Thursday, 26th December 2024

Lokesh Kayarga Column: ನರ ಕೊಲ್ಲಲ್, ಪರ ಕಾಯ್ವನೇ ?

ಲೋಕಮತ

ಲೋಕೇಶ ಕಾಯರ್ಗ

ಸಂಸತ್ ಆಗಲಿ, ವಿಧಾನಮಂಡಲ ಆಗಲಿ, ಕಲಾಪ ನಡೆಯವುದೇ ಹೀಗೆ. ಇಲ್ಲಿ ಯಾವುದೇ ವಿಷಯಗಳು ಸಂಪೂರ್ಣ ಚರ್ಚೆಯಾಗಿ ತಾರ್ಕಿಕ ಅಂತ್ಯ ಕಾಣುವುದು ಅಪರೂಪದ ವಿದ್ಯಮಾನ.ಪ್ರಮುಖ ವಿಷಯವೊಂದರ ಮೇಲೆ ಚರ್ಚೆ ನಡೆಯುತ್ತಿತ್ತು ಎಂದುಕೊಳ್ಳಿ. ಆಡಳಿತ ಪಕ್ಷ ಇಲ್ಲವೇ ಪ್ರತಿಪಕ್ಷದ ಯಾರೋ ಒಬ್ಬರು ಮಾತಿನಲ್ಲೇ ಕಿಡಿ ಹೊತ್ತಿಸಿ ಬಿಡುತ್ತಾರೆ. ಅಲ್ಲಿಂದಾಚೆಗೆ ಆ ವಿಷಯವೇ ಮುಖ್ಯ. ಚರ್ಚೆಯಾಗಬೇಕಿರುವ ಪ್ರಮುಖ ವಿಷಯ ಎಲ್ಲೋ ಎಗರಿ ಬಿದ್ದಿರುತ್ತದೆ. ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ನಡೆಯಬೇಕಿದ್ದ ಚರ್ಚೆ ಇನ್ನೆಲ್ಲಿಗೋ ತಿರುಗಿದೆ. ಅಲ್ಲಿ ಹೊತ್ತಿದ ಕಿಡಿ ವಿಧಾನಮಂಡಲದಲ್ಲೂ ಪ್ರಜ್ವಲಿಸಿದೆ. ಹಿರಿಯರ ಸದನ ಎಂಬ ಗೌರವವನ್ನು ಎಂದೋ ಕಳೆದುಕೊಂಡಿರುವ ವಿಧಾನ ಪರಿಷತ್ತಿನಲ್ಲಿ ಇದು ಇನ್ನೂ ಅತಿರೇಕಕ್ಕೆ ಹೋಗಿ ದೇಶದ ‘ಸಂವಿಧಾನ’ಕ್ಕೆ ಬದ್ಧ ಎಂದು ಪ್ರತಿಜ್ಞೆ ಸ್ವೀಕರಿಸಿ ದವರು ಅಸಾಂವಿಧಾನಿಕ ಪದಗಳನ್ನು ಬಳಸುತ್ತಾ ತಮ್ಮ ನಡೆ, ನುಡಿಗಳಲ್ಲಿ ಬೆತ್ತಲಾಗಿ ನಿಂತಿದ್ದಾರೆ.

