ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ (IND vs AUS) ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅರ್ಧಶತಕ ಸಿಡಿಸಿದರು. ಆ ಮೂಲಕ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಎಡಗೈ ಆಟಗಾರ ಸೇರ್ಪಡೆಯಾಗಿದ್ದಾರೆ.
ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡವನ್ನು 474 ರನ್‌ಗಳಿಗೆ ಆಲ್‌ಔಟ್ ಆದ ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕನಾಗಿ ಕಣಕ್ಕೆ ಇಳಿದ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಅತ್ಯುತ್ತಮ ಬ್ಯಾಟ್ ಮಾಡಿದ ಜೈಸ್ವಾಲ್, ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಮೆಟ್ಟಿ ನಿಂತರು.
IND vs AUS: ಎರಡನೇ ದಿನವೂ ಹಿನ್ನಡೆ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಸಂಕಷ್ಟ!
ಮನಮೋಹಕ ಬ್ಯಾಟಿಂಗ್ ಪ್ರದರ್ಶನ ತೋರಿದ ಯಶಸ್ವಿ ಜೈಸಸ್ವಾಲ್ ಆಡಿದ 118 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು. ಆ ಮೂಲಕ ಶತಕ ಸಿಡಿಸುವ ಸನಿಹದಲ್ಲಿದ್ದರು. ಆದರೆ, ಅನಗತ್ಯವಾಗಿ ರನ್ ಕಲೆ ಹಾಕಲು ಪ್ರಯತ್ನಿಸಿ ರನ್‌ಔಟ್ ಆದರು. ಆ ಮೂಲಕ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು.
ಸಚಿನ್ ಒಳಗೊಂಡ ಅಗ್ರ ಐದರೊಳಗೆ ಲಗ್ಗೆಯಿಟ್ಟ ಜೈಸ್ವಾಲ್
ಬಾಕ್ಸಿಂಗ್ ಡೇ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 82 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನ ಅಗ್ರ ಐದಕ್ಕೆ ಲಗ್ಗೆ ಇಟ್ಟರು. 2024ರಲ್ಲಿ ಜೈಸ್ವಾಲ್ ಆಡಿದ 28 ಟೆಸ್ಟ್ ಇನಿಂಗ್ಸ್‌ಗಳಿಂದ 1394 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಸಚಿನ್ ತೆಂಡೂಲ್ಕರ್ ಒಳಗೊಂಡ ಅಗ್ರ ಐದರೊಳಗೆ ಎಡಗೈ ಸೇರ್ಪಡೆಯಾದರು.
ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು
1) ಸಚಿನ್ ತೆಂಡೂಲ್ಕರ್ – 2010 ರಲ್ಲಿ 23 ಇನಿಂಗ್ಸ್‌ಗಳಲ್ಲಿ 1562
2) ವೀರೇಂದ್ರ ಸೆಹ್ವಾಗ್ – 2008 ರಲ್ಲಿ 27 ಇನಿಂಗ್ಸ್‌ಗಳಲ್ಲಿ 1462
3) ವೀರೇಂದ್ರ ಸೆಹ್ವಾಗ್ – 2010 ರಲ್ಲಿ 25 ಇನಿಂಗ್ಸ್‌ಗಳಲ್ಲಿ 1422
4) ಸುನಿಲ್ ಗವಾಸ್ಕರ್ – 1979 ರಲ್ಲಿ 26 ಇನಿಂಗ್ಸ್‌ಗಳಲ್ಲಿ 1407
5) ಯಶಸ್ವಿ ಜೈಸ್ವಾಲ್ – 2024 ರಲ್ಲಿ 28 ಇನಿಂಗ್ಸ್‌ಗಳಲ್ಲಿ 1394
ಭಾರತ ತಂಡಕ್ಕೆ ಸಂಕಷ್ಟ
ಅಂದ ಹಾಗೆ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ, 46 ಓವರ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.
ಈ ಸುದ್ದಿಯನ್ನು ಓದಿ: IND vs AUS: ‘ದಯವಿಟ್ಟು ವಿದಾಯ ಹೇಳಿ’-ರೋಹಿತ್ ಶರ್ಮಾಗೆ ಫ್ಯಾನ್ಸ್ ಆಗ್ರಹ!