Wednesday, 25th December 2024

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಯಾವುದೇ ಒಂದು ದೇಶ ಅಥವಾ ಪ್ರದೇಶದ ಭವಿಷ್ಯ ಆಯಾ ದೇಶದ ಪ್ರಾಥಮಿಕ ಶಿಕ್ಷಣದ ಮೇಲೆ ಅವಲಂಬಿತ ವಾಗಿರುತ್ತದೆ. ಸುಶಿಕ್ಷತರ ನಾಡು ಕಟ್ಟುವುದಕ್ಕೆ ಭದ್ರ ಬುನಾದಿಯನ್ನು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಹಾಕಬೇಕು. ಈ ಹಂತದಲ್ಲಿ ಕಲಿಸಬೇಕಾದ ‘ಮೂಲ’ ಶಿಕ್ಷಣವನ್ನು ಕಲಿಸದೇ ಹೋದರೆ ಭವಿಷ್ಯದ ಒಂದಲ್ಲ ಒಂದು ಕಡೆ ಅದರ ಹೊಡೆತ ವಿದ್ಯಾರ್ಥಿ ಹಾಗೂ ದೇಶ ಎರಡಕ್ಕೂ ಬೀಳುವುದರಲ್ಲಿ ಎರಡನೇ ಮಾತಿಲ್ಲ.

ಭಾರತದಂತಹ ಅಭಿವೃದ್ಧಿಶೀಲ, ಮಧ್ಯಮ ಅಥವಾ ಬಡತನ ರೇಖೆಯಲ್ಲಿಯೇ ಹೆಚ್ಚು ಕುಟುಂಬಗಳಿರುವ ದೇಶ ದಲ್ಲಿ ಪ್ರಾಥಮಿಕ ಶಿಕ್ಷಣ ಎನ್ನುವುದು ಅತಿ ಪ್ರಮುಖ ವಿಷಯವಾಗಿರುತ್ತದೆ. ಭಾರತದಲ್ಲಿರುವ ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಶಿಕ್ಷಣ ಎನ್ನುವುದು ‘ಖಾಸಗಿ ಸಂಸ್ಥೆ’ಗಳ ಕೈಗೆ ಹೋಗುವುದರಿಂದ ಶೇ.60ಕ್ಕೂ ಹೆಚ್ಚು ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚಿತವಾಗುವ ಸಾಧ್ಯತೆಯೇ ಹೆಚ್ಚಿರು ತ್ತದೆ. ಸರಕಾರಿ ಶಾಲೆಗಳಿಗೆ ಹೋಲಿಸಿದರೆ, ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ಕಾರಣಕ್ಕೆ ಅನೇಕ ಪೋಷಕರು ಆರ್ಥಿಕ ಸಂಕಷ್ಟವನ್ನೇಲ್ಲ ಮೀರಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ಲಕ್ಷಲಕ್ಷ ಹಣ ಕೊಟ್ಟು ಓದಿಸುತ್ತಿದ್ದಾರೆ.

ಕರ್ನಾಟಕದಲ್ಲಿರುವಲ್ಲಿ ಸರಕಾರಿ ಶಾಲಾ ವ್ಯವಸ್ಥೆ ಆ ಪ್ರಮಾಣದಲ್ಲಿ ‘ಕುಸಿತ’ವಾಗಿದೆಯೇ ಎನ್ನುವ ಪ್ರಶ್ನೆಗಳು ಅನೇಕರ ಬಾರಿ ಕೇಳಿ ಬರುತ್ತದೆ. ಹಾಗೇ ನೋಡಿದರೆ, ಖಾಸಗಿ ಶಾಲೆಯಲ್ಲಿರುವ ಸೌಲಭ್ಯಗಳಿಗಿಂತ ಹತ್ತು ಪಟ್ಟು
ಸೌಲಭ್ಯ ಸರಕಾರಿ ಶಾಲೆಯಲ್ಲಿದ್ದರೂ ಅನೇಕ ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲಿಯೂ ಪ್ರಾಥಮಿಕ ಶಾಲೆ ಎನ್ನುವುದು ವಿದ್ಯಾರ್ಥಿಯ ‘ಬುನಾದಿ’ ಎನ್ನುವ ಕಾರಣಕ್ಕೆ ಕಷ್ಟ ಪಟ್ಟು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಸರ್ವೇಸಾಮಾನ್ಯ ವಿಷಯವಾಗಿದೆ.

