Tuesday, 24th December 2024

Shyam Benegal: ಖ್ಯಾತ ಚಿತ್ರನಿರ್ಮಾಪಕ ಶಾಮ್‌ ಬೆನಗಲ್‌ ಇನ್ನಿಲ್ಲ

Shyam_Benegal

ನವದೆಹಲಿ: ಅಂಕುರ್‌, ಮಂಥನ್‌ ಮುಂತಾದ ಖ್ಯಾತ ಚಲನಚಿತ್ರಗಳನ್ನು ನಿರ್ಮಿಸಿದ ದೇಶದ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶ್ಯಾಮ್ ಬೆನಗಲ್ (Shyam Benegal) ಇಂದು ( ಡಿಸೆಂಬರ್ 23) ಸಂಜೆ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ 6.30ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಅವರ ಮಗಳು ಪಿಯಾ ಬೆನೆಗಲ್ ಖಚಿತಪಡಿಸಿದ್ದಾರೆ.

ಹಿಂದಿ ಚಿತ್ರೋದ್ಯಮದ ಮೇಲೆ ಶ್ಯಾಮ್ ಬೆನಗಲ್ ಅವರ ಪ್ರಭಾವ ಅಪ್ರತಿಮ. ಭಾರತೀಯ ಚಿತ್ರರಂಗದ ಅತ್ಯುನ್ನತ ವ್ಯಕ್ತಿ ಮತ್ತು ಸಮಾನಾಂತರ ಸಿನಿಮಾ ಚಳುವಳಿಯ ರೂವಾರಿ ಇವರು. ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಜುನೂನ್’ ಮತ್ತು ‘ಮಂಡಿ’ ಮುಂತಾದ ಅದ್ಭುತ ಚಿತ್ರಗಳನ್ನು ನಿರ್ಮಿಸಿದವರು ಶಾಮ್‌ ಬೆನಗಲ್.‌ ಸಿನಿಮಾ ಕ್ಷೇತ್ರಕ್ಕೆ ಅವರ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 18 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಗಿದೆ. ಅವರಿಗೆ 1976 ರಲ್ಲಿ ಪದ್ಮಶ್ರೀ, 1991ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.

ಕನ್ನಡದ ಖ್ಯಾತ ನಟರಾದ ಅನಂತನಾಗ್, ಗಿರೀಶ್‌ ಕಾರ್ನಾಡ್‌ ಮೊದಲಾದವರ ನಟನೆಯ ಮೊದಮೊದಲ ದಿನಗಳಲ್ಲಿ ಶಾಮ್‌ ಬೆನಗಲ್‌ ಅವರ ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದರು. ಶ್ಯಾಮ್ ಬೆನಗಲ್ ಅಂಕುರ್ (1974) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಅನಂತ್ ನಾಗ್ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರ ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಎರಡನೇ ಅತ್ಯುತ್ತಮ ಚಲನಚಿತ್ರ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರ ಮೂರನೇ ಚಲನಚಿತ್ರ ನಿಶಾಂತ್ (1975) ಇನ್ನೂ ದೊಡ್ಡ ಮೈಲಿಗಲ್ಲು. 1976ರ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪಾಮ್ ಡಿ’ಓರ್‌ಗೆ ನಾಮನಿರ್ದೇಶನಗೊಂಡಿತು. ಗಿರೀಶ್ ಕಾರ್ನಾಡ್, ಶಬಾನಾ ಅಜ್ಮಿ, ಅನಂತ್ ನಾಗ್, ಅಮರೀಶ್ ಪುರಿ, ಸ್ಮಿತಾ ಪಾಟೀಲ್ ಮತ್ತು ನಾಸಿರುದ್ದೀನ್ ಶಾ ಅವರಂತಹ ಮಹಾಪ್ರತಿಭೆಗಳು ಅದರಲ್ಲಿದ್ದವು. ಈ ಚಿತ್ರವು ಚಲನಚಿತ್ರ ನಿರ್ಮಾಣದಲ್ಲಿ ಅವರ ಪಾಂಡಿತ್ಯಕ್ಕೆ ಸಾಕ್ಷಿ.