ಚಹಾ ಪ್ರಿಯರು ವಿಶ್ವದೆಲ್ಲೆಡೆ ಇದ್ದಾರೆ. ದಿನಕ್ಕೆ ಕನಿಷ್ಠ ಒಂದು ಕಪ್ ಚಹಾ ಕುಡಿಯದಿದ್ದರೆ ಲೋಕವೇ ತಲೆ ಕೆಳಗಾದಂತೆ ಆಡುವವರೂ ಇದ್ದಾರೆ(Health Tips). ಚಹಾ ಎನ್ನುತ್ತಿದ್ದಂತೆ ಭಾರತದಲ್ಲಿ ಕುಡಿಯುವ ಹಾಲು ಬೆರೆಸಿದ ಇಂಗ್ಲಿಷ್ ಚಹಾದ ಬಗ್ಗೆ ಮಾತ್ರವೇ ಮಾತಾಡುತ್ತಿಲ್ಲ. ತಮಗಿಷ್ಟ ಬಂದಂಥ ಫ್ಲೇವರಿನ ಟೀ ಬ್ಯಾಗ್‌ಗಳನ್ನು ಬಿಸಿನೀರಲ್ಲಿ ಅದ್ದಿಟ್ಟು ತೆಗೆದು, ಚಹಾ ಹೀರುವಂಥ ಜನ ಎಲ್ಲೆಲ್ಲೂ ಕಾಣುತ್ತಾರೆ. ಈವರೆಗೆ ಎಲ್ಲವೂ ಸರಿ, ಆದರೆ ಹೀಗೆ ಟೀ ಬ್ಯಾಗ್‌ಗಳನ್ನು ಬಳಸುವಾಗ ಅಪಾರ ಪ್ರಮಾಣದಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಚಹಾ ಸೇವಿಸುವವರ ದೇಹ ಸೇರುತ್ತಿವೆ ಎಂಬುದು ಗೊತ್ತೇ?
ಅಟಾನಮಸ್ ಯುನಿವರ್ಸಿಟಿ ಆಫ್ ಬಾರ್ಸಿಲೋನ ಎಂಬಲ್ಲಿನ ವಿಜ್ಞಾನಿಗಳು ಇತ್ತೀಚೆಗೆ ಈ ಕುರಿತಾಗಿ ನಡೆಸಿದ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಜಗತ್ತಿನೆಲ್ಲೆಡೆ ಈಗಾಗಲೇ ವ್ಯಾಪಕವಾಗಿರುವ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಟೀ ಬ್ಯಾಗ್‌ಗಳು ನೀಡುತ್ತಿರುವ ಕೊಡುಗೆ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಅಧ್ಯಯನದ ಮೂಲಕ ಪರಿಶೀಲಿಸಲಾಗಿತ್ತು. ಈ ವರದಿಯ ಪ್ರಕಾರ, ಚಹಾದ ಪ್ರತಿ ಕಣದಲ್ಲೂ ಲಕ್ಷಗಟ್ಟಲೆ, ಕೆಲವೊಮ್ಮೆ ಕೋಟಿಗಟ್ಟಲೆ ಮೈಕ್ರೊ ಮತ್ತು ನ್ಯಾನೋಪ್ಲಾಸ್ಟಿಕ್ ಕಣಗಳನ್ನು ಟೀ ಬ್ಯಾಗ್‌ಗಳು ಬಿಡುಗಡೆ ಮಾಡುತ್ತಿವೆ. ಅವೆಲ್ಲವೂ ಅಂತಿಮವಾಗಿ ಸೇರುತ್ತಿರುವುದು ಗ್ರಾಹಕರ ಹೊಟ್ಟೆಗೆ.
