Friday, 27th December 2024

K Annamalai: ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಕಿತ್ತೊಗೆಯುವ ತನಕ ಚಪ್ಪಲಿ ಧರಿಸಲ್ಲ; ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಜ್ಞೆ

K Annamalai

ಚೆನ್ನೈ: ತಮಿಳುನಾಡಿನ ಆಡಳಿತರೂಢ ಡಿಎಂಕೆ (DMK) ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕ ಕೆ.ಅಣ್ಣಾಮಲೈ (K Annamalai) ಸಮರ ಸಾರಿದ್ದಾರೆ. ಡಿಎಂಕೆಯನ್ನು ರಾಜ್ಯದಿಂದ ಕಿತ್ತೊಗೆಯುವ ತನಕ ಚಪ್ಪಲಿ ಧರಿಸುವುದಿಲ್ಲ ಎಂದು ಗುರುವಾರ (ಡಿ. 26) ಪ್ರತಿಜ್ಞೆಯನ್ನೂ ಕೈಗೊಂಡಿದ್ದಾರೆ.

ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದ (Anna University) ಕ್ಯಾಂಪಸ್‌ನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳ (Engineering Student) ಮೇಲೆ ದುಷ್ಕರ್ಮಿಯೋರ್ವ ಇತ್ತೀಚೆಗೆ ಅತ್ಯಾಚಾರವೆಸಗಿದ್ದ. ಈ ಘಟನೆಯನ್ನು ಖಂಡಿಸಿ ಅಣ್ಣಾಮಲೈ ಕೊಯಂಬತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಅವರು ಡಿಎಂಕೆಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಕಿಡಿ ಕಾರಿದ ಅಣ್ಣಾಮಲೈ, ʼʼಈ ಪ್ರಕರಣದಲ್ಲಿ ಪೊಲೀಸರು ಸಂತ್ರಸ್ತೆಯ ಹೆಸರು, ಫೋನ್‌ ನಂಬರ್‌ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಒಂದುವೇಳೆ ಬಿಜೆಪಿ ಕಾರ್ಯಕರ್ತರು ಘಟನೆ ಖಂಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರೆ, ಪೊಲೀಸರು ಅವರನ್ನು ಬಂಧಿಸುತ್ತಾರೆ. ಅದಕ್ಕಾಗಿಯೇ ಈಗ ಬಿಜೆಪಿ ಸದಸ್ಯರು ತಮ್ಮ ಮನೆಗಳ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆʼʼ ಎಂದು ಹೇಳಿದ್ದಾರೆ.

ತಮಿಳುನಾಡಿನ ಬಿಜೆಪಿ ಘಟಕದ ಪರವಾಗಿ ಅಣ್ಣಾಮಲೈ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದು, ಸಂತ್ರಸ್ತೆಯ ಗುರುತನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ರಾಜ್ಯ ಪೊಲೀಸ್ ಇಲಾಖೆಯ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿದೆ ಮತ್ತು ಇಂತಹ ಭಯಾನಕ ಅಪರಾಧಗಳಿಂದ ರಾಜ್ಯದ ಮಹಿಳೆಯರನ್ನು ರಕ್ಷಿಸುವಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರದ ವಿಫಲವಾಗಿದೆ ಎಂದು ತಿಳಿಸಿದ್ದಾರೆ.

ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಉಲ್ಲೇಖಿಸಿದ ಅಣ್ಣಾಮಲೈ ಅವರು, ಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಟೀಕಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ, ʼʼ4 ಮತ್ತು 2ನೇ ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಇವರು ಕ್ಯಾಂಪಸ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಅಪರಿಚಿತ ವ್ಯಕ್ತಿ ಕ್ಯಾಂಪಸ್‌ಗೆ ಪ್ರವೇಶಿಸಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆʼʼ ಎಂದಿದ್ದಾರೆ.

“ತಮಿಳುನಾಡಿಗೆ ಕೆಲವು ಪದಗಳು ಹೊಸದು. ಅವುಗಳಲ್ಲಿ ಒಂದು ಸಾಮೂಹಿಕ ಅತ್ಯಾಚಾರ. ಕಳೆದ 3 ವರ್ಷಗಳಿಂದ ನಾವು ಅದನ್ನು ಆಗಾಗ್ಗೆ ಕೇಳುತ್ತಿದ್ದೇವೆ. ಮಹಿಳೆಯರ ವಿರುದ್ಧದ ಅಪರಾಧಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಈ ಘಟನೆಯು ಆಘಾತಕಾರಿ. ಅತ್ಯಂತ ಸುರಕ್ಷಿತ ಸ್ಥಳಗಳಲ್ಲಿ ಒಂದಾದ ಚೆನ್ನೈನಲ್ಲಿ – ವಿಶೇಷವಾಗಿ ದಶಕಗಳಿಂದ ಅಸ್ತಿತ್ವದಲ್ಲಿರುವ ವಿಶಾಲವಾದ ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ – ಒಬ್ಬ ವಿದ್ಯಾರ್ಥಿನಿ ಮತ್ತು ಒಬ್ಬ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಲಾಯಿತು. ವಿದ್ಯಾರ್ಥಿಯನ್ನು ಥಳಿಸಿ ಆತನ ಸ್ನೇಹಿತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ” ಎಂದು ಅಣ್ಣಾಮಲೈ ಹೇಳಿದ್ದಾರೆ.

“ಕ್ಯಾಂಪಸ್‌ನಲ್ಲಿನ ಸಿಸಿ ಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ. ಇದು ತಮಿಳುನಾಡಿನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಆಡಳಿತದ ಪ್ರಸ್ತುತ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ತಮಿಳುನಾಡು ಸರ್ಕಾರ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಕನಿಷ್ಠ ಇದು ಈ ರೀತಿಯ ಕೊನೆಯ ಘಟನೆಯಾಗಿರಲಿ” ಎಂದು ಅವರು ತಿಳಿಸಿದ್ದಾರೆ.

ʼʼಎಫ್‌ಐಆರ್‌ ಸೋರಿಕೆ ಮಾಡುವ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ್ದೀರಿ. ಅಲ್ಲದೆ ಇದು ಆಕೆಯ ಪ್ರತಿಷ್ಠೆಗೂ ಕಳಂಕ ತಂದಿದೆ. ಹೀಗೆ ಎಫ್‌ಐಆರ್‌ ಸೋರಿಕೆ ಮಾಡಿದ್ದಕ್ಕೆ ಪೊಲೀಸರು ಮತ್ತು ಡಿಎಂಕೆ ಸರ್ಕಾರಕ್ಕೆ ನಾಚಿಕೆಯಾಗಬೇಕುʼʼ ಎಂದು ಕಿಡಿ ಕಾರಿದ್ದಾರೆ.

ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಪ್ರವೇಶಿಸಿದ್ದ ಆರೋಪಿ 37 ವರ್ಷದ ಜ್ಞಾನಶೇಖರನ್‌ 2ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ನಂತರ ಅವಳನ್ನು ಪೊದೆಯೊಂದಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದರು. ಜ್ಞಾನಶೇಖರನ್‌ ಕ್ಯಾಂಪಸ್ ರಸ್ತೆಬದಿಯಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Physical Assault: ಅಣ್ಣಾ ವಿವಿ ಅತ್ಯಾಚಾರ ಪ್ರಕರಣ; ಉದಯ್‌ ನಿಧಿ ಸ್ಟಾಲಿನ್‌ ಜತೆ ಆರೋಪಿ ಫೋಟೊ! ಬಿಜೆಪಿ ಕಿಡಿ