ಬೆಂಗಳೂರು: ಹಲವು ವರ್ಷಗಳಿಂದ ನಂದಿನಿ ತನ್ನ ಗುಣಮಟ್ಟದ ಉತ್ಪನ್ನಗಳಿಂದಾಗಿ ರಾಜ್ಯವಷ್ಟೇ ಅಲ್ಲದೆ, ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲೂ ತನ್ನದೇ ಛಾಪನ್ನು ಬೀರಿದೆ. ಹಾಗೆ ಕರ್ನಾಟಕ ಹಾಲು ಮಹಾಮಂಡಳಿ (Karnataka Co–Operative Milk Producers Federation Limited) ತನ್ನ ನಂದಿನಿ ಬ್ರ್ಯಾಂಡ್ನ(Nandini Brand) ಉತ್ಪನ್ನಗಳ ಪಟ್ಟಿಗೆ ಒಂದಿಲ್ಲೊಂದು ಹೊಸ ಉತ್ಪನ್ನಗಳ ಸೇರ್ಪಡೆ ಮಾಡುತ್ತಿದೆ. ನಂದಿನಿಯ ಬಹುತೇಕ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ(Market) ಲಭ್ಯವಾಗುತ್ತಿದೆ. ಇದೀಗ ಪ್ರೋಟೀನ್ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು(Nandini Idli-Dosa Batter) ಕೂಡ ಮಾರುಕಟ್ಟೆಗೆ ಪರಿಚಯಿಸಿದೆ.
ವಿಧಾನಸೌಧದಲ್ಲಿ ಬುಧವಾರ(ಡಿ.25) ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ನಂದಿನಿ ಬ್ರ್ಯಾಂಡ್ನ ರೆಡಿ ಟು ಕುಕ್ ನಂದಿನಿ ವೇ ಪ್ರೋಟೀನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಕೆಎಂಎಫ್ ಬಿಡುಗಡೆ ಮಾಡಿರುವ ಈ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಶೇ 5ರಷ್ಟು ಪ್ರೋಟೀನ್ ಅಂಶವನ್ನು ಸೇರಿಸಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.
ದೋಸೆ ಹಾಗೂ ಇಡ್ಲಿ ಹಿಟ್ಟಿನ 450 ಗ್ರಾಂ ತೂಕದ ಪೊಟ್ಟಣಕ್ಕೆ 40 ರೂಪಾಯಿ ಮತ್ತು 900 ಗ್ರಾಂ ತೂಕದ ಪೊಟ್ಟಣಕ್ಕೆ 80 ರೂಪಾಯಿಯನ್ನು ಮಾರಾಟ ದರವನ್ನು ನಿಗದಿ ಮಾಡಲಾಗಿದೆ.
ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ: ಸಿಎಂ
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಭಾರೀ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ. ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ನಾಗರಿಕರ ಬಹುದಿನಗಳ ಅಪೇಕ್ಷೆಯಂತೆ ಇದೀಗ ನಂದಿನಿ ಉತ್ಪನ್ನಗಳಿಗೆ ಹೊಸ ಸೇರ್ಪಡೆಯಾಗಿ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ವೇ ಪ್ರೋಟೀನ್ ಆಧಾರಿತ ಉತ್ಕೃಷ್ಟ ಗುಣಮಟ್ಟದ ಹಿಟ್ಟು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಬೆಳಗ್ಗಿನ ಉಪಾಹಾರವು ಗರಿಗರಿ ದೋಸೆ, ಸವಿಸವಿ ಇಡ್ಲಿಯೊಂದಿಗೆ ರುಚಿ ಮತ್ತು ಆರೋಗ್ಯವನ್ನು ವೃದ್ಧಿಗೊಳಿಸಲಿದೆ ಎಂದಿದ್ದಾರೆ.
ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ… pic.twitter.com/4v9Rt37ywo
— Siddaramaiah (@siddaramaiah) December 25, 2024
ಈ ಸುದ್ದಿಯನ್ನೂ ಓದಿ:Shocking: ಕಲಬುರಗಿಯಲ್ಲಿ ವಿದ್ಯುತ್ ತಗುಲಿ ರಸ್ತೆಯಲ್ಲೇ ಬಿದ್ದು ಒದ್ದಾಡಿದ ತಾಯಿ-ಮಗ; ವಿಡಿಯೊ ವೈರಲ್