Wednesday, 25th December 2024

Vinod Kambli Health Updates: ವಿನೋದ್‌ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ!

ʻlife-long free treatment to vinod Kambli at his medical facilityʼsays Dr Vivek Trived

ಮುಂಬೈ: ಅನಾರೋಗ್ಯದಿಂದಾಗಿ ಥಾಣೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ (Vinod Kambli Health Updates) ಜೀವಮಾನ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆಕೃತಿ ಆಸ್ಪತ್ರೆಯ ಡಾ. ವಿವೇಕ್‌ ತ್ರಿವೇದಿ ತಿಳಿಸಿದ್ದಾರೆ.

ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಕಾಂಬ್ಳಿ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದೆ. ಶನಿವಾರ ಅವರು ಇದ್ದಕ್ಕಿದ್ದಂತೆ ಪ್ರಜ್ಞಾಹೀನರಾಗಿದ್ದರು. ನಂತರ ಅವರನ್ನು ಥಾಣೆ ಜಿಲ್ಲೆಯ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಕೃತಿ ಆಸ್ಪತ್ರೆಯ ವೈದ್ಯರಾದ ಡಾ. ವಿವೇಕ್‌ ತ್ರಿವೇದಿ ಅವರು ಮಾಜಿ ಕ್ರಿಕೆಟಿಗನ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮೂತ್ರದ ಸೋಂಕು ಮತ್ತು ದೇಹದ ಸೆಳೆತದ ಬಗ್ಗೆ ವಿನೋದ್‌ ಕಾಂಬ್ಳಿ ಅವರು ದೂರು ನೀಡಿದ್ದರು ಹಾಗೂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಕೃತಿ ಆಸ್ಪತ್ರೆಯ ವೈದ್ಯರಾದ ಡಾ. ವಿವೇಕ್‌ ತ್ರಿವೇದಿ ತಿಳಿಸಿದ್ದಾರೆ. ಇದರ ಜೊತೆಗೆ ಅವರು ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಶಾಕಿಂಗ್‌ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಕ್ರಿಕೆಟಿಗನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಾಂಬ್ಳಿ ತಮ್ಮ ಕ್ರಿಕೆಟ್ ವೃತ್ತಿಜೀವನದ ಬಳಿಕ ಸಂಪೂರ್ಣವಾಗಿ ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದಾಗಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟಿತ್ತು. 2013ರಲ್ಲಿ ಅವರು ಒಮ್ಮೆ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಈ ವೇಲೆ ಬಾಲ್ಯದ ಗೆಳೆಯ ಸಚಿನ್‌ ತೆಂಡೂಲ್ಕರ್‌, ಕಾಂಬ್ಳಿಗೆ ಆರ್ಥಿಕ ಸಹಾಯ ಮಾಡಿದ್ದರು.

ಜೀವನ ಪರ್ಯಾಂತ ವಿನೋದ್‌ ಕಾಂಬ್ಳಿಗೆ ಉಚಿತ ಚಿಕಿತ್ಸೆ

ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ವಿನೋದ್ ಕಾಂಬ್ಳಿ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಆದರೆ, ಇದೀಗ ಅವರ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿರುವ ಕಾರಣ ಇಂದು ಅವರೇ ಬೆವರುತ್ತಿದ್ದಾರೆ. ಇವರ ಪರಿಸ್ಥಿತಿಯನ್ನು ನೋಡಿದ ಅಭಿಮಾನಿಗಳಿಗೂ ಕೂಡ ತುಂಬಾ ಬೇಸರವಾಗಿದೆ.
ಇತ್ತೀಚೆಗೆ ಅವರ ವೀಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅದರಲ್ಲಿ ಅವರು ತಮ್ಮ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿದ್ದರು.

ತಮ್ಮ ಕೋಚ್‌ ರಮಾಕಾಂತ್‌ ಆರ್ಚೇಕರ್‌ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿನೋದ್‌ ಕಾಂಬ್ಳಿ ಮಾನಸಿಕ ಸಮತೋಲನವಾಗಿರುವುದು ಕಂಡು ಬಂದಿತ್ತು. ಇದೀಗ ಆಕೃತಿ ಆಸ್ಪತ್ರೆಯ ವೈದ್ಯರಾದ ಡಾ. ವಿವೇಕ್‌ ತ್ರಿವೇದಿ ಅವರು, ಆರ್ಥಿಕ ಸಂಕಷ್ಟದಲ್ಲಿರುವ ವಿನೋದ್ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ವಿನೋದ್ ಕಾಂಬ್ಳಿ ಅವರ ವೃತ್ತಿಜೀವನ

ವಿನೋದ್ ಕಾಂಬ್ಳಿ 1993 ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎಡಗೈ ಬ್ಯಾಟ್ಸ್‌ಮನ್ ಭಾರತ ತಂಡದ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 1995ರಲ್ಲಿ ತಮ್ಮ ಕೊನೆಯ ಟೆಸ್ಟ್ ಮತ್ತು 2000ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸುವುದಕ್ಕೂ ಮುನ್ನ ಮುಂಬೈನಲ್ಲಿ ನಡೆದಿದ್ದ ಶಾಲಾ ಟೂರ್ನಿಯ ಪಂದ್ಯವೊಂದರಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ 664 ರನ್‌ಗಳ ಜೊತೆಯಾಟವನ್ನು ಮಾಡುವ ಮೂಲಕ ಅವರು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದರು.

ಈ ಸುದ್ದಿಯನ್ನು ಓದಿ: Vinod Kambli: ಚೇತರಿಕೆ ಕಂಡ ತಕ್ಷಣ ವಿನೋದ್ ಕಾಂಬ್ಳಿ ಹೇಳಿದ್ದೇನು?