ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್(Manmohan Singh) ಅವರ ಪಾರ್ಥೀವ ಶರೀರ ದೆಹಲಿಯ ಅವರ ನಿವಾಸದಲ್ಲಿದ್ದು, ಗಣ್ಯಾತಿಗಣ್ಯರು ಸಿಂಗ್ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅವರ ನಿಧನದ ಹಿನ್ನೆಲೆ ಗೌರವಾರ್ಥವಾಗಿ ಕೇಂದ್ರ ಸರ್ಕಾರವು ದೇಶದಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆದಿದ್ದು, ಸಚಿವ ಸಂಪುಟದ(Union Cabinet) ಸದಸ್ಯರೆಲ್ಲರೂ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ(Condolence) ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಅವರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಆಗಮಿಸಿ ಮನಮೋಹನ್ ಸಿಂಗ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಕೇಂದ್ರ ಸಚಿವ ಜೆಪಿ ನಡ್ಡಾ ಸಹಿತ ಇತರೆ ಬಿಜೆಪಿ ನಾಯಕರು ಸಿಂಗ್ ಸ್ವಗೃಹಕ್ಕೆ ಬಂದು ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದರು. ಕಾಂಗ್ರೆಸ್ ಸಂಸದರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಸಹ ಮನಮೋಹನ್ ಸಿಂಗ್ ಅವರ ಅಂತಿಮ ದರ್ಶನ ಪಡೆದಿದ್ದು, ಸಿಂಗ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮನಮೋಹನ್ ಸಿಂಗ್ ನೀಡಿದ ಅಪರೂಪದ ಕೊಡುಗೆಗಳು
ಮುಕ್ತ ಮಾರುಕಟ್ಟೆ: ಅವರು ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಮುಕ್ತ ಮಾರುಕಟ್ಟೆಯೊಂದೇ ದೇಶದ ಮುಂದಿರುವ ಮಾರ್ಗ ಎಂದು ಬಲವಾಗಿ ನಂಬಿದ್ದ ಅವರು ಅದಕ್ಕೆ ಅನುಗುಣವಾಗಿ ಕಾರ್ಯ ಪ್ರವೃತ್ತರಾದರು. 1994-95ರ ಬಜೆಟ್ನಲ್ಲಿ ಭಾರೀ ಬದಲಾವಣೆಗೆ ಕೈ ಹಾಕಿದರು. ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದ ಆಗಿದೆ ಎನ್ನುವುದಾದರೆ, ಅದಕ್ಕೆ ಸಿಂಗ್ ಹಾಕಿದ ಅಡಿಪಾಯವನ್ನು ಯಾರೂ ಮರೆಯುವಂತಿಲ್ಲ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (NREGA): 2005ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. ಈ ಯೋಜನೆ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೂಲಿ ಉದ್ಯೋಗವನ್ನು ನೀಡಿತು. ಜನರ ಜೀವನೋಪಾಯವನ್ನು ಸುಧಾರಿಸುವ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ
ಮಾಹಿತಿ ಹಕ್ಕು ಕಾಯಿದೆ (RTI): 2005 ರಲ್ಲಿ ಅಂಗೀಕರಿಸಲ್ಪಟ್ಟ RTI ನಾಗರಿಕರಿಗೆ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡುತ್ತದೆ, ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಿತ್ತು.
ಆಧಾರ್ ಸೌಲಭ್ಯ: ನಿವಾಸಿಗಳಿಗೆ ವಿಶಿಷ್ಟ ಗುರುತನ್ನು ಒದಗಿಸಲು, ವಿವಿಧ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಆಧಾರ್ ಯೋಜನೆಯನ್ನು ಇವರ ಅವಧಿಯಲ್ಲಿಯೇ ಆರಂಭಿಸಲಾಗಿತ್ತು. ಪ್ರಸ್ತುತ ಈಗ ಆಧಾರ್ ಕಾರ್ಡ್ ಪ್ರತಿಯೊಂದಕ್ಕೆ ಅನಿವಾರ್ಯವಾಗಿದೆ.
ನೇರ ಲಾಭ ವರ್ಗಾವಣೆ: ಡಾ. ಮನಮೋಹನ್ ಸಿಂಗ್ ಅವರ ಸರ್ಕಾರವು ನೇರ ಲಾಭ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು, ಇದು ಕಲ್ಯಾಣ ನಿಧಿ ವಿತರಣೆಯನ್ನು ಸರಳೀಕರಿಸಿತು ಮತ್ತು ಅನೇಕ ಲೋಪದೋಷಗಳನ್ನು ತೆಗೆದುಹಾಕಿತು.
ಕೃಷಿ ಸಾಲ ಮನ್ನಾ (2008): ಕೃಷಿ ಬಿಕ್ಕಟ್ಟು ನೀಗಿಸಲು, ರೈತರನ್ನು ಸಾಲದ ಸುಳಿಯಿಂದ ಹೊರತರಲು ಡಾ ಮನಹೋಹನ್ ಸಿಂಗ್ ಅವರು ಕೃಷಿ ಸಾಲ ಮನ್ನಾ ಮಾಡಿದ್ದರು. ಸುಮಾರು 60,000 ಕೋಟಿ ರೂ.ಗಳ ಸಾಲ ಮನ್ನಾ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕಾರ್ಯ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರದಲ್ಲಿದ್ದಾಗಿತ್ತು.
ಈ ಸುದ್ದಿಯನ್ನೂ ಓದಿ:Sikandar Teaser: ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಸಿಕಂದರ್ ಚಿತ್ರದ ಟೀಸರ್ ರಿಲೀಸ್ ದಿನಾಂಕ ಮುಂದೂಡಿಕೆ