Thursday, 26th December 2024

Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್;‌ ವಿಡಿಯೊ ಫುಲ್‌ ವೈರಲ್!

ನವದೆಹಲಿ: ದೆಹಲಿಯಲ್ಲಿ ಅದ್ಧೂರಿ ಕ್ರಿಸ್‌ಮಸ್(Christmas) ಆಚರಣೆ ನಡೆಯುತ್ತಿದೆ. ಈ ಮಧ್ಯೆ ಆಮ್ ಆದ್ಮಿ ಪಕ್ಷವು (ಎಎಪಿ) ಅರವಿಂದ್ ಕೇಜ್ರಿವಾಲ್(Aravind Kejriwal) ಅವರನ್ನು ಸಾಂತಾಕ್ಲಾಸ್(‌Santa Claus) ಅವತಾರದಲ್ಲಿ ತೋರಿಸಲು ಕೃತಕ ಬುದ್ಧಿಮತ್ತೆಯನ್ನು(AI) ಬಳಸಿದೆ. “ದೆಹಲಿಯ ಸಾಂತಾ ವರ್ಷಪೂರ್ತಿ ಉಡುಗೊರೆಗಳನ್ನು ನೀಡುತ್ತಾರೆ” ಎಂದು ಬರೆದು AAP ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. 36 ಸೆಕೆಂಡ್‌ಗಳಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.(Viral Video)

36 ಸೆಕೆಂಡ್‌ಗಳ ವಿಡಿಯೊದಲ್ಲಿ ಕೇಜ್ರಿವಾಲ್ ಸಾಂತಾ ವೇಷವನ್ನು ಧರಿಸಿದ್ದು, ಇದರಲ್ಲಿ ಹಾಡೊಂದು ಪ್ಲೇ ಆಗುತ್ತಿದೆ. “ಜಾಲಿ ಓಲ್ಡ್ ಕೇಜ್ರಿವಾಲ್” ಎಂಬ ಹಾಡನ್ನು ಕೇಳಬಹುದು . ಎಎಪಿ ನಾಯಕ ಅರವಿಂದ್‌ ಕೇಜ್ರಿವಾಲ್‌ ಮಹಿಳೆಯೊಬ್ಬರಿಗೆ 2,100 ರೂ. ಎಂದು ಬರೆದಿರುವ ಗಿಫ್ಟ್‌ ಬಾಕ್ಸ್‌ ಒಂದನ್ನು ನೀಡುತ್ತಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೆ ಮುಂಚಿತವಾಗಿ ಮಹಿಳಾ ಸಮ್ಮಾನ್ ಯೋಜನೆಯನ್ನು AI ಮೂಲಕ ಎಎಪಿ ಘೋಷಿಸಿದೆ.

ರಾಜಧಾನಿಯಲ್ಲಿನ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸುವಲ್ಲಿ ಪಕ್ಷವು ತನ್ನ ಸಾಧನೆಗಳನ್ನು ಪ್ರದರ್ಶಿಸುತ್ತಿರುವಾಗ “ದೆಹಲಿ ಸರ್ಕಾರಿ ಶಾಲೆ” ಎಂಬ ಹೆಸರಿನ ಕಟ್ಟಡದ ಮುಂದೆ AAP ನಾಯಕ ಮಕ್ಕಳೊಂದಿಗೆ AI ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ನಾಗರಿಕರಿಗಾಗಿ ಎಎಪಿ ಸ್ಕೀಮ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಸಂಚಾರದ ಕುರಿತಾಗಿಯೂ ಹಾಡಿನಲ್ಲಿ ಉಲ್ಲೇಖಿಸಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆಯಾದ “ಸಂಜೀವಿನಿ ಯೋಜನೆ” ಎಂಬ ಹೆಸರಿನ ಬಾಕ್ಸ್‌ ಒಂದನ್ನು ಕೇಜ್ರಿವಾಲ್ ಹಿಡಿದಿರುವುದನ್ನು ವಿಡಿಯೊ ತೋರಿಸಿದೆ.

ಹೋ… ಹೋ… ಹೋ.. ಸಾಂತಾ ಕೇಜ್ರಿವಾಲ್ ಬಂದಿದ್ದಾರೆ, ದೂರದ ಮತ್ತು ಹತ್ತಿರದ ಎಲ್ಲರಿಗೂ ಸಂತೋಷವನ್ನು ನೀಡುತ್ತಾರೆ. ಹಗಲು ರಾತ್ರಿ ವಿದ್ಯುತ್ ಉಚಿತ, ಸಾಂತಾ ಕೇಜ್ರಿವಾಲ್ ಅವರ ಉಡುಗೊರೆಗಳು ನೆಮ್ಮದಿ ನೀಡಲಿವೆ” ಎಂದು ಹಾಡು ಮುಂದುವರಿಯುತ್ತದೆ. ಇದೀಗ ಕೇಜ್ರಿವಾಲ್‌ ಸಾಂತಾ ವೇಷದಲ್ಲಿ ಕಾಣಿಸಿಕೊಂಡಿರುವ ವಿಡಿಯೊ ಎಲ್ಲೆಡೆ ಸಾಕಷ್ಟು ವೈರಲ್‌ ಆಗುತ್ತಿದೆ.

ಅರವಿಂದ್‌ ಕೇಜ್ರಿವಾಲ್‌ ಶಾಕಿಂಗ್‌ ಹೇಳಿಕೆ

ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ನಕಲಿ ಸಾರಿಗೆ ಪ್ರಕರಣದಲ್ಲಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಮಹಿಳಾ ಸಮ್ಮಾನ ಯೋಜನೆ, ಸಂಜೀವಿನಿ ಯೋಜನೆಗೆ ಬ್ರೇಕ್‌ ಬಿದ್ದ ಬೆನ್ನಲ್ಲೇ ದಿಲ್ಲಿಯ ಹಾಲಿ ಸಿಎಂ ಅತಿಶಿ ಹಾಗೂ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೇಲಿನಿಂದ ಆದೇಶ ಪಡೆದಿದ್ದಾರೆ. ಮುಖ್ಯಮಂತ್ರಿ ಹಾಗೂ ಹಿರಿಯ ಎಎಪಿ ನಾಯಕರ ಮೇಲೆ ರೇಡ್‌ ಮಾಡಿ, ಅತಿಶಿಯನ್ನು ಸುಳ್ಳು ಕೇಸ್‌ನಲ್ಲಿ ಬಂಧಿಸುವಂತೆ ಆದೇಶ ಬಂದಿದೆ ಎಂದು ಕೇಜ್ರಿವಾಲ್‌ ಆರೋಪ ಮಾಡಿದ್ದಾರೆ. ಅದಲ್ಲದೇ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಸಂಬಂಧಿಸಿದ ಸುಳ್ಳು ಕೇಸ್‌ನಲ್ಲಿ ಅತಿಶಿಯನ್ನು ಬಂಧಿಸಬಹುದು ಎಂದಿರುವ ಅರವಿಂದ್‌ ಕೇಜ್ರಿವಾಲ್‌, ನಾನು ಜೀವಂತವಾಗಿರುವವರೆಗೂ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಯೋಜನೆಯನ್ನು ನಿಲ್ಲಿಸಲು ಆಗಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ:Allu Arjun: ಪುಷ್ಪಾ2 ಕಾಲ್ತುಳಿತ ಪ್ರಕರಣ; ಮೃತ ರೇವತಿ ಕುಟುಂಬಕ್ಕೆ 2 ಕೋಟಿ ರೂ ಪರಿಹಾರ!