ನವದೆಹಲಿ: ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಪ್ರತಿವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ(Consumer Rights day 2024)ವನ್ನು ಆಚರಿಸಲಾಗುತ್ತದೆ. ಯಾವುದೇ ಸ್ಥಳದಲ್ಲಿ ಹೊಸದಾಗಿ ಯಾವುದೇ ಸರಕು ಅಥವಾ ಸೇವೆಯನ್ನು ಖರೀದಿಸಿದಾಗ ಅನ್ಯಾಯವಾದರೆ, ಅದರ ವಿರುದ್ಧ ದನಿಯೆತ್ತಬೇಕೆಂಬ ಅರಿವು ಗ್ರಾಹಕರಿಗೆ ಇರಬೇಕೆನ್ನುವ ತಿಳುವಳಿಕೆಯನ್ನು ಈ ಜಾಗೃತಿ ದಿನದಂದು ಬಿತ್ತಲಾಗುತ್ತದೆ.
ಯಾರು ಗ್ರಾಹಕರು?
ಎಲ್ಲರೂ ಗ್ರಾಹಕರೇ! ಎಲ್ಲರೂ ಒಂದಿಲ್ಲೊಂದು ಸಂದರ್ಭದಲ್ಲಿ ಏನನ್ನಾದರೂ ಖರೀದಿಸಿಯೇ ಇರುತ್ತೇವೆ. ಖರೀದಿ ಮಾಡಿದ್ದು ಸೂಜಿಯಿಂದ ಹಿಡಿದು ಬಂಗಾರದ ಕಿರೀಟವೇ ಇರಬಹುದು ಅಥವಾ ಸಣ್ಣದೊಂದು ಸೇವೆಯೇ ಇದ್ದಿರಬಹುದು. ಆದರೆ ನೀಡಿದ ಹಣಕ್ಕೆ ಸರಿಯಾದ ವಸ್ತು ಅಥವಾ ಸೇವೆಯನ್ನು ಗ್ರಾಹಕ ಪಡೆಯುವುದು ಮುಖ್ಯ. ಇದರಲ್ಲಿ ಅನ್ಯಾಯ ಆಗುವಂತಿಲ್ಲ. ಈ ಬಗ್ಗೆ ಗ್ರಾಹಕರಿಗೆ ಸೂಕ್ತ ಮಾಹಿತಿ, ತಿಳುವಳಿಕೆ ಇಲ್ಲದಿದ್ದಾಗ ಮೋಸ, ವಂಚನೆಗೀಡಾಗುವುದನ್ನು ತಪ್ಪಿಸಿಕೊಳ್ಳಲು ಕಷ್ಟವಾಗಬಹುದು.
ʻವ್ಯಾಪಾರಂ ದ್ರೋಹ ಚಿಂತನಂʼ ಎಂಬ ಹಳೆಯ ಮಾತು ಸದಾ ಕಾಲ ಚಾಲ್ತಿಯಲ್ಲಿ ಇರುವಂಥದ್ದು. ಲಾಭಕೋರ ಮಾರುಕಟ್ಟೆಯ ಕಪಿಮುಷ್ಠಿಯಲ್ಲಿ ಸಿಲುಕುವ ಗ್ರಾಹಕರಿಗೆ ಅನ್ಯಾಯದ ವಿರುದ್ಧ ದನಿಯೆತ್ತುವುದಕ್ಕೆ ಸೂಕ್ತ ಕಾನೂನಿನ ಮಾರ್ಗದರ್ಶನ ಮತ್ತು ಹಕ್ಕುಗಳ ಅಸ್ತ್ರಗಳು ಬೇಕು. ಮಾರಾಟಕ್ಕೂ ನೈತಿಕತೆ ಮತ್ತು ಕಾನೂನಿನ ಚೌಕಟ್ಟು ಬೇಕು ಎಂಬುದು ಮಾರುವ-ಕೊಳ್ಳುವವರಿಬ್ಬರೂ ತಿಳಿದಿರಬೇಕು.
ಅಂದೇ ಏಕೆ?: ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಗ್ರಾಹಕರ ಹಕ್ಕುಗಳ ರಕ್ಷಣೆಯ ಬಗ್ಗೆ ಕೆಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಮೊದಲಿಗೆ, 1986 ರ ಡಿಸೆಂಬರ್ 24ರಂದು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ದೊರೆತಿತ್ತು. ಅದೇ ದಿನವನ್ನು ರಾಷ್ಟ್ರೀಯ ಗ್ರಾಹಕರ ದಿನವೆಂದು ಆಚರಿಸಲಾಗುತ್ತದೆ. 1986ರಲ್ಲಿ ಜಾರಿಗೆ ತಂದ ಆ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು, 2019ರಲ್ಲಿ ಪರಿಷ್ಕೃರಿಸಲಾಗಿದೆ.
ಈ ಕಾಯ್ದೆಯ ಪ್ರಕಾರ, ದೋಷಪೂರಿತ ಸರಕುಗಳು, ವ್ಯಾಪಾರದಲ್ಲಿ ವಂಚನೆ, ಸೇವೆಯಲ್ಲಿ ಮೋಸ ಅಥವಾ ನಿರ್ಲಕ್ಷ್ಯ ಮುಂತಾದ ಯಾವುದರಿಂದಲೂ ಗ್ರಾಹಕರು ತಮ್ಮನ್ನು ರಕ್ಷಿಸಿಕೊಳ್ಳಲು ಹಕ್ಕಿದೆ. ಗ್ರಾಹಕರಿಗೆ ಕೆಲವು ಹಕ್ಕುಗಳನ್ನು ಈ ಕಾಯ್ದೆಯ ಅಡಿಯಲ್ಲಿ ನೀಡಲಾಗಿದೆ. ಸುರಕ್ಷತೆಯ ಹಕ್ಕು, ಆಯ್ಕೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಪರಿಹಾರ ಪಡೆಯುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕುಗಳು ನಮಗೆಲ್ಲರಿಗೂ ಇವೆ. ಗ್ರಾಹಕರು ತಮಗಾದ ಯಾವುದೇ ಅನ್ಯಾಯದ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಈ ಮೂಲಕ ಅವರು ನ್ಯಾಯವನ್ನು ಪಡೆದುಕೊಳ್ಳಬಹುದು.
ಜಾಗತಿಕವಾಗಿಯೂ ಗ್ರಾಹಕರ ಹಿತರಕ್ಷಣೆಯನ್ನು ಮಹತ್ವದ್ದೆಂದೇ ಭಾವಿಸಲಾಗಿದೆ. ಹಾಗಾಗಿ ಪ್ರತಿ ವರ್ಷ ಮಾರ್ಚ್ 15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಗ್ರಾಹಕರಿಗೆ ತಮ್ಮ ಹಕ್ಕುಗಳನ್ನು ಪರಿಚಯಿಸಿ, ಅವರು ಅದರ ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂಬ ಗುರಿ ಈ ಜಾಗೃತಿ ದಿನಗಳದ್ದು.
ಈ ಸುದ್ದಿಯನ್ನೂ ಓದಿ: ಗೂಗಲ್ ಡೂಡಲ್‌ನೊಂದಿಗೆ ಸಂಶೋಧಕ ಏಂಜೆಲೊ ಮೊರಿಯಾಂಡೊ ಜನ್ಮದಿನಾಚರಣೆ