Thursday, 26th December 2024

Rajendra Bhat Column: ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿ

atal bihari vajpayee

ಸ್ಫೂರ್ತಿಪಥ ಅಂಕಣ: ಹ್ಯಾಪಿ ಬರ್ತಡೇ ಐಕಾನ್! ಬದುಕಿದ್ದರೆ ಇಂದವರಿಗೆ 100 ತುಂಬುತ್ತಿತ್ತು

rajendra bhat
  • ರಾಜೇಂದ್ರ ಭಟ್ ಕೆ.

Rajendra Bhat Column: ‘ನನಗೆ ಅಷ್ಟೊಂದು ಎತ್ತರವನ್ನು ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!’
ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ!

ವಾಜಪೇಯಿ ಬದುಕಿದ ರೀತಿಯೇ ಹಾಗಿತ್ತು. ಅವರ ರಾಜಕೀಯ ವಿರೋಧಿಗಳೂ ಅವರನ್ನು ಟೀಕೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು.

ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ ಅಧ್ಯಾಪಕನ ಮಗನಾಗಿ. ಹಿಂದೀ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿಗಳನ್ನು ಪಡೆದ ನಂತರ ರಾಜನೀತಿ ಶಾಸ್ತ್ರದಲ್ಲಿ ಅವರು ಸ್ನಾತಕೋತ್ತರ ಪದವಿಯನ್ನು ಪಡೆದರು. ಬಾಲ್ಯದಲ್ಲಿಯೇ ಆರ್.ಎಸ್.ಎಸ್. ಪ್ರಭಾವಕ್ಕೆ ಒಳಗಾದ ವಾಜಪೇಯಿ ಒಬ್ಬ ಆರೆಸಸ್ ಪೂರ್ಣಕಾಲಿಕ ಪ್ರಚಾರಕರಾಗಿ ದುಡಿದರು. ದೀನ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮಪ್ರಸಾದ ಮುಖರ್ಜಿ ಅವರ ದಟ್ಟವಾದ ಪ್ರಭಾವಕ್ಕೆ ಒಳಗಾಗಿ ಜನಸಂಘವನ್ನು ಸೇರಿದರು. ಬಹು ಕಾಲ ಪತ್ರಕರ್ತರಾಗಿ ದುಡಿದರು. ಪಾಂಚಜನ್ಯ ಮತ್ತು ರಾಷ್ಟ್ರಧರ್ಮ ಹಿಂದೀ ಪತ್ರಿಕೆಗಳಲ್ಲಿ ಅವರ ಪ್ರಖರ ಲೇಖನ ಮತ್ತು ಕವಿತೆಗಳು ಭಾರೀ ಜನಪ್ರಿಯವಾದವು.

52 ವರ್ಷ ಸಂಸದರಾಗಿದ್ದರು ಅಟಲ್!

1957ರಲ್ಲಿ ಮೊದಲನೇ ಬಾರಿಗೆ ಲೋಕಸಭೆಗೆ ಅಟಲಜಿ ಆಯ್ಕೆ ಆದರು. ವಿಪಕ್ಷದ ಎಂಪಿ ಆಗಿದ್ದ ಅವರು ಲೋಕಸಭೆಯಲ್ಲಿ ಮಾಡುತ್ತಿದ್ದ ಪ್ರಖರವಾದ ಭಾಷಣಗಳನ್ನು ಗಮನಿಸಿದ ಪ್ರಧಾನಿ ನೆಹರೂ ಅವರ ಬಳಿಗೆ ಬಂದು ಬೆನ್ನು ತಟ್ಟಿ ‘ನೀನು ಖಂಡಿತವಾಗಿ ಮುಂದೆ ಪ್ರಧಾನಿ ಆಗ್ತೀಯಾ’ ಎಂದಿದ್ದರು. 1957ರಿಂದ 2009ರವರೆಗೆ 52 ವರ್ಷಗಳ ಕಾಲ, ಹತ್ತು ಅವಧಿಗೆ ವಾಜಪೇಯಿ ಲೋಕಸಭೆಯ ಸದಸ್ಯರಾಗಿ ಮೆರೆದರು.1984ರ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದ ಲೋಕಸಭೆಯ ಚುನಾವಣೆಯಲ್ಲಿ ಅವರು ಒಮ್ಮೆ ಗ್ವಾಲಿಯರನಿಂದ ಸೋತಿದ್ದರು. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲುವಾಸ ಕೂಡ ಅವರು ಅನುಭವಿಸಿದ್ದರು.

ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಮಂತ್ರಿ

1977ರಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿ ಆದಾಗ ವಾಜಪೇಯಿ ವಿದೇಶಾಂಗ ಸಚಿವರಾಗಿ ಭಾರೀ ಜನಪ್ರಿಯರಾದರು. ಅವರ ಎರಡು ವರ್ಷಗಳ ಅವಧಿಯು ಅತ್ಯಂತ ಸ್ಮರಣೀಯವಾದದ್ದು. ಅದೇ ಹೊತ್ತಲ್ಲಿ ಅವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದೀ ಭಾಷಣ ಮಾಡಿದ್ದು! ಅದೊಂದು ಚಾರಿತ್ರಿಕ ದಾಖಲೆ.

ಭಾರತೀಯ ಜನತಾ ಪಕ್ಷದ ಮೊದಲ ಅಧ್ಯಕ್ಷ

ಮುಂದೆ ಬಿಜೆಪಿಯು ಸ್ಥಾಪನೆ ಆದಾಗ (1980) ವಾಜಪೇಯಿ ಅದರ ಮೊದಲ ಅಧ್ಯಕ್ಷರಾದರು. ಮುಂದೆ ಮೂರು ಬಾರಿ ಅವರು ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 1996ರಲ್ಲಿ ಕೇವಲ 13 ದಿನ ಪ್ರಧಾನಿ ಆದರು. ಆದರೆ ಬಹುಮತದ ಕೊರತೆಯಿಂದ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ 1999ರಲ್ಲಿ ಮತ್ತೆ ಪ್ರಧಾನಿ ಆದರು. ಈ ಬಾರಿ 13 ತಿಂಗಳು ಪ್ರಧಾನಿ ಆಗಿದ್ದರು. ಈ ಬಾರಿ ಒಂದು ಮತದ ಕೊರತೆಯಿಂದ ಅಧಿಕಾರ ತ್ಯಜಿಸಿದರು.

‘ಮೈ ಸತ್ತಾ ಚೋಡ್ ದೂಂಗಾ ‘

ಅವರು 1999 ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಾಡಿದ ನಿರ್ಗಮನ ಭಾಷಣವು ಎಲ್ಲರಿಗೂ ಕಣ್ಣೀರು ತರಿಸಿತ್ತು. ಆ ಭಾಷಣ ನಾನು ಹಲವು ಬಾರಿ ಕೇಳಿದ್ದೇನೆ.

ಮುಂದೆ 1999ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತವನ್ನು ಪಡೆದು ಅವರು ಅಧಿಕಾರಕ್ಕೆ ಬಂದರು. ಈ ಬಾರಿ ಐದು ವರ್ಷ ಪೂರ್ತಿ ಅಧಿಕಾರ ನಡೆಸಿದರು. ಈ ಅವಧಿಯನ್ನು ತಮ್ಮ ಚಾಣಾಕ್ಷ ನಡೆಗಳಿಂದ, ಪ್ರಭಾವಶಾಲಿ ಭಾಷಣಗಳಿಂದ, ತನ್ನ ಶ್ರೇಷ್ಠವಾದ ನಾಯಕತ್ವದ ಗುಣಗಳಿಂದ ಸ್ಮರಣೀಯವನ್ನಾಗಿ ಮಾಡಿದರು.

ಪ್ರಧಾನಿಯಾಗಿದ್ದಾಗ ಹತ್ತಾರು ಸವಾಲುಗಳು

ಅವರ ಅಧಿಕಾರದ ಅವಧಿಯಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣ, ಪಾರ್ಲಿಮೆಂಟ್ ಭವನದ ಮೇಲೆ ಭಯೋತ್ಪಾದಕರ ದಾಳಿ ಮೊದಲಾದ ಸಂಕಷ್ಟಗಳು ಎದುರಾದರೂ ವಾಜಪೇಯಿ ಎಲ್ಲವನ್ನೂ ಗೆದ್ದರು. ಎಲ್ಲರನ್ನೂ ಗೆದ್ದರು.