ಈ ನಡುವೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರೊಬ್ಬರು ಆಡಿದ ಮಾತೊಂದು ಬೆಂಕಿಯ ಕಿಡಿ ಹೊತ್ತಿಸಿದರೂ ಅಲ್ಲಿಗೇ ತಣ್ಣಗಾಯಿತು. ಬೆಳಗಾವಿ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪಶ್ಚಿಮ ಘಟ್ಟದಲ್ಲಿ ಕಾಡಾನೆ ಹಾವಳಿಯ ಕುರಿತು ಮಾತನಾಡುವಾಗ ಮಾತಿನ ಭರದಲ್ಲಿ ‘‘ಸರಕಾರ ಕಾಡಾನೆ ಹಾವಳಿ ತಡೆಗಟ್ಟಬೇಕು. ಇಲ್ಲವಾದರೆ ಅವುಗಳನ್ನು ಕೊಲ್ಲಲು ನಮಗೆ ಅವಕಾಶ ಕೊಡಬೇಕು’’ ಎಂದು ಹೇಳಿದ್ದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪೂಂಜ ಅವರ ಈ ಮಾತನ್ನು ಪ್ರಸ್ತಾಪಿಸಿ, ‘‘ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಇಂತಹ ಹೇಳಿಕೆ ನೀಡಬಾರದಿತ್ತು’’ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು. ಮರು ದಿನ ಮಾಧ್ಯಮ ಗಳಲ್ಲೂ ಪೂಂಜ ಅವರ ಈ ಹೇಳಿಕೆ ವರದಿಯಾಯಿತು. ಒಂದಷ್ಟು ವನ್ಯಜೀವಿ ಪ್ರೇಮಿಗಳು ಈ ಹೇಳಿಕೆಯನ್ನು ಖಂಡಿಸಿ ಮಾತನಾಡಿದರು. ಅಲ್ಲಿಗೆ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವನ್ಯಜೀವಿಗಳ ಹಾವಳಿಯ ವಿಷಯದ ಚರ್ಚೆಗೆ ತೆರೆ ಬಿತ್ತು. ಸದನದಲ್ಲಿ ಈ ಬಗ್ಗೆ ವಿಸ್ತ್ರತವಾಗಿ ಚರ್ಚೆಯಾಗದೆ ಅಂಕಿ ಅಂಶಗಳ ಮಂಡನೆಗಷ್ಟೇ ವಿಷಯ ಸೀಮಿತವಾಯಿತು.‌

ರಾಜ್ಯದಲ್ಲಿ ಇದುವರೆಗೆ ಯಾವುದೇ ರಾಜಕೀಯ ಪಕ್ಷ ಮಾನವ-ವನ್ಯಜೀವಿ ಸಂಘರ್ಷ ಕರ್ನಾಟಕದ ಪ್ರಮುಖ ಸಮಸ್ಯೆ ಎಂದು ಭಾವಿಸಿಲ್ಲ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿತ್ತು. ಮಹಾರಾಷ್ಟ್ರದಲ್ಲಿ ಕಾಡಾನೆ ದಾಳಿಯಲ್ಲಿ ಬಲಿಯಾಗುವವರ ಸಂಖ್ಯೆ ಹೆಚ್ಚು. ಆದರೆ ಆದರೆ ಪಶ್ಚಿಮ ಘಟ್ಟದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಹೊಂದಿರುವ, ಆನೆ, ಹುಲಿ, ಚಿರತೆ, ಕರಡಿ ಈ ನಾಲ್ಕೂ ಪ್ರಾಣಿಗಳ ಬಾಹುಳ್ಯ ಹೊಂದಿರುವ ಕರ್ನಾಟಕದ ಸಮಸ್ಯೆ ಮಹಾರಾಷ್ಟ್ರಕ್ಕಿಂತಲೂ ಗಂಭೀರವಾದುದು. ಇಲ್ಲಿ ಕಾಡಾನೆಯೊಂದೇ ಅಲ್ಲ, ಹುಲಿ, ಚಿರತೆ, ಕರಡಿಯಿಂದ ಹಿಡಿದು ಪ್ರಾಣ ಹಾನಿ ಅಲ್ಲದಿದ್ದರೂ ಅಪಾರ ಬೆಳೆ ನಷ್ಟ ಉಂಟು ಮಾಡುವ ಹಂದಿ, ನವಿಲು, ಜಿಂಕೆ, ಕೋತಿ ಮತ್ತಿತರ ನಾನಾ ವನ್ಯಮೃಗಗಳ ಉಪಟಳವಿದೆ. ಕಳೆದ 5 ವರ್ಷಗಳಲ್ಲಿ ವನ್ಯಮೃಗಗಳ ದಾಳಿಯಿಂದ 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 45 ರಿಂದ 50 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಅಂದರೆ ಪ್ರತಿ ತಿಂಗಳು ಸರಾಸರಿ ನಾಲ್ವರು ವನ್ಯಜೀವಿಗಳ ದಾಳಿಗೆ ಬಲಿಯಾಗುತ್ತಿದ್ದಾರೆ. ಇನ್ನು ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯ ಹೊಂದಿ ದವರು, ಬೆಳೆ ನಷ್ಟ ಅನುಭವಿಸಿದವರಿಗೆ ಲೆಕ್ಕವಿಲ್ಲ. ಆದರೆ ‘ಸಂವಿಧಾನ’ವನ್ನು ಎತ್ತಿ ಹಿಡಿಯಲು ಪೈಪೋಟಿ ನಡೆಸುತ್ತಿರುವ ನಾಯಕರಿಗೆ ಇವೆಲ್ಲವೂ ಚಿಲ್ಲರೆ ಸಮಸ್ಯೆಗಳು.