ಹಾಗಾದರೆ, ಖಾಸಗಿ ಶಾಲೆಗಳಿಗಿಂತ ಹೆಚ್ಚು ಕೌಶಲ್ಯ ಹೊಂದಿರುವ ಶಿಕ್ಷಕರು, ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕ,
ಸಮವಸ ಸೇರಿದಂತೆ ಹತ್ತಾರು ಸೌಲಭ್ಯವನ್ನು ನೀಡಿದರೂ ಸರಕಾರಿ ಶಾಲೆಗಳಿಗೆ ಏಕೆ ಹೆಚ್ಚು ಆದ್ಯತೆ ನೀಡುತ್ತಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಸರಕಾರಿ ಶಾಲೆಗಳ ಮೇಲಿನ ಆಸಕ್ತಿ ಕಡಿಮೆಯಾಗಲು ಕಾರಣವನ್ನು ನೋಡಿದರೆ, ‘ಸರಕಾರಿ ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುವುದಿಲ್ಲವಂತೆ’ ಎನ್ನುವ ಮಾತುಗಳು ಪೋಷಕರಲ್ಲಿದೆ.

ಸರಕಾರಿ ಶಾಲೆಗೆ ನೇಮಕವಾಗುವ ಶಿಕ್ಷಕರ ವಿದ್ಯಾರ್ಹತೆ, ನೇಮಕಕ್ಕಿರುವ ಪರೀಕ್ಷೆಗಳು ಖಾಸಗಿ ಶಾಲೆಗಳಿಗಿಂತ ಕಠಿಣವಾಗಿರುತ್ತದೆ. ಆದರೂ, ಸರಕಾರಿ ಶಾಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲವೇಕೆ ಎನ್ನುವುದು ಈಗಲೂ
ಇರುವ ಬಹುದೊಡ್ಡ ಯಕ್ಷಪ್ರಶ್ನೆ. ಈ ರೀತಿಯಾಗಲು ಕಾರಣಗಳನ್ನು ಹುಡುಕುವ ಮೊದಲು ಇತ್ತಿಚಿಗೆ ಬೆಳಗಾವಿ ಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಮಂಡನಯಾದ ‘ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ’ಗೆ
ಸಂಬಂಧಿಸಿದ ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ಶಾಲೆಗಳ ವಿಷಯದಲ್ಲಿ ಬಂದಿರುವ ಅಂಶಗಳನ್ನು
ಗಮನಿಸಬೇಕಿದೆ.

2022ರ ಅಂತ್ಯದ ವರದಿಯನ್ನು ಸಿಎಜಿ ಮಂಡಿಸಿದೆ. (ಕಾಂಗ್ರೆಸಿಗರು ಇದನ್ನು ಬಿಜೆಪಿ ಸರಕಾರದ ವೈಫಲ್ಯ ಎಂದರೂ ಅಚ್ಚರಿಯಿಲ್ಲ) ಅದರಲ್ಲಿ ಸಿಎಜಿ ಪ್ರಸ್ತಾಪಿಸಿರುವ ಕಾರ್ಯಕ್ಷಮತೆ ವಿಷಯ ಶಿಕ್ಷಣ ತಜ್ಞರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಒಂದನೇ ತರಗತಿಯಲ್ಲಿ ಓದುತ್ತಿರುವ ಶೇ56.8ರಷ್ಟು ವಿದ್ಯಾರ್ಥಿಗಳಿಗೆ ಅಕ್ಷರಗಳನ್ನು ಗುರುತಿಸುವುದಕ್ಕೆಯೇ ವಿಫಲವಾಗಿದ್ದಾರೆ, ಶೇ.42.6ರಷ್ಟು ವಿದ್ಯಾರ್ಥಿಗಳಿಗೆ ಒಂದರಿಂದ ಒಂಬತ್ತ ವರೆಗಿನ ಅಂಕಿಯನ್ನು ಗುರುತಿಸುವುದಕ್ಕೆ ಅಸಮರ್ಥರಾಗಿದ್ದಾರಂತೆ.

