ಮೆಲ್ಬರ್ನ್: ಆಸ್ಟ್ರೇಲಿಯಾ(AUS vs IND) ವಿರುದ್ಧ ಡಿ.26 ರಿಂದ ಆರಂಭಗೊಳ್ಳುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ನೂತನ ಮೈಲುಗಲ್ಲೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ ಒಟ್ಟು 133 ರನ್ ಕಲೆ ಹಾಕಿದರೆ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ದಾಖಲೆಯೊಂದು ಪತನಗೊಳ್ಳಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಭಾರತೀಯ ದಾಖಲೆ ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 5 ಪಂದ್ಯಗಳನ್ನಾಡಿ 449 ರನ್ ಬಾರಿಸಿದ್ದಾರೆ. ಸಚಿನ್ ಬಳಿಕ ಅಜಿಂಕ್ಯ ರಹಾನೆ 3 ಪಂದ್ಯಗಳಿಂದ 369 ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು 3 ಪಂದ್ಯಗಳಿಂದ 316 ರನ್ ಗಳಿಸಿದ್ದಾರೆ. ಕೊಹ್ಲಿ ಇದೀಗ 53 ರನ್ ಬಾರಿಸಿದರೆ, ರಹಾನೆ ದಾಖಲೆ, 133 ರನ್ ಬಾರಿಸಿದರೆ ಸಚಿನ್ ದಾಖಲೆ ಮುರಿಯಲಿದ್ದಾರೆ.
ಕೊಹ್ಲಿ ಪರ್ತ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ಮಂಕಾಗಿದ್ದಾರೆ. ಆ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ನಾಲ್ಕನೇ ಪಂದ್ಯದಲ್ಲಾದರೂ ನಿರೀಕ್ಷಿತ ಬ್ಯಾಟಿಂಗ್ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ Rohit Sharma: ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್ ವ್ಯಂಗ್ಯ ಉತ್ತರ
ಮೆಲ್ಬರ್ನ್ ಕ್ರೀಡಾಂಗಣದಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ಭಾರತೀಯ ದಾಖಲೆ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 2003ರಲ್ಲಿ 195 ರನ್ ಬಾರಿಸಿದ್ದರು. ಭಾರತ ತಂಡ ಕಳೆದೆರಡು ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಮೆಲ್ಬರ್ನ್ ಟೆಸ್ಟ್ನಲ್ಲಿ ಗೆದ್ದಿದೆ. 2018-19ರಲ್ಲಿ 137 ರನ್ಗಳಿಂದ ಜಯಗಳಿಸಿದ್ದರೆ, 2020-21ರಲ್ಲಿ ಭಾರತ 8 ವಿಕೆಟ್ ಜಯಭೇರಿ ಬಾರಿಸಿತ್ತು. ಒಟ್ಟಾರೆ ಈ ಕ್ರೀಡಾಂಗಣದಲ್ಲಿ ಭಾರತ ಆಡಿರುವ 14 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. 8 ಪಂದ್ಯಗಳಲ್ಲಿ ಸೋತಿದ್ದರೆ, 2 ಪಂದ್ಯ ಡ್ರಾಗೊಂಡಿವೆ.
ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಒಟ್ಟು 6 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆಗೈದ ಭಾರತದ 6ನೇ ವೇಗಿ ಎನಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ 12ನೇ ಭಾರತೀಯ ಬೌಲರ್ ಆಗಲಿದ್ದಾರೆ. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ಮಾತ್ರ 200 ಪ್ಲಸ್ ವಿಕೆಟ್ ಕಿತ್ತಿದ್ದಾರೆ.