Friday, 27th December 2024

Dr Vijay Darda Column: ಏಕಕಾಲಿಕ ಚುನಾವಣೆ: ಸವಾಲಿನ ಕೆಲಸ, ಆದರೆ ಪ್ರಯೋಜನಕಾರಿ !

ಸಂಗತ

ಡಾ.ವಿಜಯ್‌ ದರಡಾ

ನಿಮಗಿದು ವಿಚಿತ್ರ ಅನ್ನಿಸಬಹುದು, ಆದರೆ ಇದು ವಾಸ್ತವ. ನಮ್ಮ ದೇಶದಲ್ಲಿ ಪತ್ರಕರ್ತರು ಯಾವಾಗಲೂ ಒಂದಲ್ಲಾ ಒಂದು ಚುನಾವಣೆಯ ವರದಿ ಗಾರಿಕೆಯಲ್ಲಿ ವ್ಯಸ್ತರಾಗಿರುತ್ತಾರೆ. ಒಂದು ರಾಜ್ಯದ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಇನ್ನೊಂದು ರಾಜ್ಯದಲ್ಲಿ ಚುನಾವಣೆಯ ಸಿದ್ಧತೆಗಳು ಶುರುವಾಗುತ್ತವೆ.

ಅದಾದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭವಾಗುತ್ತದೆ. ಅಷ್ಟರಲ್ಲಿ ಲೋಕಸಭೆ ಚುನಾವಣೆ ಬರುತ್ತದೆ.
ಇವುಗಳ ನಡುವೆ ಸಹಕಾರ ಸಂಘ ಇತ್ಯಾದಿಗಳ ಚುನಾವಣೆಗಳಿರುತ್ತವೆ. ಅಂಕಿ-ಅಂಶಗಳನ್ನು ಗಮನಿಸಿದರೆ, ದೇಶದಲ್ಲಿ ಮೊದಲ ಚುನಾವಣೆಯಿಂದ ಹಿಡಿದು 2023ರವರೆಗೆ ಪ್ರತಿ ವರ್ಷ ಸರಾಸರಿ ಆರು ಸಾರ್ವತ್ರಿಕ ಚುನಾವಣೆ ಗಳು ನಡೆದಿವೆ. 1951, 1957, 1962ಮತ್ತು 1967ರಲ್ಲಿ ನಡೆದ ಮೊದಲ ನಾಲ್ಕು ಚುನಾವಣೆಗಳನ್ನು ಬಿಟ್ಟುಬಿಡೋಣ. ಏಕೆಂದರೆ ಈ ವರ್ಷಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆದಿದ್ದವು.

ನಿಮಗೂ ಗೊತ್ತು, ಪ್ರತಿ ಬಾರಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾದರಿ ನೀತಿಸಂಹಿತೆ ಜಾರಿಗೆ ಬರುತ್ತದೆ.
ಅದು ಚುನಾವಣೆ ಮುಗಿಯುವವರೆಗೂ, ಅಂದರೆ ಸಾಮಾನ್ಯವಾಗಿ ಒಂದೂವರೆ ಎರಡು ತಿಂಗಳ ಕಾಲ ಜಾರಿ ಯಲ್ಲಿರುತ್ತದೆ. ಈ ಸಮಯದಲ್ಲಿ ಆಡಳಿತ ಯಂತ್ರ ಸ್ತಬ್ಧವಾಗುತ್ತದೆ. ಸರಕಾರ ಅಥವಾ ಅಧಿಕಾರಿಗಳು ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಯಾವತ್ತಾದರೂ ನಾವು ಚುನಾವಣೆ ನೀತಿಸಂಹಿತೆ
ಜಾರಿಯಲ್ಲಿರುವ ಅವಧಿಯಲ್ಲಿ ಆರ್ಥಿಕತೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಉಂಟಾದ ಹಿನ್ನಡೆಯಿಂದ ಎಷ್ಟು ನಷ್ಟವಾಗಿದೆ ಎಂಬುದನ್ನು ಲೆಕ್ಕ ಹಾಕಿದ್ದೇವಾ? ಇಲ್ಲ.