ಇದೇ ರೀತಿ ಎಂಟನೇ ತರಗತಿ ಯಲ್ಲಿರುವ ಶೇ.66ರಷ್ಟು ವಿದ್ಯಾರ್ಥಿಗಳು ಎರಡನೇ ತರಗತಿಯ ಪಠ್ಯವನ್ನು ಓದಲು ಮಾತ್ರ ಸಮರ್ಥರಾಗಿದ್ದಾರೆ. ಇದೇ ರೀತಿ ಮೂರನೇ ತರಗತಿಯಲ್ಲಿರುವ ಶೇ.9.8ರಷ್ಟು ವಿದ್ಯಾರ್ಥಿಗಳು ಮಾತ್ರ ಎರಡನೇ ತರಗತಿಯ ಪಠ್ಯವನ್ನು ಓದಲು ಸಮರ್ಥರಾಗಿದ್ದಾರೆ. ಇದಕ್ಕೂ ಮುಖ್ಯವಾಗಿ ಮೂರನೇ ತರಗತಿಯಲ್ಲಿ ರುವ ಶೇ.82.7ರಷ್ಟು ವಿದ್ಯಾರ್ಥಿಗಳಿಗೆ ವ್ಯವಕಲನ ಮಾಡಲು ಅಸಮರ್ಥರಾಗಿದ್ದಾರೆ. ಇನ್ನು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶೇ. 61.1ರಷ್ಟು ವಿದ್ಯಾರ್ಥಿಗಳಿಗೆ ಭಾಗಾಕಾರವೇ ಬರುವುದಿಲ್ಲವಂತೆ.

ಈ ಎಲ್ಲ ಅಂಕಿ-ಅಂಶಗಳು 2018ಕ್ಕೆ ಹೋಲಿಸಿದರೆ 2022ರ ವೇಳೆಗೆ ಗಣನೀಯವಾಗಿ ಹೆಚ್ಚಳವಾಗಿರುವುದು ಆತಂಕ ಕಾರಿ ಅಂಶ ಎನ್ನುವುದು ಸ್ಪಷ್ಟ. ಪ್ರಾಥಮಿಕ ಶಾಲೆಯಲ್ಲಿ ಸಿಗುವ ‘ಬೇಸಿಕ್’ ಅನ್ನೇ ಅರ್ಥ ಮಾಡಿಕೊಳ್ಳುವಲ್ಲಿ, ಕಲಿಯುವಲ್ಲಿ ವಿದ್ಯಾರ್ಥಿಗಳು ವಿಫಲವಾದರೆ ಉನ್ನತ ಶಿಕ್ಷಣಕ್ಕೆ ಹೋದ ಸಮಯದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರವಾಗುವುದರಲ್ಲಿ ಅನುಮಾನವೇ ಇಲ್ಲ.

ಆದ್ದರಿಂದ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದ ಕಡೆಗೆ ಒತ್ತು ನೀಡಬೇಕು ಎನ್ನುವ ಎಚ್ಚರಿಕೆಯನ್ನು ಸಿಎಜಿ ವರದಿ ನೀಡಿದೆ. ಈ ವರದಿ ಇಲ್ಲಿಗೆ ನಿಲ್ಲದೇ, ನಾಲ್ಕನೇ ತರಗತಿಗೆ ಹೋಲಿಸಿದರೆ ಏಳನೇ ತರಗತಿಯ ವಿದ್ಯಾರ್ಥಿಗಳ ಪಡೆ ಯುತ್ತಿರುವ ಶ್ರೇಣಿಯಲ್ಲಿಯೂ ಕುಸಿತವಾಗಿದೆ. ಪ್ರಮುಖವಾಗಿ ಕೋರ್ ವಿಷಯಗಳಾಗಿರುವ ಗಣಿತ, ಸಮಾಜ ಹಾಗೂ ವಿಜ್ಞಾನ ವಿಷಯದಲ್ಲಿಯೇ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಗಳಿಸುತ್ತಿದ್ದಾರೆ.

ಇದರೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಗಣನೀಯ ಕುಸಿತವಾಗಿದೆ ಎನ್ನುವ ಅಂಶ ಬಹಿರಂಗ ವಾಗಿದೆ. ಈ ರೀತಿಯ ಕುಸಿತ ನಿರಂತರವಾಗಿರುವುದು ಸರಕಾರಿ ಶಾಲೆಗಳ ಉಳಿವಿಕೆಗೆ ಬಹುದೊಡ್ಡ ಸವಾಲಾಗಿದೆ ಎಂದರೆ ತಪ್ಪಾಗುವುದಿಲ್ಲ.

ಹಾಗೆಂದ ಮಾತ್ರಕ್ಕೆ ಪ್ರಾಥಮಿಕ ಶಿಕ್ಷಣದಲ್ಲಿ ಆಗುತ್ತಿರುವ ಈ ಕುಸಿತಕ್ಕೆ ಯಾವುದೋ ಒಂದು ಪಕ್ಷ ಅಥವಾ ಸರಕಾರ
ಕಾರಣ ಎನ್ನಲು ಸಾಧ್ಯವಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತಿರುವ ರೀತಿಯಿಂದ ಸರಕಾರಿ ಶಾಲೆಗಳತ್ತ ಬರುವ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವುದರೊಂದಿಗೆ, ಸರಕಾರಿ ಶಾಲೆಗಳನ್ನು ಹಾಗೂ ಶಿಕ್ಷಕರನ್ನು ಕಳೆದ ಎರಡು
ದಶಕದಿಂದೀಚೆ ಬಳಸಿಕೊಳ್ಳುತ್ತಿರುವುದು ಹಾಗೂ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿರುವ ಕೆಲವೊಂದಷ್ಟು
ಬದಲಾವಣೆ, ಶಿಕ್ಷಕರ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಠ್ಯೇತರ ಚಟುವಟಿಕೆಗಳು ಈ ರೀತಿಯ ಸಮಸ್ಯೆ ಯಾಗುವುದಕ್ಕೆ ಪ್ರಮುಖ ಕಾರಣ ಎನ್ನುವುದು ಬಹುಪಾಲು ಶಿಕ್ಷಕರ ಅಂಬೋಣವಾಗಿದೆ.

ಶಾಲೆಯ ನಡೆಯುವ ಸಮಯದಲ್ಲಿ ಪಾಠ ಮಾಡುವುದಕ್ಕಿಂತ, ಇಲಾಖೆ ಕೇಳುವ ವರದಿ ಸಿದ್ಧಪಡಿಸುವುದಕ್ಕೆ ಅಥವಾ ಇನ್ಯಾವುದೋ ಕಾರ್ಯಕ್ಕೆ ನಿಯೋಜನೆಗೆ ಹೋಗುವುದರಲ್ಲಿಯೇ ಬಹುಪಾಲು ಸಮಯ ಕಳೆಯುತ್ತಿದ್ದೇವೆ. ಹೀಗಿರುವಾಗ, ಮಕ್ಕಳಿಗೆ ಪಾಠ ಕಲಿಸುವುದು ಯಾವಾಗ ಎನ್ನುವುದು ಶಿಕ್ಷಕರ ಆರೋಪವಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಗುತ್ತಿರುವ ತರಬೇತಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಎಲ್ಲ ಸರಕಾರಗಳು ಶಿಕ್ಷಕ ರನ್ನು ಆಯಾ ಸಮಯಕ್ಕೆ ‘ಅಪ್‌ಡೇಟ್’ ಮಾಡುವುದಕ್ಕೆ ನಿರಂತರವಾಗಿ ತರಬೇತಿಗಳನ್ನು ನೀಡುತ್ತಲೇ ಬಂದಿವೆ. ಅದಕ್ಕಾಗಿ ಇಲಾಖೆಯಲ್ಲಿಯೇ ಪ್ರತ್ಯೇಕ ವಿಭಾಗ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ ಈ ರೀತಿ ತರಬೇತಿ ಪಡೆಯುವ ಶಿಕ್ಷಕರಿಗೆ ತಾವು ಪಡೆದ ತರಬೇತಿಯ ವಿಷಯವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದಷ್ಟೇ ಈಗಿರುವ ಬಹುದೊಡ್ಡ ಸಮಸ್ಯೆ.

