ಹೈದರಾಬಾದ್: ಪುಷ್ಪಾ2 ನಟ ಅಲ್ಲು ಅರ್ಜುನ್(Allu Arjun) ಒಳಗೊಂಡ ಸಂಧ್ಯಾ ಥಿಯೇಟರ್(Sandhya Theatre) ಕಾಲ್ತುಳಿತ ಪ್ರಕರಣದ(Pushpa 2 Stampede) ಸುತ್ತ ನಡೆಯುತ್ತಿರುವ ಹತ್ತು ಹಲವು ವಿವಾದಗಳ ನಡುವೆ ಹೈದರಾಬಾದ್ ಪೊಲೀಸರು(Hyderabad Police) ಡಿಸೆಂಬರ್ 4 ರ ಘಟನೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುವುದು ಅಥವಾ ತಪ್ಪುದಾರಿಗೆಳೆಯುವ(Misleading) ವಿಡಿಯೊಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬುಧವಾರ(ಡಿ.25) ಎಚ್ಚರಿಕೆ ನೀಡಿದ್ದಾರೆ.
#HyderabadPolice Warns Strict Action against False #Propaganda :
— Surya Reddy (@jsuryareddy) December 25, 2024
"Strict Action will be taken if anyone posts #False information and #Misleading videos on #SocialMedia about #SandhyaTheatreStampede incident."
"It seems like there was a stampede before #AlluArjun 's arrival.… pic.twitter.com/VkTsstA2K7
ಅಲ್ಲು ಅರ್ಜುನ್ ಥಿಯೇಟರ್ಗೆ ಆಗಮಿಸುವ ಮೊದಲೇ ಕಾಲ್ತುಳಿತ ಸಂಭವಿಸಿದೆ ಎಂದು ಕೆಲವು ವ್ಯಕ್ತಿಗಳು ತಪ್ಪಾಗಿ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ‘ಎಕ್ಸ್’ ಪೋಸ್ಟ್ನಲ್ಲಿ ಪೊಲೀಸರು ತಿಳಿಸಿದ್ದಾರೆ. “ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯ ಬಗ್ಗೆ ಜನರನ್ನು ದಾರಿ ತಪ್ಪಿಸುವ ಮತ್ತು ಸುಳ್ಳು ಮಾಹಿತಿಯನ್ನು ಹಂಚುವ ವಿಡಿಯೊಗಳನ್ನು ಯಾರಾದರೂ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದರೆ ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಅಲ್ಲು ಅರ್ಜುನ್ ಬರುವ ಮುನ್ನವೇ ಕಾಲ್ತುಳಿತ ನಡೆದಿದೆ ಎಂದು ಕೆಲವರು ಸುಳ್ಳು ವಿಡಿಯೊಗಳನ್ನು ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಘಟನೆಯ ತನಿಖೆ ವೇಳೆ ತಿಳಿದು ಬಂದಿರುವ ಸಂಗತಿಗಳನ್ನು ಪೊಲೀಸ್ ಇಲಾಖೆ ಈಗಾಗಲೇ ವಿಡಿಯೋ ರೂಪದಲ್ಲಿ ಸಾರ್ವಜನಿಕರ ಮುಂದಿಟ್ಟಿದೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಅರ್ಜುನ್ ಬರುವ ಮುನ್ನ ಕಾಲ್ತುಳಿತ ಸಂಭವಿಸಿದೆ ಎಂದು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ವಿಡಿಯೊಗಳನ್ನು ಶೇರ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಕರಣದ ತನಿಖೆ ನಡೆಯುತ್ತಿರುವಾಗ ಉದ್ದೇಶಪೂರ್ವಕವಾಗಿ ಇಂತಹ ಸುಳ್ಳು ಪ್ರಚಾರವನ್ನು ಹರಡುವವರ ವಿರುದ್ಧ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆಯ ತನಿಖೆ ವಿರುದ್ಧ ಯಾವುದೇ ಸುಳ್ಳು ಪ್ರಚಾರ ಮಾಡಿದರೂ ಅದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಅಮಾಯಕ ಮಹಿಳೆಯ ಸಾವು, ಮುಗ್ಧ ಮಗುವಿನ ಜೀವಕ್ಕೆ ಕಾರಣವಾದ ಈ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಅತ್ಯಂತ ಬದ್ಧತೆಯಿಂದ ತನಿಖೆ ನಡೆಸುತ್ತಿದೆ. ಅದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮತ್ತು ಕಟ್ಟುಕಥೆಗಳನ್ನು ಹರಡುವುದನ್ನು ನಾವು ಸಹಿಸುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪುರಾವೆಗಳು ಅಥವಾ ಹೆಚ್ಚುವರಿ ಮಾಹಿತಿ ಇದ್ದರೆ ಯಾವುದೇ ವ್ಯಕ್ತಿಗಳು ಅದನ್ನು ಪೊಲೀಸ್ ಇಲಾಖೆಗೆ ಒದಗಿಸಬಹುದು. ಆದರೆ, ಯಾವುದೇ ವೈಯಕ್ತಿಕ ಟೀಕೆ ಮಾಡಬಾರದೆಂದು ಪೊಲೀಸ್ ಇಲಾಖೆಯ ಪರವಾಗಿ ವಿನಂತಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರವನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲೂ ಮನವಿ ಮಾಡಿಕೊಳ್ಳುತ್ತೇವೆ” ಎಂದು ಹೈದರಾಬಾದ್ ಪೊಲೀಸರು ಹೇಳೀದ್ದಾರೆ.
ಈ ಸುದ್ದಿಯನ್ನೂ ಓದಿ:Physical Assault: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಣ್ಣಾ ವಿವಿಯಲ್ಲಿ ಇದೆಂಥಾ ಪೈಶಾಚಿಕ ಕೃತ್ಯ!