ಥಾಣೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡು ಬಂದಿದ್ದು ಇನ್ನು ಮುಂದೆ ವೈದ್ಯರು ಹೇಳಿದಂತೆ ಕಟ್ಟುನಿಟ್ಟಾಗಿ ಆರೋಗ್ಯ ಕಾಳಜಿ ವಹಿಸಿಕೊಳ್ಳುವುದಾಗಿ ಸ್ವತಃ ಕಾಂಬ್ಳಿ ಹೇಳಿದ್ದಾರೆ. ಶನಿವಾರ ಕಾಂಬ್ಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಥಾಣೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 52 ವರ್ಷದ ಮಾಜಿ ಕ್ರಿಕೆಟಿಗನ ಆರೋಗ್ಯ ಪ್ರಸ್ತುತ ಸ್ಥಿರವಾಗಿದ್ದರೂ ಸಂಪೂರ್ಣ ಗುಣಮುಖರಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಾಂಬ್ಳಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬಾಲ್ಯದ ಕೋಚ್ ಆಚ್ರೇಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಆತ್ಮೀಯ ಸ್ನೇಹಿತ ಸಚಿನ್ ತೆಂಡೂಲ್ಕರ್ ಅವರನ್ನ ಭೇಟಿಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಸಮಯದಲ್ಲೂ ಕಾಂಬ್ಳಿ ಆರೋಗ್ಯ ಚೆನ್ನಾಗಿರಲಿಲ್ಲ. ಮಾತನಾಡಲು ಕೂಡ ಕಷ್ಟಪಡುತ್ತಿದ್ದರು. ಕುಡಿತದ ಚಟದಿಂದಾಗಿ ಕಾಂಬ್ಳಿ ಕಳೆದ ಕೆಲ ಸಮಯದಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ವೈದ್ಯರ ಕೈ ಹಿಡಿದು ಮಾತನಾಡಿದ ಕಾಂಬ್ಳಿ, ನಾನು ಇಂದು ಜೀವಂತವಾಗಿರಲು ಕಾರಣ ವೈದ್ಯರು. ಇನ್ನು ಮುಂದೆ ವೈದರು ಹೇಳಿದಂತೆ ಕಟ್ಟುನಿಟ್ಟಿನ ಆರೋಗ್ಯ ಕಾಳಜಿ ವಹಿಸುತ್ತೇನೆ. ನಾನು ಜನರಿಗೆ ಉದಾಹರಣೆಯಾಗಲು ಬಯಸುತ್ತೇನೆ ಎಂದು ಹೇಳಿದರು.
ವೈದ್ಯ ವಿವೇಕ್ ದ್ವಿವೇದಿ ಮಾತನಾಡಿ ಕಾಂಬ್ಳಿ ಆರೋಗ್ಯ ಸ್ಥಿರವಾಗಿದೆ ಎಂದ ಮಾತ್ರಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದಲ್ಲ. ವಿವಿಧ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಹಾಗಾಗಿ ಅವರು ಪ್ರತಿ ಕ್ಷಣವೂ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ. 2013ರಲ್ಲಿ ವಿನೋದ್ ಕಾಂಬ್ಳಿ ಅವರು ಎರಡು ಬಾರಿ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಹಾಗೂ ಈ ವೇಳೆ ಸಚಿನ್ ತೆಂಡೂಲ್ಕರ್ ಅವರು ಆರ್ಥಿಕ ಸಹಾಯ ಮಾಡಿದ್ದರು.
ವಿನೋದ್ ಕಾಂಬ್ಳಿ ಕ್ರಿಕೆಟ್ ವೃತ್ತಿ ಜೀವನದಲ್ಲಿ 17 ಟೆಸ್ಟ್ , 104 ಏಕದಿನ ಪಂದ್ಯಗಳನ್ನು 1991 ರಿಂದ2000ದವರೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಸಕ್ರಿಯರಾಗಿ ಆಟವಾಡಿದ್ದರು. ಕಾಂಬ್ಳಿ 1996ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತ ತಂಡದ ಸದಸ್ಯರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಎರಡು ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಕೂಡ ವಿನೋದ್ ಕಾಂಬ್ಳಿ ಅವರ ಹೆಸರಿನಲ್ಲಿದೆ. ಎರಡು ದ್ವಿಶತಕ ಸೇರಿದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ನಾಲ್ಕು ಶತಕಗಳನ್ನು ಅವರು ಸಿಡಿಸಿದ್ದಾರೆ.