Thursday, 26th December 2024

Tumkur News: ಮಹಿಳೆಯ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮರೆದ ಆರ್‌ಟಿಓ ಇನ್ಸ್‌ಪೆಕ್ಟರ್

Tumkur News

ತುಮಕೂರು: ನಗರದ (Tumkur News) ಖಾಸಗಿ ಆಸ್ಪತ್ರೆ ಬಳಿ ದೊರೆತಿದ್ದ ಮಹಿಳೆಯೊಬ್ಬರ ಬ್ಯಾಗ್‌ ಅನ್ನು ಪೊಲೀಸರ ಮುಖಾಂತರ ವಾರಸುದಾರ ಮಹಿಳೆಗೆ ಹಿಂದಿರುಗಿಸುವ ಮೂಲಕ ಆರ್‌ಟಿಓ ಇನ್ಸ್‌ಪೆಕ್ಟರ್ ಸದ್ರುಲ್ಲಾ ಷರೀಫ್ ಮಾನವೀಯತೆ ಮೆರೆದಿದ್ದಾರೆ.

ನಗರದ ಮಡಿಲು ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಅನಾಮಾಧೇಯ ಬ್ಯಾಗ್ ಬಿದ್ದಿರುವುದನ್ನು ಕಂಡ ಸದ್ರುಲ್ಲಾ ಷರೀಫ್ ಅವರು, ಅನುಮಾನಾಸ್ಪದವಾಗಿ ಆ ಬ್ಯಾಗ್‌ನ್ನು ಎತ್ತಿಕೊಂಡು ಅಕ್ಕಪಕ್ಕ ಈ ಬ್ಯಾಗ್‌ನ ವಾರಸುದಾರರು ಇದ್ದಾರೆಯೇ ಎಂದು ನೋಡಿದ್ದಾರೆ. ಆದರೆ ಆ ಬ್ಯಾಗ್ ವಾರಸುದಾರರು ಯಾರೂ ಪತ್ತೆಯಾಗದ ಕಾರಣ ತಕ್ಷಣ ಸಮೀಪದಲ್ಲೇ ಇದ್ದ ಹೊಸಬಡಾವಣೆ ಪೊಲೀಸ್ ಠಾಣೆಗೆ ತೆರಳಿ ತಮಗೆ ದೊರೆತ ಬ್ಯಾಗ್‌ನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ನಂತರ ಕಾರ್ಯಪ್ರವೃತ್ತರಾದ ಹೊಸಬಡಾವಣೆ ಠಾಣೆ ಪೊಲೀಸರು ಬ್ಯಾಗ್‌ನಲ್ಲಿದ್ದ ಕೆಲ ಚೀಟಿಯ ಮಾಹಿತಿ ಮೇರೆಗೆ ಮಡಿಲು ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ವಾರಸುದಾರರ ಪತ್ತೆಗಾಗಿ ಹುಡುಕಾಡಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಮೂಲಕ ವಾರಸುದಾರರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಬ್ಯಾಗ್ ಹಿಂತಿರುಗಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Reliance Jio: ಜಿಯೋ ಪೇಮೆಂಟ್ಸ್ ಬ್ಯಾಂಕ್‌ನಿಂದ ವಿಶೇಷ ಕೊಡುಗೆ; ಹೊಸ ಖಾತೆದಾರರಿಗೆ 5 ಸಾವಿರ ಮೌಲ್ಯದ ರಿವಾರ್ಡ್ಸ್!

ಬ್ಯಾಗ್ ಕಳೆದುಕೊಂಡಿದ್ದ ನಗರದ ಉಪ್ಪಾರಹಳ್ಳಿಯ ನೇತ್ರಾವತಿ , ತಮ್ಮ ಬ್ಯಾಗ್ ಹಿಂತಿರುಗಿಸಿದ ಆರ್‌ಟಿಒ ಇನ್ಸ್‌ಪೆಕ್ಟರ್ ಸದ್ರುಲ್ಲಾ ಷರೀಫ್‌ ಹಾಗೂ ಹೊಸಬಡಾವಣೆ ಠಾಣೆ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬ್ಯಾಗ್‌ನಲ್ಲಿ 8 ಸಾವಿರ ರೂ. ನಗದು, ಒಂದು ಮೊಬೈಲ್, ಮನೆಯ ಲಾಕರ್ ಕೀ, ಬೀರುವಿನ ಕೀ ಸೇರಿದಂತೆ ಇತರೆ ವಸ್ತುಗಳು ಇದ್ದವು ಎಂದು ತಿಳಿದು ಬಂದಿದೆ.