ಕಾರ್ಗಿಲ್ ವಿಜಯ, ಪಾಕಿಸ್ತಾನಕ್ಕೆ ಸಂಜೋತಾ ಏಕ್ಸಪ್ರೆಸ್ ಓಡಿಸಿ ಸೌಹಾರ್ದಹಸ್ತವನ್ನು ಚಾಚಿದ್ದು, ಅತ್ಯಂತ ಯಶಸ್ವೀ ಆದ ಪೋಕ್ರಾನ್ ನ್ಯೂಕ್ಲಿಯರ್ ಟೆಸ್ಟ್, ಕಠಿಣವಾದ ಭಯೋತ್ಪಾದನಾ ನಿಗ್ರಹ ಕಾನೂನು, ಸರ್ವ ಶಿಕ್ಷಾ ಅಭಿಯಾನದ ಆರಂಭ, ದೇಶದ ಉದ್ದಗಲಗಳನ್ನು ಬೆಸೆಯುವ ಸುವರ್ಣ ಚತುಷ್ಪಥ ಹೆದ್ದಾರಿಯ ಕಾಮಗಾರಿ…… ಮೊದಲಾದ ವಿಧಾಯಕ ನಡೆಗಳಿಂದ ಅವರ ಅವಧಿಯು ಅತ್ಯಂತ ಯಶಸ್ವೀ ಆಯಿತು.

ಗೃಹಮಂತ್ರಿ ಆಗಿದ್ದ ಲಾಲ್ ಕೃಷ್ಣ ಅಡ್ವಾಣಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಮತ್ತು ಅಟಲ್ ಜಿ ಅವರ ಜೋಡಿಯು ಸೂಪರ್ ಹಿಟ್ ಆಗಿತ್ತು! ವಾಜಪೇಯಿ ಅವರ ವರ್ಚಸ್ಸು, ಬುದ್ದಿವಂತಿಕೆ, ಹೃದಯ ಶ್ರೀಮಂತಿಕೆ, ಭಾರೀ ದಿಟ್ಟ ನಡೆಗಳು ಇವೆಲ್ಲವೂ ಭಾರತೀಯರ ಹೃದಯದಲ್ಲಿ ಅವರಿಗೆ ಶಾಶ್ವತ ಸ್ಥಾನವನ್ನು ತಂದುಕೊಟ್ಟವು.

ರಾಷ್ಟ್ರ ಕಂಡ ಶ್ರೇಷ್ಠ ಭಾಷಣಕಾರ

ನಾನು ವಾಜಪೇಯಿಜಿ ಅವರನ್ನು ಆರಾಧನೆ ಮಾಡಲು ಪ್ರಮುಖ ಕಾರಣ ಅವರ ಅದ್ಭುತವಾದ ಭಾಷಣಗಳು. ಎದುರಿನ ಕುರ್ಚಿಯಲ್ಲಿ ಕುಳಿತು ಅವರ 15-20 ಭಾಷಣಗಳನ್ನು ಆಸ್ವಾದಿಸುವ ಆವಕಾಶ ನನಗೆ ಬೇರೆ ಬೇರೆ ಕಡೆಗಳಲ್ಲಿ ಸಿಕ್ಕಿತ್ತು. ಅವರು ನನ್ನೂರು ಕಾರ್ಕಳಕ್ಕೆ ಕೂಡ ಬಂದಿದ್ದರು.

ಅವರ ಭಾಷಣಗಳ ಶಕ್ತಿ ಅದ್ಭುತ! ಇಂಗ್ಲಿಷ್ ಮತ್ತು ಹಿಂದಿಗಳಲ್ಲಿ ಅವರ ಭಾಷಣಕ್ಕೆ ಮಾರು ಹೋಗದವರೆ ಇಲ್ಲ. ಹಿಂದೀ ಭಾಷೆಯಲ್ಲಿ ಅವರ ಭಾಷಣಗಳು ಹಾಸ್ಯ, ವ್ಯಂಗ್ಯ, ಶಾಯರಿ, ಗಾದೆ, ಉದಾಹರಣೆ, ಕುಟುಕು, ಮೊನಚು, ಲಾಲಿತ್ಯ…. ಮೊದಲಾದವುಗಳಿಂದ ಶ್ರೀಮಂತ ಆಗಿರುತ್ತಿದ್ದವು. ಎಂದಿಗೂ ಅವರು ಸಭಾ ಮರ್ಯಾದೆಯನ್ನು ಮೀರಿದ ಉದಾಹರಣೆಯೇ ಇಲ್ಲ!

