಹಾಗೂ ಈ ವೇಳೆ ಅವರು ಅನಾರೋಗ್ಯದಿಂದ ಇರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರು, 1983ರ ಏಕದಿನ ವಿಶ್ವಕಪ್‌ ಭಾರತ ತಂಡದ ಸದಸ್ಯರು ವಿನೋದ್‌ ಕಾಂಬ್ಳಿಗೆ ನೆರವು ನೀಡುವುದಾಗಿ ತಿಳಿಸಿದ್ದರು. ಇದಕ್ಕೂ ಮುನ್ನ ಮಾಜಿ ನಾಯಕ ಕಪಿಲ್‌ ದೇವ್‌ ಅವರು ಕೂಡ ಇದೇ ಮಾತನ್ನು ಹೇಳಿದ್ದರು.

ತಮ್ಮ ಆರೋಗ್ಯದ ಸ್ಥಿತಿ ಬಗ್ಗೆ ರಿವೀಲ್‌ ಮಾಡಿದ್ದ ವಿನೋದ್‌ ಕಾಂಬ್ಳಿ

ವಿಕ್ಕಿ ಲಾಲ್ವಾನಿ ಅವರ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ್ದ ವಿನೋದ್‌ ಕಾಂಬ್ಳಿ ಅವರು ತಮಗೆ ಮೂತ್ರದ ಸಮಸ್ಯೆಯಿಂದ ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಬಹಿರಂಗಪಡಿಸಿದ್ದರು.

“ನಾನು ಮೂತ್ರದ ಸಮಸ್ಯೆಯನ್ನು ಎದುರಿಸಿದ್ದೆ ಹಾಗೂ ಸುಮ್ಮನೆ ಸುರಿಯುತ್ತಿತ್ತು. ಈ ವೇಳೆ ನನ್ನ ಮಗ ಜೇಸನ್‌ ಕ್ರಿಸ್ಟಿಯಾನೊ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮತ್ತೆ ಮನೆಗೆ ತಂದುಬಿಟ್ಟಿದ್ದ. ನನ್ನ 10 ವರ್ಷದ ಮಗಳು ಹಾಗೂ ನನ್ನ ಪತ್ನಿ ಕೂಡ ನನಗೆ ನೆರವಿಗೆ ಬಂದಿದ್ದರು. ಇದೆಲ್ಲಾ ನಡೆದಿದ್ದು ಒಂದು ತಿಂಗಳ ಹಿಂದೆ. ನನಗೆ ತಲೆ ತಿರುಗುತ್ತಿತ್ತು ಹಾಗೂ ನೆಲಕ್ಕೆ ಉರುಳಿ ಬಿದ್ದಿದೆ. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು,” ಎಂದು ವಿನೋದ್‌ ಕಾಂಬ್ಳಿ ಸಂದರ್ಶನದಲ್ಲಿ ತಿಳಿಸಿದ್ದರು.

2013ರಲ್ಲಿ ವಿನೋದ್‌ ಕಾಂಬ್ಳಿ ಅವರು ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಹಾಗೂ ಈ ವೇಳೆ ಸಚಿನ್‌ ತೆಂಡೂಲ್ಕರ್‌ ಅವರು ಆರ್ಥಿಕ ಸಹಾಯ ಮಾಡಿದ್ದರು. ತಮ್ಮ 9 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಬಾಲ್ಯದ ಗೆಳೆಯ ವಿನೋದ್‌, ಭಾರತ ತಂಡದ ಪರ 17 ಟೆಸ್ಟ್‌ಗಳು, 104 ಒಡಿಐ ಪಂದ್ಯಗಳನ್ನು ಆಡಿದ್ದಾರೆ. ಎರಡು ದ್ವಿಶತಕ ಸೇರಿದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು ನಾಲ್ಕು ಶತಕಗಳನ್ನು ಅವರು ಸಿಡಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ಎರಡು ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೂಡ ವಿನೋದ್‌ ಕಾಂಬ್ಳಿ ಅವರ ಹೆಸರಿನಲ್ಲಿದೆ.

ಈ ಸುದ್ದಿಯನ್ನು ಓದಿ: Vinod Kambli ನನ್ನ ಮಗನಿದ್ದಂತೆ, ಅವರನ್ನು ನೋಡಿಕೊಳ್ಳುತ್ತೇವೆ: ಸುನೀಲ್‌ ಗವಾಸ್ಕರ್‌!