ಜ್ವಲಂತ ಸಮಸ್ಯೆ

ವನ್ಯಸಂಘರ್ಷದಲ್ಲಿ ಮನುಷ್ಯನಿಗೆ ಮುಖ್ಯ ಎದುರಾಳಿ ಕಾಡಾನೆಗಳು. ಅರಣ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 5 ವರ್ಷಗಳಲ್ಲಿ ಸುಮಾರು 100 ಮಂದಿ ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇದರ ಮೂರುಪಟ್ಟು ಮಂದಿ ತೀವ್ರವಾಗಿ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೊಳಗಾಗಿದ್ದಾರೆ.‌ ನಂತರದ ಸ್ಥಾನ ಹುಲಿ,ಚಿರತೆ, ಕರಡಿ, ಮೊಸಳೆ ದಾಳಿಯದ್ದು.

ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು, ಹಳೇ ಮೈಸೂರು ಭಾಗದ ಜಿಲ್ಲೆಗಳು, ಬೆಳಗಾವಿ ಸೇರಿದಂತೆ ಸುಮಾರು 14 ಜಿಲ್ಲೆಗಳು ಇಂದು ಕಾಡಾನೆ ದಾಳಿಯಿಂದ ತತ್ತರಿಸುತ್ತಿವೆ. ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿ ದಾಳಿ ಮತ್ತು ಹುಲಿಗಳ ಸಾವು ವರ್ಷದಿಂದ ವರ್ಷದಿಂದ ಏರುತ್ತಾ ಸಾಗಿದೆ. ಇನ್ನು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಬೆಳಗಾವಿ ಮಾತ್ರವಲ್ಲ ರಾಜಧಾನಿ ಬೆಂಗಳೂರಿನಲ್ಲೂ ಚಿರತೆಗಳ ದಾಳಿ ಆಗಾಗ ಸುದ್ದಿ ಯಾಗುತ್ತಲೇ ಇದೆ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಈ ಮೂರು ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ಇನ್ನು ಕೊಪ್ಪಳ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕರಡಿ ಕಾಟ ವಿಪರೀತವಾಗಿವೆ. ಅಂದರೆ ರಾಜ್ಯದ ಮುಕ್ಕಾಲು ಪಾಲು ಭಾಗ ಒಂದಲ್ಲ ಒಂದು ವನ್ಯಜೀವಿಗಳ ದಾಳಿಯಿಂದ ತೊಂದರೆ ಎದುರಿಸುತ್ತಿವೆ. ವಿಧಾನಮಂಡಲದಲ್ಲಿ ಇಂತಹ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದು ವನ್ಯಜೀವಿ- ಮಾನವ ಸಂಘರ್ಷಕ್ಕೆ ಶಾಶ್ವತ ತಡೆ ಹಾಕುವ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಹಿಂದಿನ ಸರಕಾರ ಮತ್ತು ಹಾಲಿ ಸರಕಾರದ ಹಗರಣ ಮತ್ತು ಮಾನಗೇಡಿ ಪ್ರಕರಣಗಳ ಗದ್ದಲದಲ್ಲಿ ಸಾಮಾನ್ಯ ಜನರ ಸಮಸ್ಯೆಗಳು ಸದನದಲ್ಲಿ ಧ್ವನಿಸುತ್ತಿಲ್ಲ.

