ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ (Mumbai terror attack) ಸಂಚುಕೋರ ಮತ್ತು ಲಷ್ಕರ್-ಎ-ತೈಬಾ (LET) ಉಪ ಮುಖ್ಯಸ್ಥ ಅಬ್ದುಲ್ ರಹಮಾನ್ ಮಕ್ಕಿ (Abdul Rehman Makki) ಶುಕ್ರವಾರ, (ಡಿ 27) ದಂದು ಪಾಕಿಸ್ತಾನದಲ್ಲಿ (Pakistan) ಹೃದಯಾಘಾತದಿಂದ ನಿಧನನಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಲಾಹೋರ್ನ ಖಾಸಗಿ ಆಸ್ಪತ್ರೆಯಲ್ಲಿ ಶುಗರ್ ಮಟ್ಟ ಹೆಚ್ಚಿದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ. ಮೇ 2019 ರಲ್ಲಿ, ಆತನನ್ನು ಪಾಕಿಸ್ತಾನ ಸರ್ಕಾರವು ಬಂಧಿಸಿ ಲಾಹೋರ್ನಲ್ಲಿ ಗೃಹಬಂಧನದಲ್ಲಿ ಇರಿಸಿತ್ತು. 2020 ರಲ್ಲಿ, ಪಾಕಿಸ್ತಾನಿ ನ್ಯಾಯಾಲಯವು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
166 ಜನರ ಸಾವಿಗೆ ಕಾರಣವಾದ 26/11 ಮುಂಬೈ ಭಯೋತ್ಪಾದಕ ದಾಳಿಗೆ ಹಣಕಾಸು ಒದಗಿಸುವಲ್ಲಿ ಮಕ್ಕಿ ಅಬ್ದುಲ್ ರಹಮಾನ್ ಭಾಗಿಯಾಗಿದ್ದ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಒಟ್ಟು ಒಂಬತ್ತು ಭಯೋತ್ಪಾದಕರು ಸಹ ಕೊಲ್ಲಲ್ಪಟ್ಟಿದ್ದರು, ಮತ್ತು ಒಬ್ಬ ಭಯೋತ್ಪಾದಕ ಅಮೀರ್ ಅಜ್ಮಲ್ ಕಸಬ್ ಜೀವಂತವಾಗಿ ಸಿಕ್ಕಿಬಿದ್ದ. ಆತನಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು.
ಮುಂಬೈ ದಾಳಿಯ ಹೊರತಾಗಿ ಡಿಸೆಂಬರ್ 22, 2000 ರಂದು ನಡೆದ ಕೆಂಪು ಕೋಟೆ ಮೇಲಿನ ಉಗ್ರರ ದಾಳಿಯಲ್ಲಿ ಈತನೇ ಮುಖ್ಯ ರುವಾರಿಯಾಗಿದ್ದ. ಈತನ್ನು ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಗೆ ಸೇರಿಸಲಾಗಿತ್ತು. ಇದಲ್ಲದೆ ಜನವರಿ 1, 2008 ರಂದು ರಾಂಪುರದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಯಿತು. ಇದರಲ್ಲಿ 7 ಸೈನಿಕರು ಮತ್ತು ಒಬ್ಬ ರಿಕ್ಷಾ ಚಾಲಕನನ್ನು ಹತ್ಯೆ ಮಾಡಿದ್ದರು. ಇದರಲ್ಲೂ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಮಾಸ್ಟರ್ ಮೈಂಡ್ ಆಗಿದ್ದ.
ಮಸೂದ್ ಅಜರ್ಗೆ ಹೃದಯಾಘಾತ
ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ (Masood Azhar) ಹೃದಯಾಘಾತಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ. ಪಾಕಿಸ್ತಾನಕ್ಕೆ (Pakistan) ಚಿಕಿತ್ಸೆ ಪಡೆಯಲು ಅವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ಹೃದಯಾಘಾತಕ್ಕೆ ಒಳಗಾದಾಗ ಮಸೂದ್ ಅಜರ್ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿದ್ದ. ಇದೀಗ ಆತನನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದ್ದು, ಕರಾಚಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಸೂದ್ ಅಜರ್ಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರನ್ನು ಇಸ್ಲಾಮಾಬಾದ್ನಿಂದ ಕರಾಚಿಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ : Masood Azar: ಜೈಶ್ ಉಗ್ರ ಮಸೂದ್ ಅಜಾರ್ ವಿರುದ್ಧ ಕಠಿಣ ಕ್ರಮ ಜರುಗಿಸಿ; ಪಾಕಿಸ್ತಾನಕ್ಕೆ ಭಾರತ ಆಗ್ರಹ