Friday, 27th December 2024

Sam Konstas: ರಿವರ್ಸ್‌ ಸ್ಕೂಪ್‌ ಮೂಲಕ ಸಿಕ್ಸರ್‌, 3 ವರ್ಷಗಳ ಬಳಿಕ ಸಿಕ್ಸ್‌ ಹೊಡೆಸಿಕೊಂಡ ಬುಮ್ರಾ! ವಿಡಿಯೊ

IND vs AUS: Brave Sam Konstas reverse scoops as Jasprit Bumrah concedes first Test six in 3 years

ಮೆಲ್ಬರ್ನ್‌: ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅತ್ಯಂತ ಶ್ರೇಷ್ಠ ವೇಗದ ಬೌಲರ್‌ಗಳನ್ನು ಒಬ್ಬರಾಗಿದ್ದಾರೆ. ಟೆಸ್ಟ್‌, ಏಕದಿನ, ಟಿ20 ಯಾವುದೇ ಸ್ವರೂಪದಲ್ಲಿಯೂ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಜಸ್‌ಪ್ರೀತ್‌ ಬುಮ್ರಾ ದೊಡ್ಡ ಹೆಸರು ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಟೆಸ್ಟ್‌ ಕ್ರಿಕೆಟ್‌ಗೆ ಬಂದಾಗ ಅವರ ಎಸೆತಗಳಲ್ಲಿ ರನ್‌ಗಳಿಸುವುದು ಬ್ಯಾಟ್ಸ್‌ಮನ್‌ಗಳಿಗೆ ಅತ್ಯಂತ ಕಠಿಣ. ಅದರಲ್ಲಿಯೂ ಅವರ ವಿಭಿನ್ನ ಶೈಲಿಯ ಬೌಲಿಂಗ್‌ ಶೈಲಿಯನ್ನು ಅರಿತುಕೊಳ್ಳುವುದು ಬ್ಯಾಟ್ಸ್‌ಮನ್‌ ಕಬ್ಬಿಣದ ಕಡಲೆ ಇದ್ದಂತೆ. ಅದರಂತೆ ಆಸ್ಟ್ರೇಲಿಯಾ ವಿರುದ್ದ ಕಳೆದ ಮೂರು ಟೆಸ್ಟ್‌ ಪಂದ್ಯಗಳಲ್ಲಿ (IND vs AUS) ಜಸ್‌ಪ್ರೀತ್‌ ಬುಮ್ರಾ ಅವರನ್ನು ಸಮರ್ಥವಾಗಿ ಎದುರಿಸಲು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ, ಮೆಲ್ಬರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಗುರುವಾರ ಆರಂಭವಾದ ನಾಲ್ಕನೇ ಹಾಗೂ‌ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಯಾಮ್‌ ಕೋನ್‌ಸ್ಟಸ್‌ (Sam Konstas)ಅವರು, ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

IND vs AUS: ಪದಾರ್ಪಣೆ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿ ಇತಿಹಾಸ ಬರೆದ ಸ್ಯಾಮ್‌ ಕೋನ್‌ಸ್ಟಸ್‌!

ಜಸ್‌ಪ್ರೀತ್‌ ಬುಮ್ರಾರ ಯಾರ್ಕರ್‌ ಅನ್ನು ಆಡುವುದು ಬ್ಯಾಟ್ಸ್‌ಮನ್‌ಗಳಿಗೆ ಕಠಿಣವಾಗಿರುತ್ತದೆ. ಅದರಲ್ಲಿಯೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ಸಿಕ್ಸರ್‌ ಬಾರಿಸುವುದು ಅಸಾಧ್ಯವಾದ ಮಾತು. ಆದರೆ, ಡೆಬ್ಯೂಟಂಟ್‌ ಸ್ಯಾಮ್‌ ಕೋನ್‌ಸ್ಟಸ್‌ಗೆ ಬುಮ್ರಾ ಅವರ ಎಸೆತಗಳು ಕಷ್ಟವಾಗಲಿಲ್ಲ ಹಾಗೂ ಅವರು ಲೀಲಾ ಜಾಲವಾಗಿ ಬ್ಯಾಟ್‌ ಬೀಸಿದರು. ಜಸ್‌ಪ್ರೀತ್‌ ಬುಮ್ರಾ ಎದುರು ಸ್ಯಾಮ್‌, ಎರಡು ಬೌಂಡರಿಗಳು ಹಾಗೂ ಸಿಕ್ಸರ್‌ ಬಾರಿಸಿದರು. ಅದರಲ್ಲಿಯೂ ರಿವರ್ಸ್‌ ಸ್ಕೂಪ್‌ ಮೂಲಕ ಸಿಕ್ಸರ್‌ ಹೊಡೆಯುವ ಮೂಲಕ ಟೀಮ್‌ ಇಂಡಿಯಾ ಆಟಗಾರರಿಗೆ ಯುವ ಬ್ಯಾಟ್ಸ್‌ಮನ್‌ ಆಘಾತ ನೀಡಿದರು. ಏಕೆಂದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿವರ್ಸ್‌ ಸ್ಕೂಪ್‌ ಮೂಲಕ ಬುಮ್ರಾಗೆ ಯಾರೂ ಸಿಕ್ಸರ್‌ ಬಾರಿಸಿರಲಿಲ್ಲ.