ನಾನೊಬ್ಬ ಪತ್ರಕರ್ತನೂ ಹೌದು, ರಾಜಕಾರಣಿಯೂ ಹೌದು. ಈ ಎರಡೂ ಕ್ಷೇತ್ರಗಳಲ್ಲಿ ಹಲವು ದಶಕದಿಂದ
ಇದ್ದೇನೆ. ಹೀಗಾಗಿ ಚುನಾವಣಾ ಪ್ರಕ್ರಿಯೆಯನ್ನೂ, ಅದರಿಂದ ಆಡಳಿತದ ಮೇಲಾಗುವ ಪರಿಣಾಮವನ್ನೂ ಬಹಳ
ಹತ್ತಿರದಿಂದ ಗಮನಿಸಿ ವಿಶ್ಲೇಷಣೆ ಮಾಡುವ ಅವಕಾಶ ನನಗೆ ಲಭಿಸಿದೆ. ಅದರ ಆಧಾರದಲ್ಲಿ ಹೇಳುವುದಾದರೆ, ರಾಜಕಾರಣಿಗಳು ತಮ್ಮ ಪಕ್ಷದ ಸೈದ್ಧಾಂತಿಕ ನಿಲುವು ಏನೇ ಆಗಿದ್ದರೂ ‘ಒಂದು ದೇಶ, ಒಂದು ಚುನಾವಣೆ’ ಪ್ರಕ್ರಿಯೆಯ ಬಗ್ಗೆ ಗಂಭೀರವಾಗಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರುವುದು ಒಳ್ಳೆಯದು.

ಏಕಕಾಲಕ್ಕೆ ಚುನಾವಣೆ ನಡೆಸುವ ಪದ್ಧತಿಗೆ ಮರಳಲು ಇದು ಅತ್ಯಂತ ಸೂಕ್ತ ಕಾಲ. ಈ ವಿಷಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಅವುಗಳದೇ ಆದ ನಿಲುವು ಹಾಗೂ ಸವಾಲುಗಳು ಇರಬಹುದು. ಆದರೆ, ರಾಜಕೀಯ ಹಿತಾಸಕ್ತಿ ಮತ್ತು ಲಾಭಕ್ಕಿಂತ ದೇಶದ ಅಭಿವೃದ್ಧಿ ಹಾಗೂ ಒಳಿತು ಮುಖ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.

ನಮ್ಮ ದೇಶದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ತಗಲುವ ಖರ್ಚು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ
ಇದೆ. ಚುನಾವಣೆಗಳಿಗೆ ಸರಕಾರ ಮಾಡುವ ಖರ್ಚನ್ನು ಕಡಿಮೆ ಮಾಡಿದರೆ ಅದೇ ಹಣವನ್ನು ದೇಶದ ಅಭಿವೃದ್ಧಿಗೆ
ಬಳಸಬಹುದು. ಇದರಿಂದ ಉಳಿತಾಯವಾಗುವುದು ಒಂದೆರಡು ಕೋಟಿ ರುಪಾಯಿ ಅಲ್ಲ, ಬದಲಿಗೆ ನೂರಾರು ಕೋಟಿ ರುಪಾಯಿ. ನಾನಿಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮಾಡುವ ಖರ್ಚಿನ ಬಗ್ಗೆ ಹೇಳುತ್ತಿಲ್ಲ.

ಪ್ರತಿಯೊಬ್ಬ ಅಭ್ಯರ್ಥಿಯೂ 50 ರಿಂದ 100ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಅದರ ವಿಚಾರ ಇಲ್ಲಿ ಬೇಡ. ಚುನಾವಣೆಗೆ ಸರಕಾರಗಳು ಅಧಿಕೃತವಾಗಿ ಖರ್ಚು ಮಾಡುವ ಹಣದ ಬಗ್ಗೆಯಷ್ಟೇ ನಾನು ಹೇಳುತ್ತಿದ್ದೇನೆ. ಈ ಖರ್ಚನ್ನು ಕಡಿಮೆ ಮಾಡಿದರೆ ದೇಶದ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಅದನ್ನು ಜನಕಲ್ಯಾಣಕ್ಕೆ ಬಳಕೆ ಮಾಡಬಹುದು. ಆರ್ಥಿಕ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ಲೋಕಸಭೆ ಚುನಾವಣೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೇ ನಡೆಸಿದರೆ ಅದರಿಂದ ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.೧ರಿಂದ ಶೇ.೧.೫ರಷ್ಟು ಏರಿಕೆಯಾಗುತ್ತದೆ.

