Friday, 27th December 2024

Physical Assault: ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಣ್ಣಾ ವಿವಿಯಲ್ಲಿ ಇದೆಂಥಾ ಪೈಶಾಚಿಕ ಕೃತ್ಯ!

ಚೆನ್ನೈ: ತಮಿಳುನಾಡಿನ(Tamil Nadu) ಅಣ್ಣಾ ವಿಶ್ವವಿದ್ಯಾನಿಲಯದ (Anna University) ಕ್ಯಾಂಪಸ್ ನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ(Engineering Student) ಮೇಲೆ ಇಬ್ಬರು ವ್ಯಕ್ತಿಗಳು ಬುಧವಾರ(ಡಿ.25) ಬೆಳಗ್ಗೆ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ಕೋತ್ತೂರ್‌ಪುರಂ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 64 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ(Physical Assault).

ಮುಂಜಾನೆ ಸಮೀಪದ ಚರ್ಚ್‌ನಲ್ಲಿ ಕ್ರಿಸ್‌ಮಸ್ ಪ್ರಾರ್ಥನೆ ಮುಗಿಸಿ ಹಿಂದಿರುಗಿದ ನಂತರ ಯುವತಿ ಹಾಗೂ ಆಕೆಯ ಸ್ನೇಹಿತ ಕ್ಯಾಂಪಸ್‌ನಲ್ಲಿ ಒಟ್ಟಿಗೆ ಕುಳಿತಿದ್ದಾಗ ಈ ಹೀನ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆರೋಪಿಗಳು ಮೊದಲು ಹುಡುಗಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ನಂತರ ಆಕೆಯನ್ನು ಪೊದೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಆಕೆಯ ಸ್ನೇಹಿತ ಕೂಡ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎನ್ನಲಾಗಿದೆ. ಅತ್ಯಾಚಾರಿಗಳು ಹೊರಗಿನವರೋ ಅಥವಾ ಕ್ಯಾಂಪಸ್‌ನ ವಿದ್ಯಾರ್ಥಿಗಳೋ ಎಂದು ತಿಳಿಯಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಘಟನೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ(K.Annamalai) ಪ್ರತಿಕ್ರಿಯಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. “ಡಿಎಂಕೆ ಸರ್ಕಾರದಡಿ ತಮಿಳುನಾಡು ಕಾನೂನುಬಾಹಿರ ಚಟುವಟಿಕೆಗಳ ತಾಣವಾಗಿದೆ ಮತ್ತು ಅಪರಾಧಿಗಳ ಆಶ್ರಯ ತಾಣವಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲದಂತಾಗುತ್ತದೆ, ಯಾಕೆಂದರೆ ರಾಜ್ಯ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ಗೆ ಸಾಧ್ಯವಾಗಲಿಲ್ಲ” ಎಂದು ಅವರು ಟೀಕಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಕೋಲ್ಕತ್ತಾದ ಆರ್‌ ಜಿ ಕರ್‌ ಕಾಲೇಜಿನ ಟ್ರೈನಿ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಸಾಕ್ಷಿ ನಾಶದ ಆರೋಪದ ಮೇಲೆ ಕಾಲೇಜಿನ ಪ್ರಾಂಶುಪಾಲ ಮತ್ತು ಎಫ್‌ಐಆರ್‌ ದಾಖಲು ಮಾಡಲು ವಿಳಂಬ ಮಾಡಿದ ಪೊಲೀಸ್‌ ಅಧಿಕಾರಿಯನ್ನು ಬಂಧಿಸಲಾಗಿತ್ತು. ಇನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ಕ್ಯಾಂಪಸ್‌ನಲ್ಲಿ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. 22 ವರ್ಷದ ಮಹಿಳೆ ತನ್ನ ಸ್ನೇಹಿತನನ್ನು ಭೇಟಿಯಾಗಲು ತನ್ನ ಹಾಸ್ಟೆಲ್‌ನಿಂದ ಹೊರಬಂದಾಗ ಮೂವರು ಪುರುಷರು ಆಕೆಯನ್ನು ದಾರಿತಪ್ಪಿಸಿ, ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿತ್ತು.

ಈ ಸುದ್ದಿಯನ್ನೂ ಓದಿ:CT Ravi Case: ಸಿ.ಟಿ. ರವಿ ಪ್ರಕರಣದಲ್ಲಿ ಕರ್ತವ್ಯ ಲೋಪ; ಖಾನಾಪುರ ಠಾಣೆಯ ಸಿಪಿಐ ಸಸ್ಪೆಂಡ್‌