ಹೆಲ್ಮೆಟ್ ಒಳಗಡೆ, ಶೂಗಳ ಒಳಭಾಗದಲ್ಲಿ ವಿಷಕಾರಿ ಜಂತುಗಳು ನಮಗೆ ಗೊತ್ತಿಲ್ಲದಂತೆ ಸೇರಿಕೊಂಡಿರುವ ಅದೆಷ್ಟೋ ಘಟನೆಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿಯೂ ಇರುತ್ತೇವೆ, ಆದರೆ ಇಲ್ಲೊಂದು ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬರ ಹೆಲ್ಮೆಟ್ ಒಳಗಡೆ ಅವಿತು ಕುಳಿತಿದ್ದ ಮರಿ ನಾಗರವೊಂದು (Cobra) ಆ ವ್ಯಕ್ತಿಗೆ ಕಚ್ಚಿದ ಪರಿಣಾಮ ಆ ವ್ಯಕ್ತಿಯ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಈ ಭಯಾನಕ ಘಟನೆಯ ವಿಡಿಯೋ ಇದಿಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಈ ಘಟನೆ ಎಲ್ಲಿ ನಡೆದಿರುವುದು ಎಂದು ತಿಳಿದುಬಂದಿಲ್ಲವಾದರೂ, ವಿಡಿಯೊದಲ್ಲಿ ಕನ್ನಡದಲ್ಲಿ (Kannada) ಕ್ಯಾಪ್ಷನ್ ಹಾಕಲಾಗಿದೆ ಮತ್ತು ವಾಯ್ಸ್ ಓವರ್ ಕನ್ನಡದಲ್ಲಿ ನೀಡಲಾಗಿದೆ. ದಕ್ಷಿಣ ಭಾರತದ (South India) ರಾಜ್ಯವೊಂದರಲ್ಲಿ ನಡೆದಿರುವ ಘಟನೆ ಇದೆಂದು ಹೇಳಲಾಗುತ್ತಿದೆ. ಮೊದಲಿಗೆ ಈ ಹೆಲ್ಮೆಟ್ ಒಳಗಡೆ ಹಾವು ಇರುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಆ ಬಳಿಕ ಹಾವು ಹಿಡಿಯುವವರು ಜಾಗರೂಕತೆಯಿಂದ ಹೆಲ್ಮೆಟ್ ಒಳಭಾಗವನ್ನು ಓಪನ್ ಮಾಡಿದಾಗ ಅದರೊಳಗಿಂದ ವಿಷಕಾರಿ ಮರಿ ನಾಗರ ಹೊರ ಬರುವ ಮೂಲಕ ಅಲ್ಲಿದ್ದವರೆಲ್ಲಾ ಬೆಚ್ಚಿ ಬೀಳುವಂತಾಗಿದೆ.
ಈ ಆಘಾತಕಾರಿ ವಿಡಿಯೋವನ್ನು @ಮನೊಜ್ ಎಸ್ ಹೆಚ್28986262 (MANOJ SHARMA LUCKNOW UP) ಎಂಬ ಎಕ್ಸ್ (X) ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು. ಈ ವಿಡಿಯೋದಲ್ಲಿರುವಂತೆ, ಸ್ಕೂಟರ್ ಮೇಲೆಯೇ ಒಬ್ಬ ವ್ಯಕ್ತಿ ತಲೆ ಕೆಳಮುಖವಾಗಿ ಬಿದ್ದುಕೊಂಡಿದ್ದಾರೆ. ಅಲ್ಲಿದ್ದವರು ಆತನನ್ನು ಎತ್ತಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಆ ವ್ಯಕ್ತಿಯನ್ನು ಆಂಬುಲೆನ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಆ ವ್ಯಕ್ತಿ ಮೃತಪಟ್ಟಿರುವ ಶಾಕಿಂಗ್ ವಿಚಾರ ಗೊತ್ತಾಗುತ್ತದೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಆ ವ್ಯಕ್ತಿ ತನ್ನ ಸ್ಕೂಟರನ್ನೇರಿ ಹೆಲ್ಮೆಟ್ ಹಾಕಿಕೊಂಡ ಸಂದರ್ಭದಲ್ಲಿ ಹೆಲ್ಮೆಟ್ ಒಳಗೆ ಬೆಚ್ಚಗೆ ಕುಳಿತಿದ್ದ ವಿಷಕಾರಿ ಮರಿ ನಾಗರ ಆ ವ್ಯಕ್ತಿಯ ತಲೆ ಭಾಗಕ್ಕೆ ಕಚ್ಚಿದೆ. ಹಾವಿನ ತೀವ್ರ ವಿಷದ ಪ್ರಭಾವದಿಂದ ಆತ ಸ್ಕೂಟರ್ ನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾನೆ. ಬಳಿಕ ಅಲ್ಲಿದ್ದವರು ಸಂಶಯಗೊಂಡು ಹಾವು ಹಿಡಿಯುವವರ ಮೂಲಕ ಹೆಲ್ಮೆಟ್ ಒಳಭಾಗವನ್ನು ಪರಿಶೀಲಿಸಿದಾಗ ಅದರೊಳಗೆ ಮರಿನಾಗರವಿರುವುದು ಪತ್ತೆಯಾಗಿದೆ.
ಇಂತಹದ್ದೇ ಘಟನೆಗಳು ಈ ಹಿಂದೆಯೂ ನಡೆದಿದ್ದು, 2023ರ ಅಕ್ಡೋಬರ್ ತಿಂಗಳಿನಲ್ಲಿ ಇಂತಹದ್ದೇ ಘಟನೆಯೊಂದು ಕೇರಳದ (Keral) ತ್ರಿಶ್ಯೂರ್ ನಲ್ಲಿ (Thrissur) ವರದಿಯಾಗಿತ್ತು. ಸೋಜನ್ ಎಂಬವರು ಸ್ವಲ್ಪದರಲ್ಲೇ ಹಾವಿನ ಕಡಿತದಿಂದ ಪಾರಾಗಿದ್ದರು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ನೆಲದ ಮೇಲೆ ಹೆಲ್ಮೆಟ್ ಇರಿಸಿದ್ದ ಸೋಜನ್ ಬಳಿಕ ಸಾಯಂಕಾಲ ತನ್ನ ಹೆಲ್ಮೆಟ್ ಧರಿಸಲೆಂದು ನೋಡಿದಾಗ ಅದೃಷ್ಟವಶಾತ್ ಅವರಿಗೆ ತನ್ನ ಹೆಲ್ಮೆಟ್ ಒಳಗಡೆ ನಾಗರ ಹಾವಿರುವುದು ಕಂಡುಬಂದಿದೆ.
ಈ ಸುದ್ದಿಯನ್ನೂ ಓದಿ: K Annamalai: ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ- DMK ಸರ್ಕಾರದ ವಿರುದ್ಧ ವಿನೂತನ ಪ್ರೊಟೆಸ್ಟ್
ಬಳಿಕ ಸೋಜನ್ ಅವರು ಎಚ್ಚರಿಕೆಯಿಂದ ತನ್ನ ಹೆಲ್ಮೆಟ್ ಒಳಗಡೆ ಅಡಗಿ ಕುಳಿತಿದ್ದ ಮರಿನಾಗರವನ್ನು ಹೊರ ತೆಗೆದಿದ್ದಾರೆ. ಆ ಮೂಲಕ ಸೋಜನ್ ಆ ದಿನ ಭಾರಿ ಗಂಡಾಂತರವೊಂದರಿಂದ ಪಾರಾಗಿದ್ದಾರೆ. ಆದರೆ ದಕ್ಷಿಣ ಭಾರತದ ಕಡೆಯದ್ದು ಎನ್ನಲಾಗುತ್ತಿರುವ ಈ ವಿಡಿಯೊದಲ್ಲಿ, ಬೈಕ್ ಸವಾರ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟಿರುವುದು ಮಾತ್ರ ದುರಾದೃಷ್ಟಕರ.