1951-52ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 17 ಕೋಟಿ ಮತದಾರರಿದ್ದರು. ಆ ಚುನಾವಣೆಗೆ ಮಾಡಿದ
ಖರ್ಚು 10.5 ಕೋಟಿ ರುಪಾಯಿ. ಅಂದರೆ ಒಬ್ಬ ಮತದಾರನಿಗೆ ತಲಾ 60 ಪೈಸೆ ಖರ್ಚು ತಗಲಿತ್ತು. 1957ರಲ್ಲಿ ಈ
ಖರ್ಚು ಗಣನೀಯವಾಗಿ ಇಳಿಕೆಯಾಗಿ, ಒಬ್ಬ ಮತದಾರನಿಗೆ ತಲಾ 30 ಪೈಸೆ ಖರ್ಚು ತಗಲಿತ್ತು! ಆದರೆ, 2024ರ
ಲೋಕಸಭೆ ಚುನಾವಣೆಯಲ್ಲಿ ಒಬ್ಬ ಮತದಾರನಿಗೆ ಸರಕಾರ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ? ಬರೋಬ್ಬರಿ 1400 ರುಪಾಯಿ! ಲೋಕಸಭೆ ಚುನಾವಣೆಗೆ ತಗಲುವ ಖರ್ಚನ್ನು ಕೇಂದ್ರ ಸರಕಾರ ನೋಡಿಕೊಳ್ಳುತ್ತದೆ. ರಾಜ್ಯಗಳ ವಿಧಾನಸಭೆ ಚುನಾವಣೆಯ ಖರ್ಚನ್ನು ಆಯಾ ರಾಜ್ಯ ಸರಕಾರಗಳು ಭರಿಸುತ್ತವೆ. ಒಂದೇ ಬಾರಿಗೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಒಂದೇ ಖರ್ಚಿನಲ್ಲಿ, ಅಥವಾ ಸ್ವಲ್ಪ ಹೆಚ್ಚುವರಿ ಹಣದಲ್ಲಿ, ಎರಡೂ ಚುನಾವಣೆಗಳು ಮುಗಿಯುತ್ತವೆ. ಲೆಕ್ಕಾಚಾರ ಇಷ್ಟು ಸರಳವಿರುವಾಗ ಏಕೆ ಕೆಲ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸುತ್ತಿವೆ ಎಂಬುದೇ ನನಗೆ ತಿಳಿಯುತ್ತಿಲ್ಲ.

ಇದನ್ನು ಜಾರಿಗೆ ತರುವುದಕ್ಕೆ ತಳಮಟ್ಟದಲ್ಲಿ ಸಾಕಷ್ಟು ಸಿದ್ಧತೆಯಾಗಬೇಕು ಮತ್ತು ವ್ಯವಸ್ಥೆಯಲ್ಲೂ ದೊಡ್ಡ ಬದಲಾವಣೆಯಾಗಬೇಕು ಎಂಬುದು ನಿಜ. ನಾನೂ ಅದನ್ನು ಒಪ್ಪುತ್ತೇನೆ. ಆದರೆ ಅದು ಅಸಾಧ್ಯವಾದ ಕೆಲಸ ವೇನೂ ಅಲ್ಲ. ಹೇಗಿದ್ದರೂ ಈಗಾಗಲೇ ದೇಶಾದ್ಯಂತ ಲೋಕಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯುತ್ತಿವೆ.
ಅದಕ್ಕೆ ಬೇರೆ ಬೇರೆ ಹಂತಗಳಲ್ಲಿ ಮತದಾನದ ದಿನ ನಿಗದಿಪಡಿಸಲಾಗುತ್ತದೆ. ಇವುಗಳಿಗೆ ರಾಜ್ಯಗಳ ವಿಧಾನಸಭೆ
ಚುನಾವಣೆಗಳನ್ನೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಸೇರಿಸಿದರೆ ಏನು ಮಹಾನ್ ವ್ಯತ್ಯಾಸವಾಗುತ್ತದೆ? ಒಂದು ಇವಿಎಂ ಇಡುವ ಜಾಗದಲ್ಲಿ ಮೂರು ಇವಿಎಂಗಳನ್ನಿಡಬೇಕು, ಮತದಾರ ಒಂದು ಮತ ಚಲಾಯಿಸುವುದರ ಬದಲು ಮೂರು ಮತ ಚಲಾಯಿಸುತ್ತಾನೆ, ಅಷ್ಟೇ ವ್ಯತ್ಯಾಸ.