ಕಾಡಾನೆ ದಾಳಿಯದ್ದೇ ಚಿಂತೆ

ಕಾಡಾನೆ ದಾಳಿ ಪ್ರಕರಣಗಳು ಪ್ರತೀ ವರ್ಷ ಜಿಲ್ಲೆಯಿಂದ ಜಿಲ್ಲೆಗೆ ವಿಸ್ತಾರಗೊಳ್ಳುತ್ತಿವೆ. ದಕ್ಷಿಣ ಕನ್ನಡದಲ್ಲಿ ಆನೆ ದಾಳಿಗೆ ಸಿಲುಕಿ ಮೃತಪಟ್ಟ ಪ್ರಕರಣ ಕೇಳರಿಯದ ವಿದ್ಯಮಾನ. ಕಳೆದ ವರ್ಷ ಕಡಬ ತಾಲ್ಲೂಕು ಒಂದರಲ್ಲಿಯೇ ನಾಲ್ವರು ಆನೆ ದಾಳಿಗೆ ಬಲಿಯಾಗಿದ್ದಾರೆ. ಹಾಸನ, ಕೊಡಗು, ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಸಮಸ್ಯೆ ಈಗ ಪಶ್ಚಿಮಘಟ್ಟದ ನಂಟು ಹೊಂದಿದ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳು, ಶಿವಮೊಗ್ಗ, ಉತ್ತರಕನ್ನಡ,ಉಡುಪಿ ಸೇರಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕಾಡಾನೆ ದಾಳಿಯ ಸುದ್ದಿಗಳು ಆಗಾಗ ವರದಿಯಾಗುತ್ತಿವೆ. ಕಳೆದ ವರ್ಷ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಪರಿಣತ ಸಿಬ್ಬಂದಿ, ಅರ್ಜುನನಂತಹ ಪರಾಕ್ರಮಶಾಲಿ ಆನೆ ಬಲಿಯಾಗಿದ್ದು ಮತ್ತೊಂದು ದುರಂತ.

ಕಾಡಾನೆ ದಾಳಿಯಲ್ಲಿ ಅತಿ ಹೆಚ್ಚು ಪ್ರಾಣ ಹಾನಿ, ಬೆಳೆ ಹಾನಿಗೆ ಗುರಿಯಾಗಿದ್ದು ಹಾಸನ ಮತ್ತು ಕೊಡಗು ಜಿಲ್ಲೆಗಳು. ಈ ಎರಡು ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ 50ಕ್ಕೂ ಹೆಚ್ಚು ಜನ ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. 100ಕ್ಕೂ ಹೆಚ್ಚು ಮಂದಿ ಅಂಗವೈಕಲ್ಯಕ್ಕೀಡಾಗಿದ್ದಾರೆ.

ಕೊಡಗಿನ ಬಹುತೇಕ ಭಾಗ , ಹಾಸನದ ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಕಲಗೂಡು ಭಾಗದಲ್ಲಿ , ಚಿಕ್ಕಮಗಳೂರಿನ ಮೂಡಿಗೆರೆ, ಎನ್. ಆರ್.ಪುರ, ಕೊಪ್ಪ ಭಾಗದಲ್ಲಿ ದಕ್ಷಿಣಕನ್ನಡದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಈಗ ಇಳಿ ಸಂಜೆಯಾದರೆ ರಸ್ತೆಗಳು ಬಿಕೋ ಎನ್ನುತ್ತವೆ. ಯಾವಾಗ, ಎಲ್ಲಿ ಆನೆ ದಾಳಿ ಮಾಡುತ್ತದೋ ಎಂಬ ಭಯ. ರಾತ್ರಿ ವೇಳೆ ಹಿಂಡು ಹಿಂಡಾಗಿ ಬರುವ 10-15ರಷ್ಟು ಸಂಖ್ಯೆಯ ಕಾಡಾನೆಗಳು ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿದರೆ, ಹಗಲಿನ ವೇಳೆ ಒಂಟಿ ಆನೆಗಳ ಕಾಟ. ಶಿರಾಡಿ ಹೆದ್ದಾರಿಯಲ್ಲಿ, ಘಟ್ಟದ ಕೆಳಗಿನ ಭಾಗದಲ್ಲೂ ಈಗ ಕಾಡಾನೆಗಳು ಹಗಲಲ್ಲಿ ಕಾಣಿಸಿಕೊಳ್ಳುತ್ತಿವೆ. ನಡು ರಸ್ತೆಗೆ ಬಂದು ನಿಲ್ಲುವ ಒಂಟಿ ಸಲಗಗಳು ವಾಹನಗಳನ್ನು ಅಡ್ಡಗಟ್ಟಿ ಸತಾಯಿಸುವ ಪ್ರಕರಣಗಳು ಇತ್ತೀಚೆಗೆ ಪದೇ ಪದೆ ನಡೆಯುತ್ತಿವೆ. ಕೆಲ ವಾರಗಳ ಹಿಂದೆ ಕಾಡಾನೆಯೊಂದು ನೇರವಾಗಿ ಕುಕ್ಕೆ ಸುಬ್ರಮಣ್ಯದ ರಥ ಬೀದಿಗೆ ಬಂದು ನಿರ್ಭಯವಾಗಿ ಸಂಚರಿಸಿತ್ತು. ಇದು ಆನೆ ಪಥ ವಿಸ್ತರಣೆಯ ಸೂಚನೆ.