ಇಂದಿರಾಜೀ, ಮುಜೆ ಜವಾಬ್ ದೀಜಿಯೆ!

ಎಂದವರು ಗೌರವಪೂರ್ಣವಾಗಿ ತಮ್ಮ ಮಾತುಗಳನ್ನು ಆರಂಭ ಮಾಡುತ್ತಿದ್ದರು. ಅವರಷ್ಟು ದೊಡ್ಡ ಸಂಖ್ಯೆಯ ಜನಸಂದೋಹವನ್ನು ಭಾಷಣದ ಮೂಲಕ ಆಕರ್ಷಣೆ ಮಾಡುವ ಶಕ್ತಿಯು ಆಗ ಯಾರಿಗೂ ಇರಲಿಲ್ಲ! ದೇಶದ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಕೂಡ ತಾನು ವಾಜಪೇಯಿ ಅವರ ಭಾಷಣದ ಅಭಿಮಾನಿ, ಅವರ ಭಾಷಣಗಳನ್ನು ಕೇಳಲು ನಾನು ಪರ್ದಾ ಹಾಕಿಕೊಂಡು ಹೋಗಿ ಮೈದಾನದಲ್ಲಿ ನಿಲ್ಲುತ್ತಿದ್ದೆ ಎಂದಿದ್ದಾರೆ! ಈಗಲೂ ಯು ಟ್ಯೂಬ್ ವೇದಿಕೆಯಲ್ಲಿ ಅವರ ಪ್ರಬುದ್ಧ ಭಾಷಣಗಳನ್ನು ವೀಕ್ಷಿಸುವಾಗ ರೋಮಾಂಚನ ಆಗುತ್ತದೆ.

ವಾಜಪೇಯಿ ಕೂಡ 1971ರ ಯುದ್ಧವನ್ನು ಇಂದಿರಾಗಾಂಧಿ ಗೆದ್ದಾಗ ಆಕೆಯನ್ನು ದುರ್ಗಾ ಎಂದು ಸಂಭೋದನೆ ಮಾಡಿದ್ದರು! ವಾಜಪೇಯಿ ಎಂದಿಗೂ ಕೆಸರು ಎರಚುವ ಭಾಷಣ ಮಾಡಿದ್ದೇ ಇಲ್ಲ. ಅವರ ಭಾಷಣಗಳ ಬಗ್ಗೆ ಹತ್ತಾರು ಪುಸ್ತಕಗಳು ಬಂದಿವೆ. ವಿಶ್ವಸಂಸ್ಥೆಯಲ್ಲಿ ಅವರು ಮಾಡಿದ ಹಿಂದೀ ಭಾಷಣವು ಅತ್ಯಂತ ಅಮೋಘ ಆಗಿದೆ.

ವಾಜಪೇಯಿಜಿ ನೇಪಥ್ಯಕ್ಕೆ

2009ರಲ್ಲೀ ವಾಜಪೇಯಿಜಿ ಸಕ್ರಿಯವಾದ ರಾಜಕಾರಣದಿಂದ ನಿವೃತ್ತರಾದರು. 2015ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿಯು ದೊರೆಯಿತು. 2018 ಆಗಸ್ಟ್ 16ರಂದು ಅವರು ತಮ್ಮ ಇಹಲೋಕದ ಯಾತ್ರೆಯನ್ನು ಮುಗಿಸಿದರು. ಅವರ ಹುಟ್ಟುಹಬ್ಬದ ದಿನವನ್ನು ಭಾರತ ಸರಕಾರವು ರಾಷ್ಟ್ರೀಯ ಸುಶಾಸನ ದಿನ (Good Governance Day)ವನ್ನಾಗಿ 2014ರಿಂದ ಆಚರಿಸಿಕೊಂಡು ಬರುತ್ತಿದೆ.

ಅವರಿಗೆ ನಮ್ಮ ನಮನಗಳು.