ಇದರಿಂದ ಮತದಾರ ಗೊಂದಲಕ್ಕೆ ಒಳಗಾಗುತ್ತಾನೆ ಎಂದು ಕೆಲವರು ವಾದಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ
ಮೊದಲ ಬಾರಿ ಭಾರತೀಯರು ಮತದಾನ ಮಾಡುವಾಗಲೇ ಅವರಿಗೆ ಏಕಕಾಲಿಕ ಚುನಾವಣೆಯಿಂದ ಗೊಂದಲ ವಾಗಿಲ್ಲ ಅಂತಾದರೆ, ಈಗ 75 ವರ್ಷಗಳು ಕಳೆದ ಮೇಲೆ ಗೊಂದಲವಾಗುತ್ತದೆಯೇ? ಅದಕ್ಕಿಂತ ಹೆಚ್ಚಾಗಿ, ಒಂದು ಸಂಗತಿ ನೆನಪಿಡಿ. ನಮ್ಮ ದೇಶದ ಜನರು ರಾಜಕೀಯವಾಗಿ ಬಹಳ ಜಾಣರಿದ್ದಾರೆ. ಅವರಿಗೆ ಚುನಾವಣೆಯ ವಿಷಯದಲ್ಲಿ ಎಚ್ಚರಿಕೆಯೂ ಇದೆ, ಮಾಹಿತಿಯೂ ಇದೆ.

ಅವರ ಬೌದ್ಧಿಕ ಸಾಮರ್ಥ್ಯವನ್ನು ದಯವಿಟ್ಟು ಕೀಳಂದಾಜು ಮಾಡಬೇಡಿ. ಪ್ರಾದೇಶಿಕ ಪಕ್ಷಗಳ ಸಮಸ್ಯೆ ಬೇರೆಯೇ ಇದೆ. ಏಕಕಾಲಕ್ಕೆ ಚುನಾವಣೆ ನಡೆದರೆ, ರಾಷ್ಟ್ರ ಮಟ್ಟದಲ್ಲಿ ಯಾವ ರಾಜಕೀಯ ಪಕ್ಷದ ಅಲೆಯಿರುತ್ತದೆಯೋ ಅದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೂ ಪ್ರಭಾವ ಬೀರುವುದರಿಂದ ಕೇಂದ್ರದಲ್ಲಿ ಗೆಲ್ಲುವ ಪಕ್ಷವೇ ರಾಜ್ಯದಲ್ಲೂ ಗೆದ್ದುಬಿಡುತ್ತದೆ ಎಂಬುದು ಅವುಗಳ ಕಳವಳ. ನನ್ನ ಪ್ರಕಾರ ಈ ಆತಂಕಕ್ಕೆ ಆಧಾರವಿಲ್ಲ. ದೇಶದ ಮತದಾರರಿಗೆ ಲೋಕಸಭೆ ಚುನಾವಣೆ ಎಂದರೇನು, ವಿಧಾನಸಭೆ ಚುನಾವಣೆ ಎಂದರೇನು, ದೇಶದ ಹಿತಾಸಕ್ತಿಗಳು ಏನು, ರಾಜ್ಯಗಳ ಹಿತಾಸಕ್ತಿಗಳು ಏನು, ಯಾವ ರಾಜಕೀಯ ಪಕ್ಷ ದೇಶಕ್ಕೆ ಉತ್ತಮ ಮತ್ತು ಯಾವುದು ರಾಜ್ಯಕ್ಕೆ ಉತ್ತಮ ಎಂಬುದೆಲ್ಲ ಚೆನ್ನಾಗಿ ಗೊತ್ತಿದೆ. ಹೀಗಾಗಿ ರಾಜಕಾರಣಿಗಳೇ, ಕೇಳಿಸಿಕೊಳ್ಳಿ!

ಜನರು ನಿಮ್ಮನ್ನು ನಂಬುತ್ತಾರಾದರೆ ನೀವೂ ಜನರನ್ನು ನಂಬಬೇಕು. ಆಗ ಅವರು ನಿಮ್ಮ ಕೈ ಬಿಡುವುದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ, ಮೊದಲೇ ಹೇಳಿದಂತೆ, ‘ಒಂದು ದೇಶ, ಒಂದು ಚುನಾವಣೆ’ ಎಂಬ ವ್ಯವಸ್ಥೆ ನಮ್ಮ ದೇಶಕ್ಕೆ
ಹೊಸತೇನೂ ಅಲ್ಲ. ಸ್ವತಂತ್ರ ಭಾರತದಲ್ಲಿ ಮೊದಲ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಏಕಕಾಲಕ್ಕೆ ನಡೆದಿದ್ದವು. ಆದರೆ, ನಂತರದ ವರ್ಷಗಳಲ್ಲಿ, ರಾಜ್ಯಗಳ ವಿಧಾನಸಭೆಗಳು ಅವಧಿಗೂ ಮುನ್ನ ವಿಸರ್ಜನೆಯಾದ ಕಾರಣಕ್ಕೆ ಚುನಾವಣೆಗಳು ಬೇರೆ ಬೇರೆ ಸಮಯಕ್ಕೆ ನಡೆಯತೊಡಗಿದವು. ರಾಜಕಾರಣಿಗಳು ಪಕ್ಷಾಂತರ ಮಾಡುವುದು ಹೆಚ್ಚಾದ ಕಾರಣದಿಂದಲೂ ಚುನಾವಣೆಗಳು ಹಳಿ ತಪ್ಪಿದವು. ‘ಆಯಾ ರಾಮ್, ಗಯಾ ರಾಮ್’ ವಿದ್ಯಮಾನಗಳು ಜಾಸ್ತಿಯಾದ್ದ ರಿಂದ ರಾಜ್ಯ ಸರಕಾರಗಳು ಪತನಗೊಳ್ಳುವುದು ಹೆಚ್ಚಾಯಿತು.

ಹೀಗಾಗಿ ರಾಜ್ಯಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಅಂದರೆ ಈ
ಅಸ್ಥಿರತೆಗೆ ಮೂಲಕಾರಣವೇ ರಾಜಕೀಯ ಪಕ್ಷಗಳು. ಆದ್ದರಿಂದ ಇದಕ್ಕೊಂದು ಶಾಶ್ವತ ಪರಿಹಾರ ಹುಡುಕುವುದು ಕೂಡ ಅವುಗಳದೇ ಜವಾಬ್ದಾರಿ. ಏಕಕಾಲಕ್ಕೆ ಎಲ್ಲಾ ಚುನಾವಣೆಗಳೂ ನಡೆಯುವ ಸಾಕಷ್ಟು ದೇಶಗಳ ಉದಾ ಹರಣೆಯನ್ನು ನಾನು ನೀಡಬಲ್ಲೆ.

ಅಮೆರಿಕವನ್ನೇ ನೋಡಿ. ಅಲ್ಲಿ ಅಧ್ಯಕ್ಷೀಯ ಚುನಾವಣೆ, ಕಾಂಗ್ರೆಸ್ ಮತ್ತು ಸೆನೆಟ್‌ಗೆ ನಡೆಯುವ ಚುನಾವಣೆಗಳು
ಏಕಕಾಲಕ್ಕೆ ನಡೆಯುವುದಷ್ಟೇ ಅಲ್ಲ, ಅವುಗಳಿಗೆ ಮತದಾನ ಕೂಡ ಪೂರ್ವನಿಗದಿತ ದಿನದಂದು, ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನವೆಂಬರ್ ತಿಂಗಳ ಮೊದಲ ಮಂಗಳವಾರವೇ ನಡೆಯುತ್ತದೆ, ಫ್ರಾನ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆ
ಮತ್ತು ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗಳು ಪ್ರತಿ ಐದು ವರ್ಷಕ್ಕೊಮ್ಮೆ ಒಟ್ಟಿಗೇ ನಡೆಯುತ್ತವೆ. ಸ್ವೀಡನ್‌ನಲ್ಲಿ
ಪಾರ್ಲಿಮೆಂಟ್, ಮುನ್ಸಿಪಾಲಿಟಿಗಳು ಮತ್ತು ಕೌಂಟಿ ಕೌನ್ಸಿಲ್ ಚುನಾವಣೆಗಳು ಒಂದೇ ಸಮಯಕ್ಕೆ ನಡೆಯುತ್ತವೆ.

