ದೆಹಲಿ: ಮದುವೆ ಎಂದಾಕ್ಷಣ ಅನೇಕ ವಿಚಾರಗಳು ನಮಗೆ ಹೈಲೆಟ್ ಆಗುತ್ತವೆ. ಅದರಲ್ಲೂ ಇತ್ತೀಚೆಗಂತೂ ಟ್ರೆಂಡಿಂಗ್ ವೆಡ್ಡಿಂಗ್ ಕಾರ್ಡ್ (Wedding Card) ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರಲಿದೆ. ಕೆಲವೊಂದು ಕ್ರಿಯೇಟಿವ್ ಆಗಿ ಜನರ ಗಮನ ಸೆಳೆದರೆ ಇನ್ನೂ ಕೆಲವೊಂದು ವಿನ್ಯಾಸದಿಂದ ಜನರ ಗಮನ ಸೆಳೆಯಲಿದೆ. ಇತ್ತೀಚೆಗಷ್ಟೇ ಇಂತಹದ್ದೇ ಒಂದು ಮದುವೆ ಕಾರ್ಡ್(Wedding Card Goes Viral) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹಾಸ್ಯಾಸ್ಪದ ವೆಡ್ಡಿಂಗ್ ಕಾರ್ಡ್
ಕೆಲವೊಂದು ವಿಚಾರಗಳನ್ನು ಮನದಟ್ಟು ಮಾಡಲು ಹಾಸ್ಯದ ಹೊನಲು ಹರಿಸುವುದು ಬಹಳ ಪರಿಣಾಮಕಾರಿಯಾಗುವ ಸಾಧ್ಯತೆ ಇರಲಿದೆ. ಇದಕ್ಕೆ ಬೆಸ್ಟ್ ಉದಾಹರಣೆ ಈ ಹಿಂದಿ ಭಾಷೆಯ ಮದುವೆ ಕಾರ್ಡ್. ಇದರಲ್ಲಿ ಅನೇಕ ವಿಚಾರಗಳನ್ನು ಹಾಸ್ಯಾಸ್ಪದವಾಗಿ ತಿಳಿಸಿದ್ದರೂ ಕೂಡ ಅದರಲ್ಲಿ ಒಂದು ಸತ್ಯ ಅಂಶ ಕೂಡ ಅಳವಡಿಕೆ ಮಾಡಲಾಗಿದೆ. ಜನರು ಅದನ್ನು ಓದುವಾಗ ನಸುನಕ್ಕರೂ ಕೂಡ ಅದರಲ್ಲಿ ಜಾಗೃತಿ ಮೂಡಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾಮಿಡಿ ವೆಡ್ಡಿಂಗ್ ಕಾರ್ಡ್ ಲೀಸ್ಟ್ ನಲ್ಲಿ ಇದು ಸೇರಿರುವುದನ್ನು ನಾವು ಕಾಣಬಹುದು.
ಈ ವೆಡ್ಡಿಂಗ್ ಕಾರ್ಡ್ ನಲ್ಲಿ ಏನಿದೆ!
ಸಾಮಾಜಿಕ ಜಾಲತಾಣದ vimal_official_0001ಎಂಬ ಇನ್ಸ್ಟಾಗ್ರಾಂ ಖಾತೆ ಮೂಲಕ ಈ ಒಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಾಂಪ್ರದಾಯಿಕ ಮದುವೆ ಆಮಂತ್ರಣವನ್ನು ವಿಡಂಬನಾತ್ಮಕವಾಗಿ ಇಲ್ಲಿ ತಿಳಿಸಲಾಗಿದೆ. ಇದರಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಹಾಸ್ಯತ್ಮಕವಾಗಿ ಹೇಳಿದ್ದಾರೆ. ಖತರ್ನಾಕ್ ವಿವಾಹ್- ಮಾಸೂಮ್ ಭಾರತಿ ಎಂಬ ಬೋಲ್ಡ್ ಹೆಡ್ಡರ್ ಓದುವಿಕೆಯಿಂದ ಕಾರ್ಡ್ ಪ್ರಾರಂಭ ಆಗಲಿದ್ದು ಬಳಿಕ ಅದರ ಕೆಳಗೆ ಅಮಂಗಲ್ ಗುಟ್ಕ ಖಾದ್ಯಂ, ದುಃಖ ಮಾಂಕಂ, ಅಮಂಗಲಂ, ಸರ್ವವ್ಯಾಸನಂ ಇತರ ಪದಗಳ ಬಳಕೆ ಮಾಡಲಾಗಿದೆ.
ವಧು-ವರರ ಹೆಸರೇನು?
