Wednesday, 25th December 2024

Chalavadi Narayanaswamy: ಅನಿಲ್ ಲಾಡ್, ಕೇಜ್ರಿವಾಲ್, ರಮೇಶ್‍ಕುಮಾರ್, ಬಯ್ಯಾಪುರ ಹೇಳಿಕೆಗೆ ಕಾಂಗ್ರೆಸ್ ಉತ್ತರವೇನು?; ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

Chalavadi Narayanaswamy

ಬೆಂಗಳೂರು: ಈ ಸಂವಿಧಾನ ನೀಡಿದ್ದು ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಎಂದು ಮಾನ್ಯ ಅನಿಲ್ ಲಾಡ್ ಅವರು ಹೇಳಿದ್ದರು. ಅದು ದೊಡ್ಡದಾಗಿ ವೈರಲ್ ಆಗಿತ್ತು. ಆಗ ಒಬ್ಬ ಕಾಂಗ್ರೆಸ್ಸಿಗರೂ ಮಾತನಾಡಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಸೇವಿಸಿಯೇ ಸಂವಿಧಾನ ಬರೆದಿದ್ದಾರೆ (ದಾರು ಪೀಕೆ ಸಂವಿಧಾನ್ ಲಿಖಾ) ಎಂಬುದಾಗಿ ಇಂಡಿ ಒಕ್ಕೂಟದ ಕೇಜ್ರಿವಾಲ್ ಅವರು ಹೇಳಿದ್ದಾರೆ. ಇದು ವಿಡಿಯೋವಾಗಿ ಇದೆ. ಇದಕ್ಕೆ ಕಾಂಗ್ರೆಸ್ಸಿನ ಉತ್ತರ ಏನು? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Consumer Rights day 2024: ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ: ಜಾಗೃತಿಯೇ ರಕ್ಷಾ ಕವಚ

ಕಾಂಗ್ರೆಸ್ ಮುಖಂಡರು ತಮ್ಮ ಅವಮಾನ ಸಹಿಸಿಕೊಳ್ಳಲಾಗದೆ, ಅಮಿತ್ ಶಾ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದ ಅವರು, ಬಾಬಾ ಸಾಹೇಬರಿಗೆ ನಾವು ಅನ್ಯಾಯ ಮಾಡಿದ್ದೇವೆ, ಚುನಾವಣೆಯಲ್ಲಿ ಸೋಲಿಸಿದ್ದೇವೆ. ಅವರು ತೀರಿಕೊಂಡಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೂ ಜಾಗ ಕೊಟ್ಟಿಲ್ಲ; ಈ ದೊಡ್ಡ ಅಪರಾಧ ಕಾಂಗ್ರೆಸ್ಸಿನ ಮೇಲೆ ಇದೆ ಎಂದು ಸದನದಲ್ಲಿ ಮಾನ್ಯ ರಮೇಶ್‍ಕುಮಾರ್ ಅವರೇ ಒಪ್ಪಿಕೊಂಡಿದ್ದರು ಎಂದು ಗಮನ ಸೆಳೆದರು. ಕಾಂಗ್ರೆಸ್ಸಿನ ಬೇರೆಯವರು ಇದು ಸುಳ್ಳು ಎಂದಿಲ್ಲ. ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕೀಸಿದರು.

ಸಂವಿಧಾನ ಬದಲಿಸಲೇಬೇಕೆಂದು ರಾಜ್ಯದಲ್ಲಿ ಅಮರೇಗೌಡ ಬಯ್ಯಾಪುರ ಅವರು ಹೇಳಿದ ವಿಡಿಯೋ ನನ್ನ ಬಳಿ ಇದೆ. ಕಾಂಗ್ರೆಸ್ಸಿನ ಯಾರಾದರೂ ಇದನ್ನು ವಿರೋಧಿಸಿದ್ದೀರಾ ಎಂದು ಕೇಳಿದರು. ಅಂಬೇಡ್ಕರರ ಬಗ್ಗೆ ವಿಧವಿಧವಾಗಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಬಾಯಿ ಬಿಚ್ಚಿಲ್ಲ ಎಂದು ಟೀಕಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲಿತ ಕೆಲವು ಸಂಘಟನೆಗಳು, ಕಾಂಗ್ರೆಸ್ ಪ್ರೇರೇಪಣೆಯಿಂದ ಹಾಗೂ ಕಾಂಗ್ರೆಸ್ ಕೂಡ ಬೀದಿಗಿಳಿದು ಅವರ ಹೇಳಿಕೆಯನ್ನು ವಿರೋಧಿಸುತ್ತಿವೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | Mudra Loan: ಸಣ್ಣದಾಗಿ ಬ್ಯುಸಿನೆಸ್‌ ಮಾಡಬೇಕಾ? ಹಾಗಾದ್ರೆ, ಮುದ್ರಾ ಸ್ಕೀಮ್‌ನಲ್ಲಿ ಸಾಲ ಪಡೆಯಬಹುದು ನೋಡಿ!

ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂದು ಹಾಡು ಕೇಳಿದ್ದೇವೆ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಈ ಹೋರಾಟಗಾರರಿಗೆ ಅರ್ಥವಾದ ಸತ್ಯಾಂಶ ಏನು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.