ನವದೆಹಲಿ: ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಯ ಶಿಫಾರಸು ಪಟ್ಟಿಯಲ್ಲಿ ಮನು ಭಾಕರ್(Manu Bhaker) ಹೆಸರು ಇಲ್ಲದ ಕಾರಣ ಸೃಷ್ಟಿಯಾಗಿದ್ದ ವಿವಾದ ಕೊನೆಗೂ ಬಗೆ ಹರಿಯುವ ಸಾಧ್ಯತೆಯೊಂದು ಕಂಡುಬಂದಿದೆ. ಪ್ರಶಸ್ತಿ ಕಡೆಗಣನೆಯ ಬಗ್ಗೆ ತನ್ನ ತಂದೆ ಮತ್ತು ಕೋಚ್ ಕ್ರೀಡಾ ಸಚಿವಾಲಯದ ವಿರುದ್ಧ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಮನು ಭಾಕರ್ ಅರ್ಜಿ ಸಲ್ಲಿಸುವ ವೇಳೆ ತನ್ನಿಂಲೇ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಿದರೂ, ಇದು ಅಂತಿಮ ಪಟ್ಟಿ ಅಲ್ಲ. ಮನು ಹೆಸರನ್ನು ಪಟ್ಟಿಗೆ ಸೇರಿಸಲು ಇನ್ನೂ ಅವಕಾಶವಿದೆ ಎಂದು ಕ್ರೀಡಾ ಸಚಿವಾಲಯ ಸ್ಪಷ್ಟನೇ ನೀಡಿದ್ದರೂ ಮನು ತಂದೆ ರಾಮ್‌ಕಿಶನ್ ಭಾಕರ್, ಮಗಳನ್ನು ಶೂಟರ್ ಮಾಡು ತಪ್ಪು ಮಾಡಿದೆ. ಆಕೆಯನ್ನು ಕ್ರಿಕೆಟರ್ ಮಾಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ಕೋಚ್ ಜಸ್ವಾಲ್ ರಾಣಾ ಕೂಡ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಶೂಟಿಂಗ್ ಸಂಸ್ಥೆಯನ್ನು ದೂರಿಸಿದ್ದರು. ಪ್ರಶಸ್ತಿಗೆ ಮನು ಹೆಸರನ್ನು ಕಡೆಗಣಿಸಿದರೆ ಆಕೆಯ ಆತ್ಮವಿಶ್ವಾಸಕ್ಕೆ ಹೊಡೆತ ಬೀಳಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮನು ಭಾಕರ್ ಸ್ಪಷ್ಟನೆ ನೀಡಿದ್ದಾರೆ.
‘ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ನನ್ನ ನಾಮನಿರ್ದೇಶನದ ಕುರಿತು ನಡೆಯುತ್ತಿರುವ ಚರ್ಚೆಗೆ ಸಂಬಂಧಿಸಿ ಸ್ಪಷ್ಟೀಕರಣ ನೀಡಲು ಬಯಸುವೆ. ಕ್ರೀಡಾಪಟುವಾಗಿ ನನ್ನ ದೇಶದ ಪರ ಆಡಿ ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ. ನನ್ನ ಪ್ರಕಾರ ಕೆಲವೊಂದು ತಪ್ಪಾಗಿರಬಹುದು. ಬಹುಶಃ ಅರ್ಜಿ ಸಲ್ಲಿಸುವಾಗ ನನ್ನಿಂದಲೇ ತಪ್ಪಾಗಿರಲೂಬಹುದು. ಅದನ್ನು ಸರಿಪಡಿಸಲಾಗುವುದು’ ಎಂದು ಭಾಕರ್ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಮನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಮಹಿಳೆಯರ 10m ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತು ಇನ್ನೊಂದು ಮಿಶ್ರ 10m ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೆ ಮತ್ತೊಂದು ಪದಕ ಜಯಿಸಿದ್ದರು. ಮನು ಭಾಕರ್ 2020 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಗೆದ್ದಿದ್ದರು.
ಇದನ್ನೂ ಓದಿ Manu Bhaker: ಕ್ರೀಡಾ ಸಚಿವಾಲಯದ ವಿರುದ್ಧ ಗುಡುಗಿದ ಮನು ಭಾಕರ್ ತಂದೆ
ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಕ್ಸ್ ಚಿನ್ನದ ಪದಕ ವಿಜೇತ ಪ್ರವೀಣ್ ಕುಮಾರ್ ಅವರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಸದ್ಯ ವರದಿಯಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಾಮ ಸುಬ್ರಮಮ್ ನೇತೃತ್ವದಲ್ಲಿರುವ 12 ಮಂದಿಯನ್ನೊಳಗೊಂಡ ರಾಷ್ಟ್ರೀಯ ಕ್ರೀಡಾ ದಿನ ಸಮಿತಿಯ ಸದಸ್ಯರು ಖೇಲ್ ರತ್ನಕ್ಕೆ ಭಾಕರ್ ಹೆಸರನ್ನು ಶಿಫಾರಸು ಮಾಡಿಲ್ಲ ಎನ್ನಲಾಗಿದೆ.