ನವದೆಹಲಿ: ಇಂಡಿಗೋ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಡಿಸ್ಪೋಸೇಬಲ್ ಕಪ್‍ಗಳಲ್ಲಿ ಸಹ ಪ್ರಯಾಣಿಕರಿಗೆ ಚಹಾ ನೀಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಇಬ್ಬರು ಪುರುಷರು ಫ್ಲಾಸ್ಕ್‌ನಿಂದ ಚಹಾವನ್ನು ಸುರಿದು ಪ್ರಯಾಣಿಕರಿಗೆ ನೀಡಿದ್ದಾರೆ. ಈ ವಿಡಿಯೊವನ್ನು ಪೋಸ್ಟ್ ಮಾಡಿದ 24 ಗಂಟೆಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ನೆಟ್ಟಿಗರು ಈ ಘಟನೆಯ ಬಗ್ಗೆ ತಮಾಷೆ ಮಾಡಿದ್ದಾರೆ. “ನಿಯಮಗಳಿಗೆ ಏನಾಯಿತು..”ಎಂದು ಒಬ್ಬ ವ್ಯಕ್ತಿ ಹೇಳಿದರೆ, ಇನ್ನೊಬ್ಬರು “ವೃತ್ತಿಪರತೆ” ಬಗ್ಗೆ ದೂರು ನೀಡಿದ್ದಾರೆ..”ಇದಕ್ಕಾಗಿಯೇ ವಿದೇಶಿಯರು ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ” ಕ್ಯಾಬಿನ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದಾರೆ” ಎಂದು ಇನ್ನೊಬ್ಬರು ಕೇಳಿದ್ದಾರೆ.
ಒಂದೆರಡಲ್ಲ ಇಂಡಿಗೋ ವಿವಾದಗಳು
ಪ್ರಯಾಣಿಕರ ಸುರಕ್ಷತೆ, ಸೇವೆಯ ಗುಣಮಟ್ಟ ಮತ್ತು ವೃತ್ತಿಪರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಇಂಡಿಗೊಗೆ ಸಂಬಂಧಿಸಿದ ವಿವಾದಗಳ ಸರಣಿಯಲ್ಲಿ ಇದು ಇತ್ತೀಚಿನದು. ಈ ತಿಂಗಳ ಆರಂಭದಲ್ಲಿ, ಭಾರತಕ್ಕೆ ತೆರಳುತ್ತಿದ್ದ ಕನಿಷ್ಠ 400 ಪ್ರಯಾಣಿಕರು ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಆಹಾರ ಅಥವಾ ವಸತಿಯಿಲ್ಲದೆ 12 ಗಂಟೆಗಳ ಕಾಲ ಸಿಲುಕಿಕೊಂಡಿದ್ದರು. ಈ ಪರಿಸ್ಥಿತಿಯ ಬಗ್ಗೆ ತಿಳಿಸಲು ಇಂಡಿಗೋದ ಯಾವುದೇ ವ್ಯಕ್ತಿ ಗೇಟ್ ಬಳಿ ಇರಲಿಲ್ಲ ಎಂದು ಕೋಪಗೊಂಡ ಪ್ರಯಾಣಿಕರು ಹೇಳಿದ್ದಾರೆ.
ಇದಕ್ಕೂ ಮೊದಲು, ಸಹ ಪ್ರಯಾಣಿಕರೊಬ್ಬರು ತನ್ನ ತಾಯಿಯ ಕ್ಯಾಬಿನ್ ಸಾಮಾನುಗಳನ್ನು ಕದಿಯಲು ಪ್ರಯತ್ನಿಸಿದರು ಮತ್ತು ಸಿಬ್ಬಂದಿ ಪರಿಸ್ಥಿತಿಯನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಶೀ ಸೇಸ್ ಸಂಸ್ಥಾಪಕಿ ತ್ರಿಷಾ ಶೆಟ್ಟಿ ವಿಮಾನಯಾನ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. “ದೂರು ದಾಖಲಿಸಲು ಸಹಾಯ ಮಾಡಲು ನಿಮ್ಮ ಸಿಬ್ಬಂದಿ ನಿರಾಕರಿಸಿದರು. ” ಎಂದು ಅವರು ಹೇಳಿದ್ದರು.
ಕಳೆದ ತಿಂಗಳು 187 ಪ್ರಯಾಣಿಕರನ್ನು ಹೊತ್ತ ನಾಗ್ಪುರ-ಕೋಲ್ಕತಾ ಇಂಡಿಗೋ ವಿಮಾನದಲ್ಲಿ ಸುಳ್ಳು ಬಾಂಬ್ ಎಚ್ಚರಿಕೆಯನ್ನು ಹಂಚಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆ ವ್ಯಕ್ತಿ ಗುಪ್ತಚರ ಬ್ಯೂರೋ (ಐಬಿ) ಅಧಿಕಾರಿ ಎಂದು ನಂತರ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ:ಚಂಡಮಾರುರತ ಅಬ್ಬರಕ್ಕೆ ಹಡಗುಕಟ್ಟೆ ಸಂಪೂರ್ಣ ಧ್ವಂಸ; ಮುಂದೇನಾಯ್ತು? ವಿಡಿಯೊ ನೋಡಿ
ಇಂಡಿಗೊ ಇತ್ತೀಚೆಗೆ ಈ ವರ್ಷದ ವಿಶ್ವದ ಕೆಟ್ಟ ವಿಮಾನಯಾನ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ. ‘ಏರ್ ಹೆಲ್ಪ್ ಸ್ಕೋರ್ ರಿಪೋರ್ಟ್ 2024’ ರ ಪಟ್ಟಿಯಲ್ಲಿ 109 ರಲ್ಲಿ 103 ನೇ ಸ್ಥಾನದಲ್ಲಿದೆ. ಏರ್ ಇಂಡಿಯಾ 61ನೇ ಸ್ಥಾನದಲ್ಲಿದ್ದರೆ, ಏರ್ ಏಷ್ಯಾ 94ನೇ ಸ್ಥಾನದಲ್ಲಿದೆ.