ಜಗತ್ತಿನಾದ್ಯಂತ ಕ್ರೈಸ್ತರು ಮತ್ತು ಇತರರೆಲ್ಲ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ (Festival) ಪ್ರಮುಖವಾದ್ದು ಕ್ರಿಸ್‌ಮಸ್ (Christmas). ಕ್ರೈಸ್ತರಲ್ಲದವರಿಗೆ ಕೂಡ ಸಾಂತಾಕ್ಲಾಸ್ (Santa Claus) ಎಂದರೆ ಆಕರ್ಷಣೆ. ನಕ್ಷತ್ರಗಳು, ಕ್ರಿಸ್‌ಮಸ್ ಟ್ರೀ, ಹಚ್ಚಿಟ್ಟ ಕ್ಯಾಂಡಲ್‌ಗಳು, ಸಿಹಿತಿನಿಸು, ದಾನ ಧರ್ಮ ಇವೆಲ್ಲ ಕ್ರಿಸ್‌ಮಸ್ ಹಬ್ಬದ ಭಾಗ. ಝಗಮಗಿಸುವ ಚರ್ಚ್‌ಗಳು, ವಿದ್ಯುತ್ ದೀಪಗಳಿಂದ ಮಿನುಗುವ ಕ್ರಿಸ್‌ಮಸ್ ಟ್ರೀ (Christmas Tree), ಚರ್ಚ್‌ಗಳಲ್ಲಿ ಪ್ರಾರ್ಥನೆ, ಸಾಂತಾನಿಂದ ಮಕ್ಕಳಿಗೆ ಸಪ್ರೈಸ್ ಉಡುಗೊರೆಗಳು, ಕೈಯಲ್ಲಿ ವೈನ್ ಗ್ಲಾಸ್, ಬಗೆಬಗೆಯ ಕೇಕ್‌ಗಳ ಸ್ವಾದ… ಈ ಎಲ್ಲಾ ವಿಶೇಷತೆಗಳನ್ನು ಈ ಹಬ್ಬದಲ್ಲಿ ಕಾಣಬಹುದು.
ಪ್ರೀತಿ, ಶಾಂತಿ, ಸೌಹಾರ್ದತೆ ಸಾರಿದ ಏಸುಕ್ರಿಸ್ತನ ಸ್ಮರಣೆಯ ಹಬ್ಬವೇ ಕ್ರಿಸ್‌ಮಸ್. ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾದರೂ ಇದನ್ನು ಇಂದು ಜಗತ್ತಿನೆಲ್ಲೆಡೆ ಡಿಸೆಂಬರ್ 25ರಂದು ಆಚರಿಸುತ್ತಾರೆ. ಕ್ರಿಸ್‌ಮಸ್‌ನ ಸಂಭ್ರಮ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24ರಿಂದ ಪ್ರಾರಂಭವಾಗುತ್ತದೆ. ಭಾರತದಲ್ಲಿಯೂ ಕ್ರಿಶ್ಚಿಯನ್ ಧರ್ಮದ ಜೊತೆಗೆ ಎಲ್ಲಾ ಧರ್ಮದ ಜನರು ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಕ್ರಿಸ್‌ಮಸ್ ಹಬ್ಬದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಕ್ರಿಸ್‌ಮಸ್ ಹಬ್ಬವನ್ನು ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ಅಂದರೆ ಡಿಸೆಂಬರ್ 24ರಿಂದ ಆಚರಿಸುತ್ತಾರೆ. ಡಿಸೆಂಬರ್ 24ರ ಮಧ್ಯರಾತ್ರಿ ಜನ ಚರ್ಚ್‌ಗೆ ಹೋಗುತ್ತಾರೆ. ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ತಮ್ಮ ದೇವನಾದ ಯೇಸು ಕ್ರಿಸ್ತನನ್ನು ಈ ದಿನ ನೆನೆಯುತ್ತಾರೆ. ನಂತರ ಕ್ರಿಸ್‌ಮಸ್ ಹಬ್ಬದ ದಿನದಂದು ಪರಸ್ಪರ ಅಭಿನಂದಿಸಿ ಮತ್ತು ಉಡುಗೊರೆಗಳನ್ನು ವಿತರಿಸುತ್ತಾರೆ.
