ಮೆಲ್ಬರ್ನ್: ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ(AUS vs IND) ಮಾಧ್ಯಮಗಳು ಮೈಂಡ್ ಗೇಮ್ ಆಡಲು ಮುಂದಾಗಿದೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾರನ್ನು ಗುರಿಯಾಗಿಸಿಕೊಂಡು ಬೌಲಿಂಗ್ ಶೈಲಿಯನ್ನು ಪ್ರಶ್ನಿಸಿದೆ. ಈ ಮೂಲಕ ಭಾರತ ತಂಡವನ್ನು ಮಾನಸಿಕವಾಗಿ ಹಣಿಯಲು ಸಜ್ಜಾಗಿದೆ.
ಜಸ್‌ಪ್ರೀತ್ ಬುಮ್ರಾ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರು. ಯಾರ್ಕರ್ ಎಸೆತಗಳ ವಿಕೆಟ್ ಕಿತ್ತು ಮಿಂಚಿದ್ದರು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಖ್ಯಾತ ಟೀವಿ ನಿರೂಪಕ ಇಯಾನ್ ಮಾರಿಸ್ ಇಲ್ಲ ಸಲ್ಲದ ಸುಳ್ಳು ಆರೋಪವೊಂದನ್ನು ಮಾಡಿದ್ದಾರೆ. ‘ಏಕೆ ಬುಮ್ರಾ ಬೌಲಿಂಗ್ ಶೈಲಿಯನ್ನು ಯಾರು ಪ್ರಶ್ನಿಸುತ್ತಿಲ್ಲ? ಅವರು ಕೈಯನ್ನು ಬಳಸುವ ರೀತಿಯನ್ನೊಮ್ಮೆ ಪರೀಕ್ಷಿಸಬೇಕು’ ಎಂದಿದ್ದಾರೆ. ಇದನ್ನು ಭಾರತೀಯ ಅಭಿಮಾನಿಗಳು ಟೀಕಿಸಿದ್ದಾರೆ.
ದಾಖಲೆ ಸನಿಹ ಬುಮ್ರಾ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಒಟ್ಟು 6 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆಗೈದ ಭಾರತದ 6ನೇ ವೇಗಿ ಎನಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ 12ನೇ ಭಾರತೀಯ ಬೌಲರ್ ಆಗಲಿದ್ದಾರೆ. ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮ್ಮದ್ ಶಮಿ ಮಾತ್ರ 200 ಪ್ಲಸ್ ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ AUS vs IND MCG Test: ಸಚಿನ್, ರಹಾನೆ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಭಾರತ ತಂಡ ಕಳೆದೆರಡು ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಮೆಲ್ಬರ್ನ್ ಟೆಸ್ಟ್‌ನಲ್ಲಿ ಗೆದ್ದಿದೆ. 2018-19ರಲ್ಲಿ 137 ರನ್‌ಗಳಿಂದ ಜಯಗಳಿಸಿದ್ದರೆ, 2020-21ರಲ್ಲಿ ಭಾರತ 8 ವಿಕೆಟ್ ಜಯಭೇರಿ ಬಾರಿಸಿತ್ತು. ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಒಟ್ಟಾರೆ ಈ ಕ್ರೀಡಾಂಗಣದಲ್ಲಿ ಭಾರತ ಆಡಿರುವ 14 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. 8 ಪಂದ್ಯಗಳಲ್ಲಿ ಸೋತಿದ್ದರೆ, 2 ಪಂದ್ಯ ಡ್ರಾಗೊಂಡಿವೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಭಾರತೀಯ ದಾಖಲೆ ಸದ್ಯ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 5 ಪಂದ್ಯಗಳನ್ನಾಡಿ 449 ರನ್ ಬಾರಿಸಿದ್ದಾರೆ. ಸಚಿನ್ ಬಳಿಕ ಅಜಿಂಕ್ಯ ರಹಾನೆ 3 ಪಂದ್ಯಗಳಿಂದ 369 ರನ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು 3 ಪಂದ್ಯಗಳಿಂದ 316 ರನ್ ಗಳಿಸಿದ್ದಾರೆ. ಕೊಹ್ಲಿ ಇದೀಗ 53 ರನ್ ಬಾರಿಸಿದರೆ, ರಹಾನೆ ದಾಖಲೆ, 133 ರನ್ ಬಾರಿಸಿದರೆ ಸಚಿನ್ ದಾಖಲೆ ಮುರಿಯಲಿದ್ದಾರೆ.