ಚೆನ್ನಾಗಿ ಬಿಸಿಯಿರುವ ನೀರಿಗೆ ಟೀ ಬ್ಯಾಗ್‌ಗಳನ್ನು ಅದ್ದಿದಾಗ, ಅದರೊಳಗಿರುವ ಚಹಾದ ಸತ್ವವು ನೀರಿಗೆ ಬಿಟ್ಟುಕೊಳ್ಳುವಂಥ ಸರಳ ತಂತ್ರಜ್ಞಾನವನ್ನು ಎಲ್ಲಾ ಟೀ ಸಂಸ್ಥೆಗಳೂ ತಮ್ಮ ಉತ್ಪನ್ನಗಳಲ್ಲಿ ನೀಡುತ್ತಿವೆ. ಆದರೆ ಈ ಪ್ರಕ್ರಿಯೆಯಲ್ಲಿ ಕೇವಲ ಚಹಾದ ಸತ್ವಗಳು ಮಾತ್ರವಲ್ಲ, ಪ್ಲಾಸ್ಟಿಕ್ ಕಣಗಳು ಸಹ ನಂಬಲಾಗದಷ್ಟು ಅಗಾಧ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿವೆ ಎಂಬುದು ಆತಂಕ ಹುಟ್ಟಿಸುವ ಸಂಗತಿ. ನ್ಯಾನೋ ಗಾತ್ರದ ಅಂದರೆ, ಸೂಕ್ಷ್ಮದಲ್ಲೇ ಅತಿಸೂಕ್ಷ್ಮ ಗಾತ್ರದ ಪ್ಲಾಸ್ಟಿಕ್ ಕಣಗಳನ್ನು ದೇಹ ಹೀರಿಕೊಳ್ಳುತ್ತಿದೆ.
ಪ್ರಮಾಣವೇನು?: ಇದಕ್ಕಾಗಿ ಮೂರು ಭಿನ್ನ ವಸ್ತುಗಳಿಂದ ಮಾಡಿದ ಟೀ ಬ್ಯಾಗ್‌ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಪಾಲಿಪ್ರೊಪಿಲೀನ್, ನೈಲಾನ್-6 ಮತ್ತು ಸೆಲ್ಯುಲೋಸ್‌ನ ಟೀ ಬ್ಯಾಗ್‌ಗಳು ಅಧ್ಯಯನಕ್ಕೆ ಒಳಪಟ್ಟಿದ್ದವು. ಅವುಗಳನ್ನು ಬಿಸಿನೀರಿಗೆ ಹಾಕಿ ಚಹಾ ತಯಾರಿಸಿದಾಗ ಎಷ್ಟು ಪ್ಲಾಸ್ಟಿಕ್ ಕಣಗಳನ್ನು ಚಹಾದೊಳಗೆ ಸೇರಿಸುತ್ತಿವೆ ಎಂಬುದನ್ನು ನಂತರ ಅಳೆಯಲಾಯಿತು. ಪಾಲಿಪ್ರೊಪಿಲೀನ್ ವಸ್ತುವಿನಿಂದ ಮಾಡಿದ ಟೀ ಬ್ಯಾಗ್‌ಗಳು ಪ್ರತಿ ಹನಿ ಚಹಾಗೆ 1.2 ಶತಕೋಟಿ ನ್ಯಾನೊ ಪ್ಲಾಸ್ಟಿಕ್ ಕಣಗಳನ್ನು ಬಿಡುಗಡೆ ಮಾಡಿದವು! ಸೆಲ್ಯುಲೋಸ್‌ನಿಂದ ತಯಾರಾದ ಟೀ ಬ್ಯಾಗ್‌ಗಳು 135 ದಶಲಕ್ಷ ನ್ಯಾನೊ ಪ್ಲಾಸ್ಟಿಕ್ ಕಣಗಳನ್ನು ಬಿಡುಗಡೆ ಮಾಡಿದರೆ, ನೈಲಾನ್-6 ಬ್ಯಾಗ್‌ಗಳು 8.2 ಮಿಲಿಯನ್ ಕಣಗಳನ್ನು ಚಹಾಗೆ ಸೇರಿಸಿದವು.