ಕ್ರಿಸ್‌ಮಸ್ ಹಬ್ಬದ ಪ್ರಾಮುಖ್ಯತೆ
ಒಂದು ಕಾಲದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದ. ಆತನೇ ಜೀಸಸ್ ಅಥವಾ ಯೇಸು ಕ್ರಿಸ್ತ. ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್ ಹಬ್ಬದ ಕುರಿತು ಇದೆ.
ಕ್ರಿಸ್‌ಮಸ್ ಇತಿಹಾಸ
ಕ್ರಿಸ್‌ಮಸ್‌ನ ಆಚರಣೆ ಹಲವು ಶತಮಾನಗಳ ಹಿಂದಿನದು. ಕ್ರಿಸ್‌ಮಸ್ ಅನ್ನು ಮೊದಲು ರೋಮ್ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿಸೆಂಬರ್ 25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಗುತ್ತಿತ್ತು. ಆ ಸಮಯದಲ್ಲಿ, ರೋಮ್‌ನ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ಮುಖ್ಯ ದೇವತೆಯಾಗಿ ಪರಿಗಣಿಸುತ್ತಿದ್ದರು ಮತ್ತು ಸೂರ್ಯದೇವನನ್ನು ಪೂಜಿಸುತ್ತಿದ್ದರು.
ಆದರೆ ಕ್ರಿ.ಶ. 330 ರ ಹೊತ್ತಿಗೆ, ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು. ರೋಮ್‌ನಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆ ಹೆಚ್ಚಾಯಿತು. ಇದಾದ ನಂತರ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ಯೇಸುಕ್ರಿಸ್ತನನ್ನು ದೇವನ ಅವತಾರವೆಂದು ಒಪ್ಪಿಕೊಂಡರು ಮತ್ತು ಅಂದಿನಿಂದ ಕ್ರಿಸ್‌ಮಸ್ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯವು ಡಿಸೆಂಬರ್ 25ರಂದು ಪ್ರಾರಂಭವಾಯಿತು.
ಆಚರಣೆ ಹೇಗೆ?
ಕ್ರಿಶ್ಚಿಯನ್ ಧರ್ಮದ ಜನರಿಗೆ ಇದು ಸಾಂಪ್ರದಾಯಿಕ ಹಬ್ಬ. ಪರಸ್ಪರ ಕ್ರಿಸ್‌ಮಸ್ ಕಾರ್ಡ್ ಉಡುಗೊರೆ ನೀಡುವುದು, ಚರ್ಚ್‌ಗೆ ಹೋಗಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸುವುದು ಜೊತೆಗೆ ಮನೆಗಳನ್ನು ಕ್ರಿಸ್‌ಮಸ್ ಟ್ರೀ ಹಾಗೂ ಹೂಗಳಿಂದ ಅಲಂಕರಿಸುತ್ತಾರೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ವಿಶೇಷ ಆಹಾರ ಸವಿದು ಸಂಭ್ರಮಿಸುತ್ತಾರೆ. ಯೇಸುವಿನ ನೆನಪಿಗಾಗಿ ಗೋಶಾಲೆಯನ್ನು ನಿರ್ಮಿಸುತ್ತಾರೆ. ಈ ಗೋಶಾಲೆಯು ಕುರುಬರೊಂದಿಗಿನ ಯೇಸುವಿನ ಬಾಲ್ಯವನ್ನು ಚಿತ್ರಿಸುತ್ತದೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುತ್ತಾರೆ. ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುತ್ತಾರೆ. ಕ್ರಿಸ್ಮಸ್‌ಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವ ಮೂಲಕ ಕ್ರಿಸ್‌ಮಸ್ ಹಬ್ಬ ಆಚರಿಸುತ್ತಾರೆ. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ನಂಬಿಕೆ. ‘ಸಾಂಟಾ ಕ್ಲಾಸ್’ ಅಂದ್ರೆ ‘ಸಂತಾ ನಿಕೋಲಾಸ್’. ಇವರು 4ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತಾ ನಿಕೋಲಾಸ್ ಪ್ರಸಿದ್ಧ.