ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ (Tamil Nadu BJP state president) ಕೆ ಅಣ್ಣಾಮಲೈ (K Annamalai) ಅವರು ಅಣ್ಣಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯ (Anna University Case) ಖಂಡಿಸಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆಯಷ್ಟೇ ಡಿಎಂಕೆ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದ ಅವರು ಇದೀಗ ತಮ್ಮ ನಿವಾಸ ಎದುರು ಆರು ಬಾರಿ ಚಾಟಿಯಿಂದ ಮೈಮೇಲೆ ಹೊಡೆದುಕೊಂಡು ಪ್ರತಿಭಟಿಸಿದ್ದಾರೆ.
ಕೊಯಮತ್ತೂರಿನ ಕಾಲಪಟ್ಟಿ ರಸ್ತೆಯಲ್ಲಿರುವ ತಮ್ಮ ಮನೆಯ ಎದುರು ತಮಿಳುನಾಡು ಅಣ್ಣಾಮಲೈ ತಮಗೆ ತಾವೇ ಚಾಟಿ ಏಟನ್ನು ಕೊಟ್ಟುಕೊಂಡು ಪ್ರತಿಭಟನೆ ನಡೆಸಿದರು. ಹಸಿರು ಧೋತಿ ಧರಿಸಿ, ಶರ್ಟ್ ಧರಿಸದೇ ಮನೆಯಿಂದ ಹೊರಬಂದ ಅಣ್ಣಾಮಲೈ, ಹಗ್ಗದಿಂದ ಮಾಡಿದ ಚಾವಟಿಯಿಂದ ಚಾಟಿ ಬೀಸಿಕೊಂಡು ತಮ್ಮ ದೇಹವನ್ನೇ ದಂಡನೆಗೆ ಒಳಪಡಿಸಿಕೊಂಡಿದ್ದಾರೆ. ಏಳನೇ ಬಾರಿ ಚಾಟಿ ಬೀಸುತ್ತಿದ್ದಾಗ ಬಿಜೆಪಿ ಸದಸ್ಯರು ಅವರನ್ನು ತಡೆದಿದ್ದಾರೆ. ಬಿಜೆಪಿ ಸದಸ್ಯರು ಸ್ಟಾಲಿನ್ ವಿರುದ್ಧ ನಿಮಗೆ ನಾಚಿಕೆ ಇಲ್ಲವೇ? ಎಂಬ ಬರಹಗಳಿರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
Tamil Nadu BJP leader Annamalai whipped himself to demand justice for the Anna University r@pe victim and vowed to remain barefoot until DMK is ousted. pic.twitter.com/KlP4jesEsn
— Keh Ke Peheno (@coolfunnytshirt) December 27, 2024
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು , ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಎಫ್‌ಐಆರ್ ಸೋರಿಕೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು. ನಮ್ಮನ್ನು ನಾವೇ ಹೊಡೆದುಕೊಳ್ಳುವುದು, ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಅತ್ಯಂತ ಕಠಿಣವಾದ ಆಚರಣೆಗಳ ಮಾಡುವುದು ಇತ್ಯಾದಿಗಳು ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ ಅಥವಾ ಯಾವುದರ ವಿರುದ್ಧವೂ ಅಲ್ಲ. ಇದು ರಾಜ್ಯದಲ್ಲಿ ಆಗುತ್ತಿರುವ ನಿರಂತರ ಅನ್ಯಾಯದ ವಿರುದ್ಧ ಎಂದು ಹೇಳಿದ್ದಾರೆ.
ನನ್ನ ಅನೇಕ ಪೂರ್ವಜರು ಈ ಮಾರ್ಗದಲ್ಲಿ ನಡೆದರು ಮತ್ತು ನಾನು ಕೂಡ ಅದನ್ನು ಆರಿಸಿಕೊಂಡಿದ್ದೇನೆ. ಇದು ಉನ್ನತ ಶಕ್ತಿಗೆ ಶರಣಾಗುವ, ದೇವರಿಗೆ ಶರಣಾಗುವ ಪ್ರಕ್ರಿಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಶೂ ತ್ಯಜಿಸಿರುವ ಬಗ್ಗೆ ಮಾತನಾಡಿ , ನನ್ನ ಚಪ್ಪಲಿಗಳನ್ನು ತೆಗೆದುಹಾಕುವ ಬಗ್ಗೆ, ನಾನು ಸಾಕಷ್ಟು ಯೋಚಿಸಿ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅನ್ಯಾಯದ ವಿರುದ್ಧ ಪಕ್ಷ ಮತ್ತು ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತದೆ. ಇದೀಗ ನಾವು ದೊಡ್ಡ ಶಕ್ತಿಯ ಮೊರೆ ಹೋಗಿದ್ದೇವೆ. ನಡೆಯುತ್ತಿರುವ ವಿಷಯಗಳನ್ನು ನೋಡಿಕೊಳ್ಳಲು ದೊಡ್ಡ ಶಕ್ತಿಗೆ ಬಿಟ್ಟಿದ್ದೇವೆ. ನನಗೆ ನಂಬಿಕೆ ಇದೆ ಇದಕ್ಕೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದಾಗಿ ತಮಿಳುನಾಡಿನಾದ್ಯಂತ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಣ್ಣಾಮಲೈ ಅವರು ಪ್ರಕಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : K Annamalai: ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಕಿತ್ತೊಗೆಯುವ ತನಕ ಚಪ್ಪಲಿ ಧರಿಸಲ್ಲ; ಬಿಜೆಪಿ ನಾಯಕ ಅಣ್ಣಾಮಲೈ ಪ್ರತಿಜ್ಞೆ