Friday, 27th December 2024

MT Vasudevan Nair: ಮಲಯಾಳಂನ ಖ್ಯಾತ ಲೇಖಕ ಎಂ.ಟಿ. ವಾಸುದೇವನ್ ನಾಯರ್ ನಿಧನ

mt vasudevan nair

ಕೋಝಿಕ್ಕೋಡ್: ಖ್ಯಾತ ಮಲಯಾಳಂ ಲೇಖಕ, ಚಲನಚಿತ್ರ ನಿರ್ದೇಶಕ ಎಂ.ಟಿ.ವಾಸುದೇವನ್ ನಾಯರ್ (MT Vasudevan Nair) ಬುಧವಾರ ಕೋಯಿಕ್ಕೋಡ್‌ನಲ್ಲಿ (death news) ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ 11 ದಿನಗಳಿಂದ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ವೆಂಟಿಲೇಟರ್ ಬೆಂಬಲದಿಂದ ಉಸಿರಾಡುತ್ತಿದ್ದರು. ಮಂಗಳವಾರ ಅವರ ಸ್ಥಿತಿ ಸುಧಾರಿಸುವ ಲಕ್ಷಣಗಳನ್ನು ತೋರಿಸಿದರೂ, ಬುಧವಾರ ರಾತ್ರಿ ಹದಗೆಟ್ಟು, ಮೃತಪಟ್ಟಿದ್ದಾರೆ.

ಎಂಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಕಾದಂಬರಿಗಳು, ಸಣ್ಣ ಕಥೆಗಳು, ಚಿತ್ರಕಥೆಗಳು, ಮಕ್ಕಳ ಸಾಹಿತ್ಯ, ಪ್ರವಾಸ ಬರವಣಿಗೆ ಮತ್ತು ಪ್ರಬಂಧಗಳು ಹೀಗೆ ಎಲ್ಲ ಪ್ರಕಾರಗಳಲ್ಲಿ ಬರದು ಮಲಯಾಳಂ ಸಾಹಿತ್ಯ ಮತ್ತು ಸಿನೆಮಾದಲ್ಲಿ ಅಳಿಸಲಾಗದ ಛಾಪು ಮೂಡಿಸಿದರು. ಅವರು ಮಲಯಾಳಂ ಚಿತ್ರರಂಗದ ಕ್ಲಾಸಿಕ್ ‘ನಿರ್ಮಾಲ್ಯಂ’ ಮತ್ತು ಎರಡು ಸಾಕ್ಷ್ಯಚಿತ್ರಗಳು ಸೇರಿದಂತೆ ಆರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಎಂಟಿ ಅವರ ಸಾಹಿತ್ಯ ಶ್ರೇಷ್ಠತೆಯು ಅವರಿಗೆ 2005 ರಲ್ಲಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿಕೊಟ್ಟಿತು. ಅವರು ಜ್ಞಾನಪೀಠ ಪ್ರಶಸ್ತಿ, ಎಳುತಚನ್ ಪುರಸ್ಕಾರ, ವಯಲಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಲ್ಲಥೋಲ್ ಪುರಸ್ಕಾರ ಮತ್ತು ಜೆಸಿ ಡೇನಿಯಲ್ ಪುರಸ್ಕಾರವನ್ನು ಪಡೆದಿದ್ದಾರೆ. ಅವರ ಚಿತ್ರಕಥೆಗಳು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಮತ್ತು 11 ಬಾರಿ ರಾಜ್ಯ ಪ್ರಶಸ್ತಿಯನ್ನು ಗೆದ್ದಿವೆ. ಎಂಟಿ ಮೂರು ಬಾರಿ ಕೇರಳದ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.