ಹೌದು, ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಕಾರಣಕ್ಕೆ ರಾಜ್ಯ ಸರಕಾರ ಹತ್ತು ಹಲವು ಯೋಜನೆ ಗಳನ್ನು ರೂಪಿಸಿದೆ. ಅದರಲ್ಲಿಯೂ ‘ವಿದ್ಯೆ ತಲೆಗೆ ಹತ್ತಬೇಕು ಎಂದರೆ ಹೊಟ್ಟೆ ತುಂಬಿರಬೇಕು’ ಎನ್ನುವ
ಕಾರಣಕ್ಕೆ ರಾಜ್ಯ ಸರಕಾರ ಆರಂಭಿಸಿರುವ ಬಿಸಿಯೂಟ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ
ಸಿಗುವಂತಾಗಿದೆ. ಆದರೆ ಇದರ ನಿರ್ವಹಣೆಯನ್ನು ಶಾಲೆಯ ಶಿಕ್ಷಕರಿಗೆ ನೀಡಿರುವುದರಿಂದ ಶಾಲೆಯ ಒಬ್ಬ ಶಿಕ್ಷಕ ಇಡೀ ದಿನ ಬಿಸಿಯೂಟದ ಕೋಣೆ ಬಿಟ್ಟು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಮುಂದುವರಿದ
ಭಾಗವಾಗಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ಸೇರಿದಂತೆ ಪೌಷ್ಠಿಕ ಆಹಾರವನ್ನು ಸರಕಾರ ನೀಡುತ್ತಿದೆ.
ಆದರೆ ಇದರ ‘ಲೆಕ್ಕ’ ಇಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಇನ್ನು ವರ್ಷದ ಆರಂಭದಲ್ಲಿ ಶುರುವಾಗುವ ಪಠ್ಯಪುಸ್ತಕ, ಸಮವಸ, ಶೂ-ಸಾಕ್ಸ್ ವಿತರಣೆಗೆ ಅಂಕಿ-ಅಂಶವನ್ನು
ಸಿದ್ಧಪಡಿಸುವುದಷ್ಟೇ ಅಲ್ಲದೇ, ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರೇ ಹೋಗಿ ಅವುಗಳನ್ನು ಕಚೇರಿಯಿಂದ ತರಬೇಕಾದ
ಸ್ಥಿತಿಯಿದೆ. ಇದರೊಂದಿಗೆ ಯಾವ ರೀತಿ ಪಾಠ ಮಾಡುತ್ತಾರೆ ಎನ್ನುವುದಕ್ಕೆ ಒಂದು ವರದಿ, ಯಾವ ರೀತಿ ಪಾಠ
ಮಾಡಲಾಗಿದೆ ಎನ್ನುವುದಕ್ಕೆ ಮತ್ತೊಂದು ವರದಿ ಹೀಗೆ, ಶಿಕ್ಷಕರು ‘ಗೋಡೆಯ ಮೇಲೆ ಚಾಕ್ಸ್‌ಪೀಸ್ ಬಳಸುವು
ದಕ್ಕಿಂತ, ಪುಸ್ತಕದಲ್ಲಿ ವರದಿ ಬರೆಯುವುದೇ‘ ಹೆಚ್ಚಾಗಿದೆ.