ಇದೊಂದು ಅಪಾಯಕಾರಿ ಮದುವೆ ಎಂದು ತಿಳಿಸಲಾಗಿದೆ. ಅದರಲ್ಲಿ ದುರದೃಷ್ಟಕರ ಬೀಡಿ ಕುಮಾರಿ ಅಲಿಯಾಸ್ ಸಿಗರೇಟ್ ಕುಮಾರಿ ಎಂಬ ವಧುವನ್ನು ಕ್ಯಾನ್ಸರ್ ಕುಮಾರ್ ಅಲಿಯಾಸ್ ಲೈಲಾಜ್ ಬಾಬು ಅವರೊಂದಿಗೆ ವಿವಾಹ ನಿಶ್ಚಯಿಸಿರುವುದಾಗಿ ತಿಳಿಸಲಾಗಿದೆ. ವಧುವಿನ ತಂದೆ-ತಾಯಿಯನ್ನು ತಂಬಾಕು ಲಾಲ್ ಜಿ ಮತ್ತು ಸುಲ್ಫಿ ದೇವಿಯ ದುರದೃಷ್ಟದ ಮಗಳು ಎಂದು ತಿಳಿಸಲಾಗಿದೆ. ಬಳಿಕ ವಧುವಿನ ನಿವಾಸದ ಹೆಸರನ್ನು 420 ಯಮ್ ಲೋಕ್ ಹೌಸ್, ದುಃಖ್ ನಗರ್ ಎಂದು ತಿಳಿಸಲಾಗಿದೆ. ವರನ ತಂದೆ ತಾಯಿಯನ್ನು ಗುಟ್ಕ ಲಾಲ್ ಜಿ ಹಾಗೂ ಭಗನ್ ದೇವಿಯ ದುರದೃಷ್ಟ ಮಗನೆಂದು ತಿಳಿಸಿ, ಗಲತ್ ರಾಸ್ತಾ ವ್ಯಾಸನ್ ಪುರ್(ನಶಾ ಪ್ರದೇಶ್) ನಲ್ಲಿ ವಿಳಾಸವೆಂದು ಆಮಂತ್ರಣ ಪತ್ರದಲ್ಲಿ ಸೂಚಿಸಿರುವುದು ಕಾಣಬಹುದು.
ಎಲ್ಲಿ ಈ ಮದುವೆ?:
ಈ ಅಶುಭ ವಿವಾಹವು ಸ್ಮಶಾನದ ಮೈದಾನದಲ್ಲಿ ಅನಿಶ್ಚಿತ ಸಮಯದಲ್ಲಿ, ಅನಿಶ್ಚಿತ ಸ್ಥಳದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಈ ಮೂಲಕ ತಂಬಾಕು, ಪಾನ್, ಗುಟ್ಕ, ಸಿಗರೇಟ್, ಕ್ಯಾನ್ಸರ್ ಅಪಾಯಕ್ಕೆ ಕಾರಣವಾಗಬಹುದು ಎಂಬ ಸೂಕ್ಷ್ಮ ವಿಚಾರವನ್ನು ಇಲ್ಲಿ ತಿಳಿಸಲು ಹೋಗಿರುವ ರೀತಿ ಬಹಳ ಅದ್ಭುತವಾಗಿದೆ.
ನೆಟ್ಟಿಗರಿಂದ ಮೆಚ್ಚುಗೆ:
ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂ ಮೂಲಕ ಈ ಒಂದು ಮದುವೆ ಕಾರ್ಡ್ ಪೋಸ್ಟ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. 14 ಸಾವಿರಕ್ಕೂ ಅಧಿಕ ಲೈಕ್ ಹಾಗೂ ಅತೀ ಹೆಚ್ಚು ಶೇರ್ ಕೂಡ ಮಾಡಲಾಗಿದೆ. ಕೆಲವು ನೆಟ್ಟಿಗರು ಇದನ್ನು ಮಾಡಿದವರ ಕ್ರಿಯೆಟಿವಿಟಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದರೆ, ಇನ್ನೂ ಕೆಲವೊಬ್ಬರು ಈ ವೆಡ್ಡಿಂಗ್ ಕಾರ್ಡ್ ಮಾಡಿದವರಿಗೆ ಒಂದು ಸೆಲ್ಯೂಟ್ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಈ ವೆಡ್ಡಿಂಗ್ ಕಾರ್ಡ್ ಬಹಳ ಮುಖ್ಯ ಪಾತ್ರ ವಹಿಸಲಿದೆ ಎನ್ನಬಹುದು.
ಇದನ್ನು ಓದಿ:Vastu Tips: ವಾಸ್ತು ಪ್ರಕಾರ ಮದುವೆ ಆಮಂತ್ರಣ ಪತ್ರಿಕೆ ಹೀಗಿರಬೇಕು