Thursday, 26th December 2024

IND vs AUS: ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್‌ XI ಆರಿಸಿದ ಸುನೀಲ್‌ ಗವಾಸ್ಕರ್‌!

Sunil Gavaskar's bold prediction on India's Playing XI for Boxing Day Test against Australia

ಮೆಲ್ಬರ್ನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯ (IND vs AUS) ಗುರುವಾರ ಇಲ್ಲಿನ ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಈ ಮಹತ್ವದ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿವೆ. ಆದರೆ, ಆಸ್ಟ್ರೇಲಿಯಾ ತಂಡ, ಪಂದ್ಯ‌ ಆರಂಭವಾಗುವ ಒಂದು ದಿನ ಮುನ್ನವೇ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದೆ. ಆದರೆ, ಭಾರತ ತಂಡ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಯಾವ ಪ್ಲೇಯಿಂಗ್‌ XI ಅನ್ನು ಆರಿಸಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಭಾರತ ತಂಡದ ಪ್ಲೇಯಿಂಗ್‌ XIನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಅದರಂತೆ ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ಗೆ ಭಾರತ ತಂಡದ ಪ್ಲೇಯಿಂಗ್‌ xi ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ಕಳೆದ ಪಂದ್ಯವಾಡಿದ್ದ ಅದೇ ಆಡುವ ಬಳಗವನ್ನು ಸಲಹೆ ನೀಡಿದ್ದಾರೆ. ಆದರೆ, ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಆಕಾಶ್‌ ದೀಪ್‌ ಅವರನ್ನು ಈ ಪಂದ್ಯದಲ್ಲಿಯೂ ಮುಂದುವರಿಸಬೇಕೆಂದು ಅವರು ಹೇಳಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಮಾತನಾಡಿದ ಸುನೀಲ್‌ ಗವಾಸ್ಕರ್‌ಗೆ ನಿತೀಶ್‌ ರೆಡ್ಡಿ ಅವರ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, “ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಕೈ ಬಿಡಬಾರದು. ಅವರು ತಂಡಕ್ಕೆ ನಾಲ್ಕನೇ ಸೀಮರ್‌ ಆಗಿದ್ದಾರೆ. ನಿತೀಶ್‌ ಕುಮಾರ್‌ ರೆಡ್ಡಿ ಅವರ ಜೊತೆಗೆ ಕೇವಲ ಇಬ್ಬರು ಸೀಮರ್‌ಗಳನ್ನು ನಾನು ನೋಡಲು ಬಯಸುವುದಿಲ್ಲ. ಕಳೆದ ಪಂದ್ಯವಾಡಿದ್ದ ಅದೇ ಪ್ಲೇಯಿಂಗ್‌ XI ಎಂಸಿಜಿನಲ್ಲಿಯೂ ಮುಂದುವರಿಯಬೇಕಾಗಿದೆ,” ಎಂದು ಅವರು ಸಲಹೆ ನೀಡಿದ್ದಾರೆ.

ಹರ್ಷಿತಾ ರಾಣಾಗೆ ಅವಕಾಶವಿದೆಯಾ?

ಇದೇ ವೇಳೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಹರ್ಷಿತ್‌ ರಾಣಾ ಅವರನ್ನು ಆಕಾಶ್‌ ದೀಪ್‌ ಅವರ ಸ್ಥಾನದಲ್ಲಿ ಆಡಿಸಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಸುನೀಲ್‌ ಗವಾಸ್ಕರ್‌ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಆಕಾಶ್‌ ದೀಪ್‌ ಅವರ ಸ್ಥಾನವನ್ನು ಹರ್ಷಿತ್‌ ರಾಣಾ ತುಂಬುತ್ತಾರೆಂದು ನಾನು ನಿರೀಕ್ಷಿಸುವುದಿಲ್ಲ. ಫಾಲೋ ಆನ್‌ನಲ್ಲಿ ಭಾರತ ತಂಡವನ್ನು ಉಳಿಸಿದ್ದ ಆಟಗಾರನನ್ನು ಕೈ ಬಿಡುವ ಬಗ್ಗೆ ನಾನು ನಂಬುವುದಿಲ್ಲ,” ಎಂದು ತಿಳಿಸಿದ್ದಾರೆ.

ಶುಭಮನ್‌ ಗಿಲ್‌ ಔಟ್‌?

ನೆಟ್ಸ್‌ನಲ್ಲಿ ಶುಭಮನ್‌ ಗಿಲ್‌ ಬ್ಯಾಟಿಂಗ್‌ ಅಭ್ಯಾಸ ನಡೆಸುವಾಗ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಲಭ್ಯರಾಗುವುದು ಅನುಮಾನ. ಒಂದು ವೇಳೆ ಇದು ಖಚಿತವಾದರೆ, ಅವರ ಸ್ಥಾನಕ್ಕೆ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರು ಪ್ಲೇಯಿಂಗ್‌ XIಗೆ ಬರಬಹುದು. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ನಾಯಕ ರೋಹಿತ್‌ ಶರ್ಮಾ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಇದೀಗ ಅವರು ಆರಂಭಿಕ ಸ್ಥಾನಕ್ಕೆ ಮರಳಲಿದ್ದು, ಕೆಎಲ್‌ ರಾಹುಲ್‌ ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಭ್‌ ಪಂತ್, ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್‌ಪ್ರೀತ್‌ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್

ಈ ಸುದ್ದಿಯನ್ನು ಓದಿ: IND vs AUS: ಶುಭಮನ್‌ ಗಿಲ್‌ ಔಟ್‌, ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!