ಪಾಳು ಭೂಮಿ, ಪಟ್ಟಣ ಸೇರಿದ ವಿದ್ಯಾರ್ಥಿಗಳು

ಆನೆ ಹಾವಳಿಯಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿ ಒಂದೆಡೆಯಾದರೆ ಇದರ ಪರೋಕ್ಷ ಪರಿಣಾಮಗಳು ಇನ್ನೂ ಘೋರ. ಆನೆ ಕೊಡಗು, ಹಾಸನ ಜಿಲ್ಲೆಯ ನೂರಾರು ರೈತರು ಈಗ ತಮ್ಮ ಫಲವತ್ತಾದ ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಇಲ್ಲಿ ಸಾಗುವಳಿ ಮಾಡಲು ಕಾರ್ಮಿಕರಾರೂ ಮುಂದೆ ಬರುತ್ತಿಲ್ಲ. ಅದೆಷ್ಟೋ ಕಾರ್ಮಿಕರು ಗದ್ದೆ ಕೆಲಸಕ್ಕೆ, ಕಾಫಿ ಕೆಲಸಕ್ಕೆ ಬರುವ ವೇಳೆ, ಕೆಲಸ ಮುಗಿಸಿ ಹಿಂತಿರುಗುವಾಗ ಆನೆ ದಾಳಿಗೆ ಗುರಿಯಾಗಿದ್ದಾರೆ. ಆನೆ, ಹುಲಿ ದಾಳಿಯ ಪ್ರಕರಣಗಳು ಆಗಾಗ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ನಡೆದುಕೊಂಡು ಹೋಗಲೂ ಭಯಪಡುವಂತಾಗಿದೆ. ಪ್ರಾಣ ಭಯದಲ್ಲೇ ಸಂಚರಿಸುವ ವಿದ್ಯಾರ್ಥಿಗಳು ಒಂದೆರಡು ಕಿ.ಮೀ ದೂರಕ್ಕೂ ವಾಹನಗಳನ್ನು ಆಶ್ರಯಿಸಬೇಕಾಗಿದೆ. ವನ್ಯ ಮೃಗಗಳ ಭಯದಿಂದ ಕೆಲವರು ತಮ್ಮ ಎಳೆಯ ಮಕ್ಕಳನ್ನು ಮಂಗಳೂರು, ಮೈಸೂರು ಭಾಗದ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಓದಿಸುತ್ತಿದ್ದಾರೆ. ‘‘ಆನೆಗಳನ್ನು ಗುಂಡಿಟ್ಟು ಕೊಲ್ಲಲು ಅನುಮತಿ ನೀಡಿ’’ ಎಂಬ ಕೂಗಿನ ಹಿಂದೆ ಈ ರೀತಿಯ ಹಲವು ನೋವು, ಸಂಕಟ, ನರಳಾಟಗಳಿವೆ. ಸರಕಾರ, ಅಧಿಕಾರಿಗಳು ಮತ್ತು ವನ್ಯಜೀವಿ ಪ್ರಿಯರು ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಕಿರಿದಾದ ಅರಣ್ಯ, ಹಿರಿದಾದ ಗಜಪಡೆ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಡಾನೆಗಳ ಸಂತತಿ ಮತ್ತು ಕೇರಳ, ತಮಿಳುನಾಡಿನಿಂದ ರಾಜ್ಯಕ್ಕೆ ವಲಸೆ ಬರುತ್ತಿರುವ ಕಾಡಾನೆಗಳಿಗೆ ಇಲ್ಲಿನ ಕಿರುಗಾತ್ರದ ಅರಣ್ಯ ಸಾಕಾಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ಗಜಸಂತತಿ ಹೊಂದಿರುವ ರಾಜ್ಯದಲ್ಲಿ ಇತ್ತೀಚಿನ ಗಣತಿ ಪ್ರಕಾರ 7 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಇವುಗಳಲ್ಲಿ ಶೇಕಡಾ 60 ರಷ್ಟು ಆನೆಗಳು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ಹೊರಬಂದು ಸಂಚರಿಸಿ ಮತ್ತೆ ಕಾಡಿಗೆ ಹೋಗುತ್ತವೆ. ಕೆಲವು ಆನೆಗಳು ಸಾವಿರ ಚದರ ಕಿ.ಮೀ ವಿಸ್ತೀರ್ಣದಲ್ಲಿ ಸುತ್ತಾಡಿದ ಉದಾಹರಣೆಗಳಿವೆ. ತಜ್ಞರ ಪ್ರಕಾರ ಹಾಸನ, ಕೊಡಗು ಪ್ರದೇಶದಲ್ಲಿ ಒಂದು ಆನೆ 700-800 ಚದರ ಕಿಲೋಮೀಟರ್ ಓಡಾಡುತ್ತದೆ. ಈ ಓಡಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಫಿ, ಅಡಕೆ ತೋಟದ ನಾಶ, ಬತ್ತದ ಗದ್ದೆ, ಬಾಳೆ ತೋಟ, ಜೋಳ ಮುಂತಾದ ಬೆಳೆಗಳು ನಾಶವಾಗುವುದರ ಜೊತೆಗೆ ಎದುರಿಗೆ ಸಿಕ್ಕ ಮನುಷ್ಯ, ಜಾನುವಾರುಗಳು ದಾಳಿಗೆ ಎರವಾಗುತ್ತಾರೆ.