ಮೂರು ವರ್ಷಗಳ ಬಳಿಕ ಸಿಕ್ಸರ್‌ ಹೊಡೆಸಿಕೊಂಡ ಬುಮ್ರಾ

2021 ರಿಂದ ಇಲ್ಲಿಯವರೆಗೂ ಜಸ್‌ಪ್ರೀತ್‌ ಬುಮ್ರಾ ಅವರು ಮೂರು ವರ್ಷಗಳಲ್ಲಿ 4,483 ಎಸೆತಗಳನ್ನು ಹಾಕಿ ಸಿಕ್ಸರ್‌ ಹೊಡೆಸಿಕೊಂಡಿರಲಿಲ್ಲ. ಆದರೆ, ಇದೀಗ ಅವರು 19ನೇ ವಯಸ್ಸಿನ ಆಟಗಾರನ ಎದುರು ಸಿಕ್ಸರ್‌ ಹೊಡೆಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2021ರಲ್ಲಿ ಕ್ಯಾಮೆರಾನ್‌ ಗ್ರೀನ್‌ ಅವರು ಬುಮ್ರಾಗೆ ಕೊನೆಯ ಸಿಕ್ಸರ್‌ ಬಾರಿಸಿದ್ದರು. ಅದರಲ್ಲಿಯೂ ತಮ್ಮ ಡೆಬ್ಯೂಟ್‌ ಇನಿಂಗ್ಸ್‌ನಲ್ಲಿ ಕೋನ್‌ಸ್ಟಸ್‌ ಅವರು ಕೇವಲ 23 ಎಸೆತಗಳನ್ನು ಆಡಿದ ಬಳಿಕ ರಿವರ್ಸ್‌ ಸ್ಕೂಪ್‌ನಲ್ಲಿ ಸಿಕ್ಸ್‌ ಬಾರಿಸಿದ್ದು ವಿಶೇಷ.

ಚೊಚ್ಚಲ ಅರ್ಧಶತಕ ಸಿಡಿಸಿದ ಸ್ಯಾಮ್‌ ಕೋನ್‌ಸ್ಟಸ್‌

ಆಸ್ಟ್ರೇಲಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಇನಿಂಗ್ಸ್‌ನಲ್ಲಿ ಸ್ಯಾಮ್‌ ಕೋನ್‌ಸ್ಟಸ್‌ ಅವರು ಚೊಚ್ಚಲ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಆಸ್ಟ್ರೇಲಿಯಾ ಪರ ಪದಾರ್ಪಣೆ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಗೆ ಅವರ ಭಾಜನರಾದರು. ತಮ್ಮ ಪದಾರ್ಪಣೆ ಇನಿಂಗ್ಸ್‌ನಲ್ಲಿ 65 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 6 ಮನ ಮೋಹಕ ಬೌಂಡರಿಗಳೊಂದಿಗೆ 60 ರನ್‌ ಗಳಿಸಿ ರವೀಂದ್ರ ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಈ ಸುದ್ದಿಯನ್ನು ಓದಿ: IND vs AUS: ವಿರಾಟ್‌ ಕೊಹ್ಲಿ-ಸ್ಯಾಮ್‌ ಕೋನ್‌ಸ್ಟಸ್‌ ನಡುವೆ ಮಾತಿನ ಚಕಮಕಿ! ವಿಡಿಯೊ ವೈರಲ್‌