ಕೆನಡಾ, ಜರ್ಮನಿ, ದಕ್ಷಿಣ ಆಫ್ರಿಕಾ, ಫಿಲಿಪ್ಪೀನ್ಸ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲೂ ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ನಡೆಯುತ್ತವೆ. ಹಾಗಾಗಿ ನಮ್ಮ ದೇಶದಲ್ಲೂ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪ ಹೊಸತೂ ಅಲ್ಲ, ದೇಶಕ್ಕೆ ಮಾರಕವೂ ಅಲ್ಲ. ಈ ವಿಷಯವೀಗ ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಹೋಗಿದೆ. ಅದು ಒಳ್ಳೆಯ ನಿರ್ಧಾರಕ್ಕೆ ಬರುತ್ತದೆ ಎಂಬ ಆಶಾಭಾವನೆ ನನ್ನದು. ಏಕಕಾಲಿಕ ಚುನಾವಣೆಯೆಂಬುದು ಇಂದಿನ ಅಗತ್ಯ. ಲಭ್ಯವಿರುವ ತಾಂತ್ರಿಕ ಸೌಕರ್ಯಗಳನ್ನು ಬಳಸಿದರೆ ಇದನ್ನು ಬಹಳ ಸುಲಭವಾಗಿಯೇ ನಡೆಸಬಹುದು.

ಮೊದಮೊದಲಿಗೆ ಇದರಲ್ಲೂ ಗೊಂದಲ ಅಥವಾ ಸಮಸ್ಯೆಗಳು ತಲೆದೋರಬಹುದು. ಆದರೆ ಕ್ರಮೇಣ ಇದು ಸುಲಭವೂ, ಸಾಕಷ್ಟು ಪ್ರಯೋಜನಕಾರಿಯೂ ಆಗುತ್ತದೆ! ಇದರಲ್ಲಿ ಯಾವ ಅನುಮಾನವೂ ಬೇಡ. ಕೆಲವರಿಗೆ ಇವಿಎಂ ತಿರುಚುವ ಬಗ್ಗೆ ಆತಂಕಗಳಿವೆ. ಅವರಿಗೆ ನಾನು ಹೇಳುವುದು ಇಷ್ಟೆ. ಇವಿಎಂಗಳನ್ನು ತಿರುಚಲು ಸಾಧ್ಯ ವಿದೆಯೋ ಅಥವಾ ಇಲ್ಲವೋ ಎಂಬುದು ಹಾಗಿರಲಿ, ಹಿಂದೆ ಬ್ಯಾಲೆಟ್ ಪೇಪರ್ ಬಳಸುವಾಗಲೂ ಅವುಗಳನ್ನು ತಿರುಚಲಾಗುತ್ತಿತ್ತು ಎಂಬುದು ನೆನಪಿರಲಿ! ಯಾವ ವ್ಯವಸ್ಥೆಯೂ ನೂರಕ್ಕೆ ನೂರು ಪಕ್ಕಾ ಇರುವು ದಿಲ್ಲ. ಇಷ್ಟಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯೇ ಪರಿಪೂರ್ಣವಲ್ಲ! ಒಳ್ಳೆಯ ಸಲಹೆಗಳು ಯಾವುದೇ ರಾಜಕೀಯ ಪಕ್ಷದಿಂದ ಬಂದರೂ ದೇಶದ ಒಳಿತಿಗಾಗಿ ಅದನ್ನು ಬೇರೆ ರಾಜಕೀಯ ಪಕ್ಷಗಳು ಬೆಂಬಲಿಸಬೇಕು.

ಹೊಸ ಚಿಂತನೆಗಳು ಹಾಗೂ ಹೊಸ ಐಡಿಯಾಗಳನ್ನು ಸ್ವಾಗತಿಸುವ ಮುಕ್ತ ಮನಸ್ಸನ್ನು ನಾವು ಹೊಂದಿರಬೇಕೇ ಹೊರತು, ರಾಜಕೀಯ ವಿರೋಧಿಗಳು ಹೇಳಿದರು ಎಂದಾಕ್ಷಣ ಎಲ್ಲವನ್ನೂ ಕುರುಡಾಗಿ ವಿರೋಧಿಸಬಾರದು. ರಾಜಕೀಯ ವ್ಯವಸ್ಥೆಯಲ್ಲಿ ಅಪನಂಬಿಕೆಯ ಮೋಡ ದಟ್ಟವಾದಷ್ಟೂ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಒದಿ: Dr Vijay Darda Column: ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ!