Tuesday, 24th December 2024

IND vs AUS: ಮೆಲ್ಬರ್ನ್‌, ಸಿಡ್ನಿ ಟೆಸ್ಟ್‌ಗಳಿಗೆ ಮೊಹಮ್ಮದ್‌ ಶಮಿ ಅಲಭ್ಯ! ಕಾರಣ ಏನು?

IND vs AUS: ʻMohammed Shami deemed not fit for Melbourne, Sydney Tests vs Australiaʼ,says BCCI

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ಕೊನೆಯ ಎರಡು ಪಂದ್ಯಗಳಿಗೆ ಹಿರಿಯ ವೇಗಿ ಮೊಹಮ್ಮದ್‌ ಶಮಿ ಲಭ್ಯರಾಗುವುದಿಲ್ಲ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಸ್ಪಷ್ಟಪಡಿಸಿದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಬಳಿಕ ಮೊಹಮ್ಮದ್‌ ಶಮಿ ಪಾದದ ಗಾಯದ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

ಅಂದ ಹಾಗೆ ಎರಡನೇ ಟೆಸ್ಟ್‌ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಮೊಹಮ್ಮದ್‌ ಶಮಿ ಲಭ್ಯತೆ ಬಗ್ಗೆ ಮಾಹಿತಿ ನೀಡಿದ್ದರು. ಮೊಹಮ್ಮದ್‌ ಶಮಿ ಅವರು ಫಿಟ್ನಸ್‌ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಫಿಟ್ನೆಸ್‌ ಸದ್ಯ ಹೇಗಿದೆ ಎಂದು ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ಮಾಹಿತಿ ನೀಡಬೇಕಾಗಿದೆ ಎಂದು ಹೇಳಿದ್ದರು. ಅದರಂತೆ ಇದೀಗ ಎನ್‌ಸಿಎ ಮೊಹಮ್ಮದ್‌ ಶಮಿ ಫಿಟ್ನೆಸ್‌ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

ಮೊಹಮ್ಮದ್‌ ಶಮಿ ಅವರು ಇತ್ತೀಚೆಗೆ ಬಂಗಾಳ ಪರ ರಣಜಿ ಪಂದ್ಯಗಳು ಹಾಗೂ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ಆಡಿದ್ದರು ಹಾಗೂ ಸಂಪೂರ್ಣ ಫಿಟ್‌ ಇರುವಂತೆ ಕಂಡಿದ್ದರು. ಆದರೆ, ಪಂದ್ಯದ ವೇಳೆ ಅವರ ಕಾಲಿನಲ್ಲಿ ಊತ ಕಾಣಿಸಿಕೊಳ್ಳುತಿತ್ತು ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಿಂದಲೂ ದೂರ ಇರಿಸಲಾಗಿದೆ ಹಾಗೂ ಅವರು ಎನ್‌ಸಿಎ ವೈದ್ಯಕೀಯ ತಂಡದ ಕಣ್ಗಾವಲಿನಲ್ಲಿದ್ದಾರೆ.

ಮೊಹಮ್ಮದ್‌ ಶಮಿ ಫಿಟ್ನೆಸ್‌ ಬಗ್ಗೆ ಬಿಸಿಸಿಐ ಹೇಳಿದ್ದೇನು?

“ಬಲ ಪಾದದ ಶಸ್ತ್ರ ಚಿಕಿತ್ಸೆಯ ಬಳಿಕ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ಬಿಸಿಸಿಐ ವೈದ್ಯಕೀಯ ತಂಡದ ಕಣ್ಗಾವಲಿನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಪಾದದ ಸಮಸ್ಯೆಯಿಂದ ಮೊಹಮ್ಮದ್‌ ಶಮಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ,” ಎಂದು ಬಿಸಿಸಿಐ ಸೋಮವಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಸಿದೆ.

“ಮಧ್ಯ ಪ್ರದೇಶ ವಿರುದ್ದದ ರಣಜಿ ಟ್ರೋಫಿ ಪಂದ್ಯದಲ್ಲಿ ಬಂಗಾಳದ ವೇಗಿ ಶಮಿ 43 ಓವರ್‌ಗಳನ್ನು ಬೌಲ್‌ ಮಾಡಿದ್ದರು. ಇದಾದ ಬಳಿಕ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅವರು ತನ್ನ ಎಲ್ಲಾ 9 ಪಂದ್ಯಗಳನ್ನು ಆಡಿದ್ದರು. ಇದರ ಜೊತೆಗೆ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯ ಕೊನೆಯ ಪಂದ್ಯಗಳಿಗೆ ಲಭ್ಯರಾಗುವ ಸಲುವಾಗಿ ಹೆಚ್ಚುವರಿ ಬೌಲಿಂಗ್‌ ಸೆಷನ್‌ಗಳನ್ನು ಕೂಡ ಮಾಡಿದ್ದರು.”

“ಆದರೆ, ಬೌಲಿಂಗ್‌ ವರ್ಕ್‌ಲೋಡ್‌ ಕಾರಣ ಎಡಗಾಲಿನ ಮೊಣಕಾಲಿನ ಭಾಗದಲ್ಲಿ ಊತ ಕಾಣಿಸಿಕೊಂಡಿದೆ. ದೀರ್ಘಾವಧಿ ಬಳಿಕ ಹೆಚ್ಚು ಬೌಲ್‌ ಮಾಡಿದ್ದರಿಂದ ಊತ ಸ್ವಲ್ಪ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ವೈದ್ಯಕೀಯ ತಂಡ ಇದನ್ನು ಗುಣಪಡಿಸುವ ಕಾರ್ಯದಲ್ಲಿದ್ದಾರೆ ಹಾಗೂ ಅವರು ಬೌಲ್‌ ಮಾಡದೆ ಸ್ವಲ್ಪ ದಿನಗಳ ಕಾರಣ ವಿಶ್ರಾಂತಿ ಪಡೆಯಬೇಕಾಗಿದೆ. ಈ ಕಾರಣದಿಂದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಶಮಿ ಲಭ್ಯರಾಗುವುದಿಲ್ಲ,” ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್‌ ಶಮಿ ಅಲಭ್ಯತೆ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದ ಪಾಲ್‌ ಆಡಮ್ಸ್‌!