ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಗೋವಾ ತಂಡದಿಂದ ಕೈ ಬಿಟ್ಟ ಒಂದು ವಾರದಲ್ಲಿಯೇ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ದೇಶಿ ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ದೇಶಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಅರ್ಜುನ್, 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಒಡಿಶಾ ವಿರುದ್ದ ನಡೆದಿದ್ದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಈ ಸಾಧನೆಗೆ ಭಾಜನರಾಗಿದ್ದಾರೆ.
2021ರಲ್ಲಿ ಮುಂಬೈ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಅವರು, ನಂತರ ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರು ಇದೀಗ 41 ದೇಶಿ ಪಂದ್ಯಗಳಿಂದ 51 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು ಆಡಿದ್ದ 24 ಪಂದ್ಯಗಳಿಂದ 27 ವಿಕಟ್‌ಗಳು ಹಾಗೂ 17 ಪಂದ್ಯಗಳಿಂದ 24 ವಿಕೆಟ್‌ಗಳನ್ನು ಕಿತ್ತಿದ್ದಾರೆ.
ಇವರು ಮುಂಬೈ ಪರ 2020-21ರ ಸಾಲಿನಲ್ಲಿ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು ಹಾಗೂ ಹರಿಯಾಣ ವಿರುದ್ದ ತಮ್ಮ ಚೊಚ್ಚಲ ಟಿ20 ಪಂದ್ಯವನ್ನು ಆಡಿದ್ದರು. ಇದಕ್ಕೂ ಮುನ್ನ ಅವರು ಮುಂಬೈ ಪರ ಕಿರಿಯ ಹಂತದ ಕ್ರಿಕೆಟ್ ಅನ್ನು ಆಡಿದ್ದರು. ಅಲ್ಲದೆ ಭಾರತ ಅಂಡರ್-19 ತಂಡವನ್ನು ಕೂಡ ಪ್ರತಿನಿಧಿಸಿದ್ದರು. ಇದಾದ ಬಳಿಕ ಅವರು 2022-23ರ ಸಾಲಿನಲ್ಲಿ ಗೋವಾ ತಂಡಕ್ಕೆ ತೆರಳಿದ್ದರು. 2022ರಲ್ಲಿ ಇವರು ಗೋವಾ ಪರ ಪ್ರಥಮ ದರ್ಜೆ ಹಾಗೂ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅವರು ಆಡಿದ್ದ 17 ಪಂದ್ಯಗಳಿಂದ ಒಂದು ಶತಕ ಮತ್ತು ಎರಡು ಅರ್ಧಶತಕಗಳ ಮೂಲಕ 532 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ ಬೌಲಿಂಗ್‌ನಲ್ಲಿ 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಅವರು ಒಂದು 5 ವಿಕೆಟ್ ಸಾಧನೆ ಮತ್ತು ಒಮ್ಮೆ 4 ವಿಕೆಟ್ ಸಾಧನೆ ಮಾಡಿದ್ದರು. ಇನ್ನು ಗೋವಾ ಪರ ಅವರು 17 ಲಿಸ್ಟ್ ಎ ಪಂದ್ಯಗಳನ್ನು ಕೂಡ ಆಡಿದ್ದಾರೆ. ಇಲ್ಲಿ ಆಡಿದ್ದ 9 ಇನಿಂಗ್ಸ್‌ಗಳಿಂದ 76 ರನ್ ಗಳಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಕಮ್‌ಬ್ಯಾಕ್
ಈ ತಿಂಗಳ ಆರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ಪ್ರದರ್ಶನದಲ್ಲಿ ಕುಸಿತ ಕಂಡಿದ್ದರು ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಕೊನೆಯ ಪಂದ್ಯಗಳ ಗೋವಾ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು.2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿ ಮೂಲ ಬೆಲೆ 30 ಲಕ್ಷ ರೂ. ಗಳಿಗೆ ಖರೀದಿಸಿದ ಬಳಿಕ ಅರ್ಜುನ್‌ಗೆ ಗೋವಾ ಟಿ20 ತಂಡದಲ್ಲಿ ಭಾರಿ ಹಿನ್ನಡೆಯಾಗಿತ್ತು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ವಿರುದ್ಧ 48 ರನ್‌ಗಳು, ಸರ್ವೀಸಸ್ ವಿರುದ್ದ ಮೂರು ಓವರ್‌ಗಳಿಗೆ 19 ರನ್‌ಗಳು ಹಾಗೂ ಆಂಧ್ರ ಪ್ರದೇಶ ವಿರುದ್ದ 3.4 ಓವರ್‌ಗಳಿಗೆ 36 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಗೋವಾ ತಂಡ ಸತತ ಸೋಲುಗಳನ್ನು ಅನುಭವಿಸಿದ ಬಳಿಕ ಸಚಿನ್ ತೆಂಡೂಲ್ಕರ್ ಅವರನ್ನು ಕೈ ಬಿಡಲಾಗಿತ್ತು.
ಈ ಸುದ್ದಿಯನ್ನು ಓದಿ: SMAT 2024: ಗೋವಾ ತಂಡದಲ್ಲಿಯೂ ಸ್ಥಾನ ಕಳೆದುಕೊಂಡ ಅರ್ಜುನ್ ತೆಂಡೂಲ್ಕರ್!