ಈ ಎಲ್ಲವನ್ನು ಮೀರಿ ಮಕ್ಕಳಿಗೆ ಪಾಠ ಮಾಡೋಣ ಎನ್ನುವ ಹೊತ್ತಿಗೆ ಸಮೀಕ್ಷೆ, ಚುನಾವಣಾ ಕೆಲಸ ಹೀಗೆ ಶಾಲೆಯಿಂದ ಆಚೆಗಿನ ಕೆಲಸಗಳು ಒಂದಿಷ್ಟು. ಇಷ್ಟೆಲ್ಲ ಒತ್ತಡಗಳನ್ನು ಪ್ರಾಥಮಿಕ ಶಿಕ್ಷಕರ ಮೇಲೆ ಹೇರಿ,
ಅವರಿಂದ ವಿದ್ಯಾರ್ಥಿಗಳಿಗೆ ‘ಸೂಕ್ತ’ ರೀತಿಯಲ್ಲಿ ಪಾಠ ಮಾಡುವಂತೆಯೂ ಹೇಳಲಾಗುತ್ತಿದೆ. ಬಹುತೇಕ ಶಿಕ್ಷಕರಿಗೆ
ಬೆಲ್ಲು ಹೊಡೆಯುವ ಸಮಯಕ್ಕೆ ಸರಿಯಾಗಿ ‘ಬಿಲ್’ ಮಾಡುವುದೇ ಬಹುದೊಡ್ಡ ತಲೆನೋವಾಗಿದೆ ಎನ್ನುವುದು
ಈಗಿನ ವಾಸ್ತವ. ಶಿಕ್ಷಕರ ಮೇಲಿನ ಈ ಒತ್ತಡವನ್ನು ತಗ್ಗಿಸುವಂತೆ ಎಲ್ಲ ಸರಕಾರಗಳ ಮೇಲೆ ಮೇಲಿಂದ ಮೇಲೆ
ಒತ್ತಡ ಬಂದರೂ, ಆ ನಿಟ್ಟಿನಲ್ಲಿ ಗಟ್ಟಿ ತೀರ್ಮಾನ ಮಾತ್ರ ಈವರೆಗೆ ಆಗಿಲ್ಲವಿರುವುದು ವಿಪರ್ಯಾಸ. ಈ ಎಲ್ಲವನ್ನೂ ಮೀರಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಗುರಿಯಿಟ್ಟುಕೊಂಡು ಕಾರ್ಯ ನಿರ್ವಹಿಸು ತ್ತಿರುವ ಶಿಕ್ಷಕರೂ ಇದ್ದಾರೆ. ಆದರೆ ಅವರ ಸಂಖ್ಯೆ ತೀರಾ ಕಡಿಮೆ!

ಸರಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಯ ಶಿಕ್ಷಕರಿಗಿಂತ ಹೆಚ್ಚು ಕೌಶಲ ಹೊಂದಿರುವ ಶಿಕ್ಷಕರಿದ್ದರೂ, ಅವರ
ಶ್ರಮದಾನ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಎನ್ನುವುದು ಸ್ಪಷ್ಟ. ಸರಕಾರಿ ಶಾಲೆಗಳ ಬಗ್ಗೆ ಜನರು
ಹೊಂದಿರುವ ಅಸಡ್ಡೆಯನ್ನು ತೊಡದು ಹಾಕಿ, ಮಕ್ಕಳು ಹಾಗೂ ಪೋಷಕರನ್ನು ಸೆಳೆಯುವ ನಿಟ್ಟಿನಲ್ಲಿ ಸರಕಾರ
ಮೂಲಸೌಕರ್ಯ, ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಸೇರಿದಂತೆ ಹತ್ತಾರು ನೂತನ ಯೋಜನೆಗಳನ್ನು
ಆರಂಭಿಸುವ ಮೊದಲು ಶಿಕ್ಷಕರ ಮೇಲಿನ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕಿದೆ.
ಶಿಕ್ಷಕರಿಗೆ ಪಾಠ ಮಾಡುವುದಕ್ಕೆ ‘ಸಮಯ’ ನೀಡುವ ಬದಲು ಇತರೆ ಕೆಲಸಗಳ ‘ಭಾರ’ವನ್ನೇ ಹೋರಿಸುತ್ತಾ
ಹೋದರೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಎಷ್ಟೇ ಕೋಟಿ ಸುರಿದರೂ ಹೊಳೆಯಲ್ಲಿ ಹುಣಸೆ ತೊಳೆದಂತೆ ಎನ್ನುವುದು ಕಹಿ ಸತ್ಯ!

ಇದನ್ನೂ ಓದಿ: Ranjith H Ashwath Column: ಒಡೆದ ಕನ್ನಡಿಯಾದ ರಾಜ್ಯ ಬಿಜೆಪಿ