Friday, 27th December 2024

Congress Session: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ, ಗಾಂಧಿ ಪ್ರತಿಮೆ ಅನಾವರಣ

congress session

ಬೆಳಗಾವಿ: 1924ರಲ್ಲಿ ಮಹಾತ್ಮ ಗಾಂಧೀಜಿ (Mahatma Gandhi) ಅಧ್ಯಕ್ಷತೆಯಲ್ಲಿ ನಡೆದ 39ನೇ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ (Congress session centenary) ಆಚರಣೆಗೆ ಬೆಳಗಾವಿ ನಗರ (Belagavi news) ಸಜ್ಜುಗೊಂಡಿದೆ. ಇಂದು, ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್‌ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರ ದಂಡೇ ಬೆಳಗಾವಿಗೆ ಹರಿದುಬರಲಿದೆ.

ಇಡೀ ನಗರ ವಿದ್ಯುತ್‌ ದೀಪಾಲಂಕಾರಗಳಿಂದ ಝಗಮಗಿಸುತ್ತಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು ಸ್ಮರಿಸುವ ಸ್ವಾತಂತ್ರ್ಯ ಹೋರಾಟದ ಸನ್ನಿವೇಶವನ್ನು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ನಗರ ಸಜ್ಜುಗೊಂಡಿದೆ. ಪ್ರಮುಖ ವೃತ್ತಗಳು, ಮುಖ್ಯ ರಸ್ತೆಗಳು, ದ್ವಾರಗಳಲ್ಲಿ ಕಾಂಗ್ರೆಸ್ ಅಧಿವೇಶನದ ಚಿತ್ರ ಪ್ರದರ್ಶಿಸಲಾಗಿದೆ. ಜತೆಗೆ ಸ್ವಾತಂತ್ರ್ಯ ಹೋರಾಟದ ಚಿತ್ರಗಳನ್ನು ಅಳವಡಿಸಲಾಗಿದೆ.

ನಗರದ ಕ್ಲಬ್‌ ರಸ್ತೆಯ ಸಿಪಿಎಡ್‌ ಕಾಲೇಜು ಮೈದಾನದಲ್ಲಿ ಡಿ.27ರಂದು ನಡೆಯುವ ಕಾಂಗ್ರೆಸ್‌ ಬೃಹತ್‌ ಸಮಾವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಡಲಾಗಿದೆ. ಸುಮಾರು 1.5 ಲಕ್ಷ ಜನತೆಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಬೇರೆ ರಾಜ್ಯದಿಂದ ಭಾಗವಹಿಸುವ ಐದು ಸಾವಿರ ಗಣ್ಯರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.

ಇಂದು ದಿನವಿಡೀ ಕಾರ್ಯಕ್ರಮ

26ರಂದು ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿ ಅವರ ಪುತ್ಥಳಿ ಅನಾವರಣ, ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಳಗ್ಗೆ 10.45ಕ್ಕೆ ಖಾದಿ ಮೇಳ ಉದ್ಘಾಟನೆ ನಡೆಯಲಿದೆ. ಬೆಳಗ್ಗೆ 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕ ಅನಾವರಣ, ನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಸೌಧದೊಳಗಿನ ಗಾಂಧೀಜಿ ಪ್ರತಿಮೆ, ಸ್ವಾತಂತ್ರ್ಯ ಹೋರಾಟಗಾರರ ಉಬ್ಬು ಚಿತ್ರಗಳನ್ನು ಮತ್ತಷ್ಟು ಆಕರ್ಷಕಗೊಳಿಸಲಾಗಿದೆ. ಸೌಧವನ್ನು ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. 26ರಂದು ಶತಮಾನೋತ್ಸವ ಕಾರ್ಯಕ್ರಮ‌ ಇಲ್ಲಿಯೇ ನಡೆಯಲಿದ್ದು, ಸುಸಜ್ಜಿತ ವೇದಿಕೆ ನಿರ್ಮಿಸಲಾಗಿದೆ. ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಸ್ಥಳದಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ಗಾಂಧೀಜಿ ಪುತ್ಥಳಿ ಅನಾವರಣ

ಡಿ.27ರಂದು ಬೆಳಗ್ಗೆ 10.30ಕ್ಕೆ ಸುವರ್ಣ ವಿಧಾನಸೌಧ ಆವರಣದಲ್ಲಿ ಗಾಂಧೀಜಿ ಅವರ ಬೃಹತ್‌ ಪುತ್ಥಳಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಅವರು ಅನಾವರಣಗೊಳಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯ ಯೋಧರು, ಸಂಸದರು, ಶಾಸಕರು, ಗಣ್ಯ ಸೇರಿ ಸುಮಾರು 600 ಜನ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಸುಮಾರು 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇಡೀ ಬೆಳಗಾವಿ ನಗರವನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದೆ. ಪ್ರಮುಖ ರಸ್ತೆಗಳು, ಒಳ ರಸ್ತೆಗಳು ಸೇರಿ ಒಟ್ಟು 104 ಕಿ.ಮೀ. ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಹಾಪುರುಷರು, ದೇವಾನುದೇವತೆಗಳು, ಐತಿಹಾಸಿಕ ಸ್ಮಾರಕಗಳು, ಮಂದಿರಗಳ ವಿದ್ಯುತ್ ಪ್ರತಿಕೃತಿಗಳು (ಇನ್ ಸೆಗ್ನಿಯಾ) ವಿದ್ಯುತ್ ದೀಪಗಳಲ್ಲಿ ಮೂಡಿದ್ದು ಆಕರ್ಷಣೀಯವಾಗಿದೆ. ದೀಪಾಲಂಕಾರದ ಬಗೆ ಬಗೆಯ ಬೆಳಕಿನ ಚಿತ್ತಾರಗಳನ್ನು ಕಣ್ತುಂಬಿಕೊಳ್ಳಲು ನಗರವಾಸಿಗಳು ಅಷ್ಟೇ ಅಲ್ಲದೇ ಜಿಲ್ಲೆಯ ತಾಲೂಕು, ಪಟ್ಟಣ, ಹಳ್ಳಿಗಳಿಂದಲೂ ಜನ ಕುಟುಂಬ ಸಮೇತರಾಗಿ ತಂಡ ತಂಡವಾಗಿ ಆಗಮಿಸುತ್ತಿದ್ದಾರೆ.

ಯಾರ್ಯಾರು ಪಾಲ್ಗೊಳ್ಳಲಿದ್ದಾರೆ?

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. 150 ಜನ ಎಂಪಿಗಳು 40 ಬಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಂ ಡಿಕೆ. ಶಿವಕುಮಾರ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಂದು ಸಿಡಬ್ಲ್ಯುಸಿ ಸಭೆ

ಟಿಳಕವಾಡಿ ವೀರಸೌಧದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 1924, ಡಿಸೆಂಬರ್ 26ರಂದು ಬೆಳಗಾವಿ ಕಾಂಗ್ರೆಸ್ ಅಧಿವೇಶನ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಇದೇ ಸ್ಥಳದಲ್ಲಿ ನಡೆದಿತ್ತು. ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 150 ಸಂಸದರು, ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ಶಾಸಕರು, ಎಐಸಿಸಿ ಪದಾಧಿಕಾರಿಗಳು ಪಾಲ್ಗೊಳ್ಳುವರು. ಸುಮಾರು 215 ಗಣ್ಯರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಲಾಗಿದೆ.