Tuesday, 24th December 2024

Sham Benegal: ಹೊಸ ಅಲೆಯ ಸರದಾರ ಶಾಮ್‌ ಬೆನಗಲ್

Shyam_Benegal (1)

ಅನಂತನಾಗ್‌, ಕಾರ್ನಾಡ್‌ ಜೊತೆಗೆ ತಳುಕು ಹಾಕಿಕೊಂಡ ಹೆಸರು

ಕನ್ನಡದ ಹಿರಿಯ ನಟ ಅನಂತನಾಗ್‌ ಅವರ ನಟನೆಯ ಮೊತ್ತಮೊದಲ ಸಿನಿಮಾ ʼಅಂಕುರ್‌ʼ ಅನ್ನು ನಿರ್ಮಿಸಿ ನಿರ್ದೇಶಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ಶಾಮ್‌ ಬೆನಗಲ್‌ (Sham Benegal). 1974ರಲ್ಲಿ ಬಂದ ಈ ಚಿತ್ರ ಭಾರತದ ಚಿತ್ರೋದ್ಯಮದಲ್ಲಿ ಒಂದು ಮೈಲಿಗಲ್ಲು. ಇದು ಅನಂತ್‌ ಅವರಂಥ ದೈತ್ಯಪ್ರತಿಭೆಯ ನಟನನ್ನು ಪರಿಚಯಿಸಿದರೆ, ಶಾಮ್‌ ಅವರಂಥ ಮಹಾನಿರ್ದೇಶಕನನ್ನೂ ಜೊತೆಗೆ ಶಬಾನಾ ಅಜ್ಮಿಯಂಥ ದೊಡ್ಡ ನಟಿಯನ್ನೂ ಭಾರತಕ್ಕೆ ನೀಡಿತು. ನಂತರ ಬಂದ ಶಾಮ್‌ ಅವರ ನಿಶಾಂತ್‌, ಮಂಥನ್‌ ಫಿಲಂಗಳಲ್ಲಿ ಕನ್ನಡ ಹೆಮ್ಮೆಯ ನಾಟಕಕಾರ ಗಿರೀಶ್‌ ಕಾರ್ನಾಡ್‌ ಕೂಡ ನಟಿಸಿದ್ದರು ಎಂಬುದು ನಮಗೆ ಇನ್ನೊಂದು ಹೆಮ್ಮೆ.

ಅದು ಕನ್ನಡದಲ್ಲೂ ಹಿಂದಿಯಲ್ಲೂ- ಭಾರತದ ಎಲ್ಲ ಭಾಷೆಗಳಲ್ಲೂ ಪರ್ಯಾಯ ಚಳುವಳಿ ಎಂದು ಕರಸಿಕೊಳ್ಳುತ್ತಿದ್ದ ಹೊಸ ಅಲೆಯ ಚಿತ್ರಗಳ ಕಾಲವಾಗಿತ್ತು. ಕಲಾತ್ಮಕ ಚಲನಚಿತ್ರ ನಿರ್ಮಾಣದತ್ತ ತುಡಿಯುತ್ತಿದ್ದ ಬೆನಗಲ್, ಹೈದರಾಬಾದ್‌ನಲ್ಲಿ 1950ರ ದಶಕದಲ್ಲಿ ಸಂಭವಿಸಿದ ನೈಜ ಘಟನೆಯನ್ನಿಟ್ಟುಕೊಂಡು ʼಅಂಕುರ್‌ʼ ಸಿನಿಮಾ ನಿರ್ಮಿಸಿದರು. ಅನಂತ್‌, ಶಾಮ್‌, ಬೆನಗಲ್‌ ಮೂವರಿಗೂ ಅದು ಹೊಸ ಅನುಭವ. ಅಂಕುರ್ ಭಾರತ ಮತ್ತು ವಿದೇಶಗಳಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 43 ಇತರ ಪ್ರಶಸ್ತಿಗಳನ್ನು ಗೆದ್ದಿತು. 24ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್‌ಗೆ ನಾಮನಿರ್ದೇಶನಗೊಂಡಿತು. ಅಲ್ಲಿಂದಾಚೆಗೆ ಶಾಮ್‌ ಹಿಂದಿರುಗಿ ನೋಡಲಿಲ್ಲ.

ಶಾಮ್‌ ಅವರು ಕನ್ನಡ ಮೂಲದವರು. ಅವರ ತಂದೆ ಶ್ರೀಧರ್ ಬಿ.ಬೆನಗಲ್ ಚಿತ್ರ ಛಾಯಾಗ್ರಾಹಕ. ಕುಂದಾಪುರ ಬಳಿಯ ಬೆನಗಲ್‌ನಿಂದ ಹೈದರಾಬಾದ್‌ಗೆ ಹೋದವರು. ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಟುಂಬ. ಶ್ಯಾಮ್ ಬೆನೆಗಲ್ ಡಿಸೆಂಬರ್ 14, 1934ರಂದು ಜನಿಸಿದರು. ಶಾಮ್‌ ಹನ್ನೆರಡು ವರ್ಷದವರಿದ್ದಾಗ, ತಂದೆ ನೀಡಿದ ಕ್ಯಾಮೆರಾದಲ್ಲಿ ಮೊದಲ ಚಲನಚಿತ್ರ ಶೂಟ್‌ ಮಾಡಿದರು. ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ಗುರುದತ್ತ್ ಅವರ ತಾಯಿಯ ಅಜ್ಜಿ ಮತ್ತು ಶ್ಯಾಮ್ ಅವರ ತಂದೆಯ ಅಜ್ಜಿ ಸಹೋದರಿಯರು. ಹೀಗಾಗಿ ಇವರು ಕಸಿನ್ಸ್.‌ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪಡೆದ ಶಾಮ್‌ ಮುಂದುವರಿದದ್ದು ಮಾತ್ರ ಚಿತ್ರರಂಗದಲ್ಲಿ.

1959ರಲ್ಲಿ ಮುಂಬೈ ಮೂಲದ ಜಾಹೀರಾತು ಏಜೆನ್ಸಿಯಲ್ಲಿ ಕಾಪಿ ರೈಟರ್‌ ಆಗಿ ಕೆಲಸ ಆರಂಭಿಸಿದ ಶಾಮ್‌ ಅಲ್ಲಿ ಕ್ರಯೇಟಿವ್‌ ಹೆಡ್‌ ಆದರು. 1962ರಲ್ಲಿ ಗುಜರಾತಿ ಭಾಷೆಯಲ್ಲಿ ಘೇರ್ ಬೇತಾ ಗಂಗಾ (ಮನೆ ಬಾಗಿಲಿಗೆ ಗಂಗಾ) ಎಂಬ ಸಾಕ್ಷ್ಯಚಿತ್ರ ಮಾಡಿದರು. ನಂತರ ಹಲವು ಸಾಕ್ಷ್ಯಚಿತ್ರಗಳು, ಜಾಹೀರಾತು ಫಿಲಂ ಮಾಡಿದರು. 1966- 73ರ ನಡುವೆ ಶಾಮ್‌ ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (ಎಫ್‌ಟಿಐಐ) ಬೋಧಿಸಿದರು. ಮುಂದೆ ಇಲ್ಲಿಯೇ ಎರಡು ಬಾರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಬೆನಗಲ್‌ ಮುಂಬೈಗೆ ಮರಳಿದ ನಂತರ ಸ್ವತಂತ್ರವಾಗಿ ಹಣಕಾಸು ಸಂಗ್ರಹಿಸಿ ಅಂಕುರ್ ನಿರ್ಮಿಸಿದರು. ಚಿತ್ರ ತಕ್ಷಣವೇ ಖ್ಯಾತಿ ಗಳಿಸಿತು. ಶಬಾನಾ ಅಜ್ಮಿ, ಅನಂತ್ ನಾಗ್ ಅವರನ್ನು ಪರಿಚಯಿಸಿತು. ಈ ಯಶಸ್ಸಿನಿಂದ ಶಾಮ್ ಮುಂದೆ ನಿಶಾಂತ್ (1975), ಮಂಥನ್ (1976) ಮತ್ತು ಭೂಮಿಕಾ (1977) ಮಾಡಿದರು. ಅವುಗಳಿಗೆ ಎಫ್‌ಟಿಐಐ ಮತ್ತು ಎನ್‌ಎಸ್‌ಡಿಗಳಿಂದ ಬಂದ ನಾಸಿರುದ್ದೀನ್ ಶಾ, ಓಂ ಪುರಿ, ಸ್ಮಿತಾ ಪಾಟೀಲ್, ಶಬಾನಾ ಅಜ್ಮಿ, ಕುಲಭೂಷಣ್ ಖರ್ಬಂದಾ ಮತ್ತು ಅಮರೀಶ್ ಪುರಿ ಅವರಂತಹ ಪ್ರತಿಭಾವಂತರನ್ನು ಬಳಸಿಕೊಂಡರು. ಇವರೆಲ್ಲ ಮುಂದೆ ಹಿಂದಿಯ ದೈತ್ಯ ನಟರಾಗಿ ಇತಿಹಾಸ ಸೃಷ್ಟಿಸಿದರು.

ಇವರ ʼಮಂಥನ್ʼ ವಿಶಿಷ್ಟ ಪ್ರಯೋಗ. ಇದು ಗ್ರಾಮೀಣ ಸಬಲೀಕರಣದ ಕುರಿತಾದ ಚಲನಚಿತ್ರವಾಗಿತ್ತು. ಗುಜರಾತ್‌ನ ಹೈನುಗಾರಿಕೆ ಉದ್ಯಮ, ಅಮುಲ್‌ನ ಯಶಸ್ಸಿನ ಹಿನ್ನೆಲೆಯಲ್ಲಿತ್ತು. ಮೊದಲ ಬಾರಿಗೆ ಗುಜರಾತ್‌ನ ಐದು ಲಕ್ಷಕ್ಕೂ ಹೆಚ್ಚು ಗ್ರಾಮೀಣ ರೈತರು ಇದಕ್ಕೆ ತಲಾ ₹2 ದೇಣಿಗೆ ನೀಡಿದರು ಮತ್ತು ಹೀಗೆ ಚಿತ್ರದ ನಿರ್ಮಾಪಕರಾದರು. ಇದು ಕೂಡ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ರೈತರೆಲ್ಲ ಚಿತ್ರ ನೋಡಲು ಗಾಡಿ ಕಟ್ಟಿಕೊಂಡು ಬಂದರು.

ನಂತರ ಟಿವಿಯತ್ತ ಮುಖಮಾಡಿದ ಶಾಮ್‌, ಭಾರತೀಯ ರೈಲ್ವೆಗಾಗಿ ಯಾತ್ರಾದಂತಹ ಧಾರಾವಾಹಿ, ಜವಾಹರಲಾಲ್ ನೆಹರು ಅವರ ಪುಸ್ತಕ ಡಿಸ್ಕವರಿ ಆಫ್ ಇಂಡಿಯಾ ಆಧರಿಸಿದ 53 ಕಂತುಗಳ ದೂರದರ್ಶನ ಧಾರಾವಾಹಿ ಭಾರತ್ ಏಕ್ ಖೋಜ್ ನಿರ್ಮಿಸಿದರು. ಹೀರೋ ಶಶಿ ಕಪೂರ್‌ಗಾಗಿ ಜುನೂನ್ (1978) ಮತ್ತು ಕಲಿಯುಗ್ (1981) ಚಿತ್ರಗಳನ್ನು ನಿರ್ಮಿಸಿದರು. ಎರಡೂ ಫಿಲಂಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದವು. ಶಬಾನಾ ಅಜ್ಮಿ ಮತ್ತು ಸ್ಮಿತಾ ಪಾಟೀಲ್ ನಟಿಸಿದ ಮಂಡಿ (1983), ತ್ರಿಕಾಲ್ (1985) ಹೊರತಂದರು. ಮಮ್ಮೋ, ಸರ್ದಾರಿ ಬೇಗಂ, ಜುಬೇದಾ ಭಾರತೀಯ ಮುಸ್ಲಿಂ ಮಹಿಳೆಯರ ಬಗ್ಗೆ ಅವರ ಚಿತ್ರತ್ರಿವಳಿ.

1992ರಲ್ಲಿ ಧರ್ಮವೀರ್ ಭಾರತಿ ಅವರ ಕಾದಂಬರಿ ಆಧರಿಸಿದ ಸೂರಜ್ ಕಾ ಸತ್ವನ್ ಘೋಡಾ, 1996ರಲ್ಲಿ ದಿ ಮೇಕಿಂಗ್ ಆಫ್ ದಿ ಮಹಾತ್ಮ, 1999ರಲ್ಲಿ ಸಮರ್, 2005ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ ಅವರ ಗಮನಸೆಳೆದ ಫಿಲಂಗಳು. 2008ರಲ್ಲಿ ಅವರ ಕಾಮಿಡಿ ಫಿಲಂ ವೆಲ್‌ಕಮ್ ಟು ಸಜ್ಜನ್‌ಪುರ್ ಕೂಡ ಕಮರ್ಷಿಯಲ್‌ ಯಶಸ್ಸು ಗಳಿಸಿತು. 2010ರಲ್ಲಿ ರಾಜಕೀಯ ವಿಡಂಬನೆ ವೆಲ್ ಡನ್ ಅಬ್ಬಾ ಹೊರತಂದರು.

ಶ್ಯಾಮ್ ಬೆನೆಗಲ್ ಪತ್ನಿ ನೀರಾ ಬೆನೆಗಲ್. ಮಗಳು ಪಿಯಾ ಬೆನೆಗಲ್ ವಸ್ತ್ರವಿನ್ಯಾಸಕಿ. ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 18 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದಿರುವ ಶಾಮ್‌ ಬೆನಗಲ್‌ ನಿಸ್ಸಂಶಯವಾಗಿ ಭಾರತ ಕಂಡು ಅತ್ಯುನ್ನತ ಫಿಲಂಮೇಕರ್‌ಗಳಲ್ಲಿ ಒಬ್ಬರು.