ಕಳೆದ ಎರಡು ದಶಕಗಳಲ್ಲಿ ಆಹಾರ ಅರಸಿ ಕಾಡಿನಿಂದ ಹೊರಗೆ ಬಂದ ಅದೆಷ್ಟೋ ಆನೆಗಳು ಕಾಫಿತೋಟಗಳನ್ನೇ ತಮ್ಮ ಆವಾಸಸ್ಥಾನಗಳನ್ನಾಗಿ ಮಾಡಿಕೊಂಡು ಅಲ್ಲಿ ಸಿಗುವ ಆಹಾರವನ್ನೇ ಸೇವಿಸಿ ಜೀವಿಸುತ್ತಿವೆ. ಹೊಸ ಸಂತತಿಯ ಆನೆಗಳು ಕಾಫಿ ತೋಟಗಳಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆಯುತ್ತಿವೆ. ಕಾಡಿನ ಪರಿಚಯವಿಲ್ಲದ ಈ ಆನೆಗಳನ್ನು ಎಲ್ಲಿಗೆ ಓಡಿಸಿದರೂ ಮತ್ತೆ ಇದೇ ಪ್ರದೇಶಗಳಿಗೆ ವಾಪಸ್ ಬರುತ್ತವೆ ಎನ್ನುವುದು ತಜ್ಞರ ಮಾತು.

