ಅಹಮದಾಬಾದ್: ಮಯಾಂಕ್ ಅಗರ್ವಾಲ್(139*) ಬಾರಿಸಿದ ಅಜೇಯ ಶತಕದಾಟದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ(KAR vs PUN) ತಂಡವು ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಸಂಭ್ರಮಾಚರಿಸಿದೆ. ‘ಸಿ’ಗುಂಪಿನಲ್ಲಿರುವ ಕರ್ನಾಟಕ 12 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ತಂಡ ಪದಾರ್ಪಣ ಪಂದ್ಯವನ್ನಾಡಿದ ಅಭಿಲಾಷ್ ಶೆಟ್ಟಿ ಅವರ ಘಾತಕ ಬೌಲಿಂಗ್ ದಾಳಿಗೆ ನಲುಗಿ 49.2 ಓವರ್‌ಗಳಲ್ಲಿ 247 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ರಾಜ್ಯ ತಂಡ ಕೂಡ ನಾಟಕೀಯ ಕುಸಿತ ಕಂಡು ಕೊನೆಗೂ ನಾಯಕ ಅಗರ್ವಾಲ್ ಬಾರಿಸಿದ ಅಜೇಯ ಶತಕದ ನೆರವಿನಿಂದ 47.3 ಓವರ್‌ಗಳಲ್ಲಿ 9 ವಿಕೆಟ್‌ಗೆ 251 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ನಾಯಕನ ಆಟವಾಡಿದ ಅಗರ್ವಾಲ್
ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ಕೂಡ ಆರಂಭದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಅಗರ್ವಾಲ್ ಎದುರಾಳಿಗಳ ಎಸೆತಕ್ಕೆ ನಿರ್ಭೀತವಾಗಿ ಬ್ಯಾಟ್ ಬೀಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ಸು ಸಾಧಿಸಿದರು.
ಇದನ್ನೂ ಓದಿ MS Dhoni: ಸಾಂತಾ ಕ್ಲಾಸ್ ವೇಷ ಧರಿಸಿ ಮಗಳಿಗೆ ಸರ್ಪ್ರೈಸ್ ಕೊಟ್ಟ ಧೋನಿ
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ ಸಣ್ಣ ಮಟ್ಟದ ಜತೆಯಾಟದ ಮೂಲಕ ಅರ್ವಾಲ್‌ಗೆ ನೆರವು ನೀಡಿದರು. ಒಟ್ಟು 127 ಎಸೆತ ಎದುರಿಸಿದ ಅಗರ್ವಾಲ್ ಅಜೇಯ 139 ರನ್ ಬಾರಿಸಿದರು. ಅವರ ಈ ಶತಕ ಇನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು. ಶ್ರೇಯಸ್ ಗೋಪಾಲ್ 29 ರನ್ ಗಳಿಸಿದರು. ಪಂಜಾಬ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ನಾಯಕ ಅಭಿಷೇಕ್ ಶರ್ಮಾ 56 ಎಸೆತಗಳಿಂದ 4 ವಿಕೆಟ್ ಕಿತ್ತರು. ಉಳಿದಂತೆ ಅರ್ಶದೀಪ್ ಸಿಂಗ್ ಮತ್ತು ಸನ್ವೀರ್ ಸಿಂಗ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡಕ್ಕೆ ಅನ್ಮೋಲ್ಪ್ರೀತ್ ಸಿಂಗ್ ಅರ್ಧಶತಕದ ಮೂಲಕ ನೆರವಾದರು. 60 ಎಸೆತಗಳಿಂದ 51 ರನ್ ಬಾರಿಸಿ ನಿಕ್ಕಿ ಜೋಶ್‌ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಪತನದ ಬಳಿಕ ಅನ್ಮೋಲ್ ಮಲ್ಹೋತ್ರಾ ಮತ್ತು ನೆಹಾಲ್ ವಧೇರಾ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ವಧೇರಾ 37 ರನ್ ಬಾರಿಸಿದರೆ, ಅನ್ಮೋಲ್ 42 ರನ್ ಬಾರಿಸಿದರು. ಸನ್ವೀರ್ ಸಿಂಗ್ 35 ರನ್ ಗಳಿಸಿದರು. ಚೊಚ್ಚಲ ಪಂದ್ಯವನ್ನಾಡಿದ ಅಭಿಲಾಷ್ ಶೆಟ್ಟಿ 44 ರನ್ ವೆಚ್ಚದಲ್ಲಿ 5 ವಿಕೆಟ್ ಕೆಡವಿದರು. ವಿ ಕೌಶಿಕ್ ಮತ್ತು ನಿಕ್ಕಿ ಜೋಶ್ ತಲಾ 2 ವಿಕೆಟ್ ಪಡೆದರು.