ಮುಂದೆ…?: ಈ ಪ್ರಯೋಗ ಇಷ್ಟಕ್ಕೇ ನಿಲ್ಲಲಿಲ್ಲ. ಈ ನ್ಯಾನೊ ಪ್ಲಾಸ್ಟಿಕ್ ಕಣಗಳಿಗೆ ಪ್ರತ್ಯೇಕ ಬಣ್ಣಗಳನ್ನು ಪ್ರಯೋಗನಿರತ ವಿಜ್ಞಾನಿಗಳು ನೀಡಿದ್ದರು. ಅವುಗಳನ್ನು ಮಾನವರ ಜೀರ್ಣಾಂಗಗಳಲ್ಲಿನ ಬೇರೆ ಬೇರೆ ಕೋಶಗಳ ಜೊತೆಗೆ ಇರಿಸಿದರು. ಇದರಿಂದ ದೇಹದೊಳಗೆ ಹೋದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಾಗಿತ್ತು. ೨೪ ತಾಸುಗಳ ನಂತರ, ಕರುಳಿನಲ್ಲಿರುವ ಒಂದು ಪ್ರತ್ಯೇಕ ಬಗೆಯ ಕೋಶಗಳು ಈ ಮೈಕ್ರೊ ಮತ್ತು ನ್ಯಾನೊ ಕಣಗಳನ್ನು ಹೀರಿಕೊಂಡವು. ದೇಹದ ವಂಶವಾಹಿಗಳನ್ನು ಹೊತ್ತ ಕೆಲವು ಕೋಶಗಳ ಒಳಗೂ ಈ ಪ್ಲಾಸ್ಟಿಕ್ ಕಣಗಳು ನುಸುಳಿದವು. ಪರಿಚಲನಾ ವ್ಯವಸ್ಥೆಯ ಮೂಲಕ ಅಂದರೆ ರಕ್ತದ ಮೂಲಕ ದೇಹದ ಎಲ್ಲ ಭಾಗಗಳನ್ನು ಅವು ಪ್ರವೇಶಿಸುತ್ತಿವೆ; ಈ ಮೂಲಕ ಕ್ಯಾನ್ಸರ್‌ನಂಥ ರೋಗಗಳಿಗೆ ಕಾರಣವಾಗುತ್ತಿವೆ ಎಂಬುದು ತಿಳಿದಿರುವುದೇ ಆಗಿತ್ತು. ಆದರೆ ವಂಶವಾಹಿಗಳನ್ನೂ ಪ್ರವೇಶಿಸಿ, ಮುಂದಿನ ತಲೆಮಾರುಗಳನ್ನೂ ವಿರೂಪಗೊಳಿಸಬಹುದಾದ ಸಾಧ್ಯತೆಗಳನ್ನು ಈ ಅಧ್ಯಯನ ತೋರಿಸುತ್ತಿವೆ.
ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್ ಕಣಗಳು ನಮ್ಮ ದೇಹವನ್ನು ಪ್ರದೇಶಿಸುವ ನೂರಾರು ಮಾರ್ಗಗಳಲ್ಲಿ ಇದೂ ಒಂದಷ್ಟೆ. ಜಗತ್ತೆಲ್ಲ ಎಷ್ಟೊಂದು ಪ್ಲಾಸ್ಟಿಕ್‌ಮಯವಾಗಿದೆ ಎಂದರೆ, ಉಸಿರಾಡುವ ಗಾಳಿ, ಕುಡಿಯುವ ನೀರು ಸಹ ಇದರಿಂದ ಮುಕ್ತವಾಗಿಲ್ಲ. ಆದಾಗ್ಯೂ ಸಾಧ್ಯವಾದಷ್ಟು ರೀತಿಯಲ್ಲಿ ಇವುಗಳನ್ನು ಬಳಸದೆ ಇರುವುದು ಕ್ಷೇಮ ತಾನೆ? ಹಾಗಾಗಿ ಟೀ ಬ್ಯಾಗ್‌ಗಳ ಬದಲಿಗೆ ಬಿಸಿನೀರಿಗೆ ನೇರವಾಗಿ ಚಹಾ ಪುಡಿಗಳನ್ನು ಬೆರೆಸಿ, ಸೋಸಿಕೊಳ್ಳುವ ಬಗ್ಗೆ ಯೋಚಿಸಬಹುದೇ?
ಈ ಸುದ್ದಿಯನ್ನೂ ಓದಿ: Health Tips: ಅತಿಯಾಗಿ ಕಾಫಿ ಸೇವಿಸಿದರೆ ಆತಂಕದ ಕಾಯಿಲೆ!