ಕಾರಿಡಾರ್ ಬಂದ್

ಹಾಸನ ಜಿಲ್ಲೆಯಲ್ಲಿ ಸುಮಾರು 70ರಷ್ಟು, ಕೊಡಗಿನಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ. ಹಾಸನ ಜಿಲ್ಲೆಯಲ್ಲಿ ಈವರೆಗೆ 60ಕ್ಕೂ ಹೆಚ್ಚು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಿ ದರೂ ಆನೆಗಳು ಹಿಂಡು ಹಿಂಡಾಗಿ ಬರುತ್ತಲೇ ಇವೆ. ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯಗಳು ಮತ್ತು ಇತ್ತೀಚಿನ ಎತ್ತಿನಹೊಳೆ ಯೋಜನೆಗಳು, ರೈಲ್ವೆ ಮಾರ್ಗ, ಹೆದ್ದಾರಿಗಳು ಆನೆಗಳ ಕಾರಿಡಾರ್‌ಗೆ ಧಕ್ಕೆ ತಂದಿವೆ. ಹಿಂದೆ ಕೊಡಗಿನಿಂದ ಬರುತ್ತಿದ್ದ ಆನೆಗಳು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಈ ಮೂರು ಜಿಲ್ಲೆಗಳ ದೊಡ್ಡ ಕಾರಿಡಾರ್ ಹೊಂದಿದ್ದವು, ಇನ್ನೊಂದು ಕಡೆ ಚಾಮರಾಜನಗರದಿಂದ ಬನ್ನೇರುಘಟ್ಟದವರೆಗೆ ಹಿರಿದಾದ ಆನೆ ಪಥ ಇತ್ತು. ಈಗ ಎಲ್ಲವೂ ಬೇರೆ ಬೇರೆ ಕಾರಣಕ್ಕೆ ಸಂಪರ್ಕ ಕಡಿದುಕೊಂಡಿವೆ. ತಮ್ಮ ಸಾಂಪ್ರದಾಯಿಕ ಮಾರ್ಗ ಮತ್ತು ನೆಲೆಗಳನ್ನು ಕಳೆದುಕೊಂಡ ಆನೆಗಳು ಆಹಾರವನ್ನು ಅರಸುತ್ತಾ ಘಟ್ಟದ ಕೆಳಗೂ, ಘಟ್ಟದ ಮೇಲಿನ ಭಾಗದಲ್ಲೂ ಸಂಚರಿಸಲಾರಂಭಿಸಿವೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಅರಣ್ಯ ಉಪಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಆನೆ ಕಾರ‌್ಯಪಡೆ ರಚಿಸಿರುವ ಸರಕಾರ ಗಜಸಂರಕ್ಷಣೆ, ಹಾವಳಿ ತಡೆ ಮತ್ತು ಪರಿಹಾರದ ನೆಪದಲ್ಲಿ ಪ್ರತೀ ವರ್ಷ ನೂರಾರು ಕೋಟಿ ರು. ವ್ಯಯಿಸುತ್ತಿದೆ. ದಾಳಿ ತಡೆಗಟ್ಟಲು ಕಂದಕ ನಿರ್ಮಾಣ, ಸೋಲಾರ್ ಬೇಲಿ, ರೈಲ್ವೆ ಕಂಬಿಗಳ ತಡೆ, ಕಾಡಂಚಿನಲ್ಲಿ ಜೇನು ಪೆಟ್ಟಿಗೆ ಕೃಷಿ ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸಿದರೂ ಬುದ್ಧಿವಂತ ಆನೆಯ ಪಾಲಿಗೆ ಇವೆಲ್ಲ ನಗಣ್ಯ ಎನಿಸಿವೆ. ‘ಹರ ಕೊಲ್ಲಲ್ ಪರ ಕಾಯ್ವನೇ’ ಎಂಬ ಮಾತಿದೆ. ಆನೆ ಮತ್ತು ಮನುಷ್ಯರ ಪಾಲಿಗೆ ಇದು ‘ನರ ಕೊಲ್ಲಲ್ ಪರ ಕಾಯ್ವನೇ ?’ ಎನ್ನುವಂತಾಗಿದೆ. ದಾಳಿ ಮಾಡಿದ ಆನೆಗಳ ಮೇಲೆ ಮನುಷ್ಯ ಸೇಡಿಗಿಳಿದರೆ ಕಾಡಾನೆಗಳ ಸಂತತಿಗೆ ಧಕ್ಕೆ. ಹಾಗೆಯೇ ಬಿಟ್ಟರೆ ಮನುಷ್ಯರ ಜೀವಕ್ಕೆ ಅಪಾಯ. ‌

ಗಜ ಸಂತತಿಯ ರಕ್ಷಣೆ ಮತ್ತು ಮನುಷ್ಯರ ಪ್ರಾಣ, ಸೊತ್ತಿನ ರಕ್ಷಣೆ ಈ ಎರಡೂ ಗುರುತರ ಜವಾಬ್ದಾರಿ ಸರಕಾರದ ಮುಂದಿದೆ.

ಇದನ್ನೂ ಓದಿ: Lokesh Kayarga Column: ಮನಸ್ಸಿನ ಬಡತನಕ್ಕೆ ಪಡಿತರ ಉಂಟೇ ?