ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ (Prathap Simha) ಅವರ ಹೆಸರಿಡಲು ಪಾಲಿಕೆ ಮುಂದಾಗಿರುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದೀಗ ಪಾಲಿಕೆಯ ನಿರ್ಧಾರಕ್ಕೆ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬೆಂಬಲ ಸೂಚಿಸಿದ್ದು, ಸಿದ್ದರಾಮಯ್ಯ ಮೈಸೂರಿನ ಸುಪುತ್ರ, ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನ ಕೆಆರ್ಎಸ್ ರಸ್ತೆಗೆ ʼಸಿದ್ದರಾಮಯ್ಯ ಆರೋಗ್ಯ ಮಾರ್ಗʼ ಎಂದು ಪಾಲಿಕೆ ನಾಮಕರಣ ಮಾಡಲು ಮುಂದಾದ ವಿಚಾರಕ್ಕೆ ಪ್ರತಿಕ್ರಿಯಿಸಿ, 40 ವರ್ಷದಿಂದ ವಿಧಾನಸಭೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಪರ ಮಾಜಿ ಸಂಸದ ಬ್ಯಾಟ್ ಬೀಸಿದ್ದಾರೆ.
ಸ್ಪಷ್ಟ ಬಹುಮತದ ಜತೆ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯನವರ ಕೊಡುಗೆ ಬಹಳ ಇದೆ. ಜಯದೇವ ಆಸ್ಪತ್ರೆ ಕಟ್ಟಡ, ಸೂಪರ್ ಸ್ಪೆಷಲಾಟಿ ಆಸ್ಪತ್ರೆ ಕಟ್ಟಿಸಿದ್ದು ಸಿದ್ದರಾಮಯ್ಯ. ರಾಜಪಥ ಮಾಡಿಸಿದ್ದು ಸಿದ್ದರಾಮಯ್ಯ. ಹೀಗಾಗಿ ರಸ್ತೆಗೆ ಅವರ ಹೆಸರು ಇಡುವುದರಲ್ಲಿ ತಪ್ಪೇನಿದೆ? ಈ ವಿಚಾರದಲ್ಲಿ ತಕಾರರು ಎತ್ತಿದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಧಕರು ಬರೀ ಬಿಜೆಪಿಯಲ್ಲಿ ಮಾತ್ರ ಇಲ್ಲ. ಎಲ್ಲಾ ಪಕ್ಷದಲ್ಲೂ ಇದ್ದಾರೆ. ಸಿದ್ದರಾಮಯ್ಯ ಅವರ ಹೆಸರು ಇಡುವ ವಿಚಾರದಲ್ಲಿ ಪಕ್ಷಭೇದ ಮಾಡಬೇಡಿ. ಸಣ್ಣತನ ತೋರಿಸಬೇಡಿ ಎಂದಿರುವ ಅವರು, ಮಹಾರಾಜರ ಹೆಸರು ಎಲ್ಲಾ ಕಡೆ ಇಟ್ಟಿದ್ದೇವೆ. ಮಹಾರಾಜರ ನಂತರವೂ ಅನೇಕ ಸಾಧಕರು ಮೈಸೂರಿನಲ್ಲಿ ಬಂದಿದ್ದಾರೆ. ವಿಶ್ವೇಶ್ವರಯ್ಯ ಅವರಂಥ ಎಂಜಿನಿಯರ್ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ? ಮಿರ್ಜಾ ಇಸ್ಮಾಯಿಲ್ ಇರದಿದ್ದರೆ ಬೆಂಗಳೂರಿಗೆ ವಿದ್ಯುತ್ ತೆಗೆದುಕೊಂಡು ಹೋಗಲು ಆಗುತ್ತಿತ್ತಾ ಎಂದು ಪ್ರಶ್ನಿಸಿ ಒಳ್ಳೊಳ್ಳೆ ದಿವಾನರು ಇದ್ದ ಕಾರಣ ಮೈಸೂರು ಅಭಿವೃದ್ಧಿ ಆಗಿದೆ. ದಿವಾನರಿಗೆ ಇನ್ನೂ ಗೌರವ ಸಿಗಬೇಕಿದೆ. ಅದೇ ರೀತಿ ಮೈಸೂರಿನಲ್ಲೂ ಮಹಾರಾಜರ ನಂತರ ಬಂದವರಿಗೆ ಗೌರವ ಕೊಡಬೇಕಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Nandini Idli-Dosa Batter: ನಂದಿನಿ ಇಡ್ಲಿ-ದೋಸೆ ಹಿಟ್ಟು ಬಿಡುಗಡೆ ಮಾಡಿದ ಸಿಎಂ; ಇಂದಿನಿಂದಲೇ ಮಾರಾಟ!