ಚಿಕ್ಕಬಳ್ಳಾಪುರ : ವಿಕಲಚೇತನರಿಗೆ ಮೀಸಲಿರುವ ಶೇ.೫% ರ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ದಿವ್ಯಾಂಗರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ನಗರಸಭಾ ಅಧ್ಯಕ್ಷ ಗಜೇಂದ್ರ.ಎ ತಿಳಿಸಿದರು.
ಚಿಕ್ಕಬಳ್ಳಾಪುರ ನಗರಸಭೆ, ಜಿಲ್ಲಾ ದಿವ್ಯಾಂಗರರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ದಿವ್ಯಾಂಗರರ ಪುನರ್ವಸತಿ ಕೇಂದ್ರ, ಚಿಕ್ಕಬಳ್ಳಾಪುರ ಅನುಷ್ಟಾನ: ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಹಾಗೂ ಇನ್ಸ್ಟಾಲಿಂಬ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರ ಜಂಟಿ ಸಹಯೋಗದೊಂದಿಗೆ ಗುರುವಾರ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಅಗತ್ಯ ಮೌಲ್ಯ ಮಾಪನ ಶಿಬಿರದೊಂದಿಗೆ ಜಪಾನ್ ಟೆಕ್ನಾಲಜಿ ಕೃತಕಾಂಗಗಳ ಅರಿವು ಮತ್ತು ಅಳತೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೇ.೫% ರ ಅನುದಾನದಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ ವಿಕಲಚೇತನರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ಆಯೋಜಿಸಿರುವ ಅಗತ್ಯ ಮೌಲ್ಯ ಮಾಪನ ಶಿಬಿರದಲ್ಲಿ ಬಂದತಹ ವಿಕಲಚೇತನರ ಅರ್ಜಿಗಳನ್ನು ಪರಿಶೀಲಿಸಿ ನಗರಸಭೆ ವತಿಯಿಂದ ಶೀಘ್ರದಲ್ಲೇ ಅವರಿಗೆ ತಲುಪುವಂತೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಸಾಯಿ ಇಂಟರ್ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರು ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಕೆ.ಎನ್.ಮೂರ್ತಿ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ೩ಡಿ ಸ್ಕ್ಯಾನರ್ ಮಾದರಿ ಯಲ್ಲಿ ಕೃತಕಾಂಗಗಳ ತಯಾರಿಕೆ ಮಾಡಲಾಗುತ್ತಿದೆ. ಇದರ ಉಪಯೋಗಗಳ ಕುರಿತು ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವ್ಯಾಪ್ತಿಗಳಲ್ಲಿ ಶಿಬಿರಗಳನ್ನು ಆಯೋಜಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯ, ಸೇವೆಗಳ ಬಗ್ಗೆ ಅರಿವು ಮೂಡಿಸಿ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು. ಕೇಂದ್ರದ ವತಿಯಿಂದ ಯುಡಿಐಡಿಕಾರ್ಡ್ / ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ನಾಗರಾಜ್.ಜೆ ಮಾತನಾಡಿ, ವಿಕಲಚೇತನರಿಗೆ ನಗರಸಭೆ ವತಿಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರದ ಇನ್ನಿತರ ಯೋಜನೆಗಳನ್ನು ನಗರಸಭಾ ವ್ಯಾಪ್ತಿಯ ಎಲ್ಲಾ ಅರ್ಹ ವಿಕಲಚೇತನರು ಪಡೆದುಕೊಳ್ಳಬೇಕು. ವಿಕಲಚೇತನರಿಗೆ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳಿಗೆ ಸಹಾಯಧನವನ್ನು ನೀಡಿ ವಿಕಲ ಚೇತರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಎಲ್ಲರೂ ಒಟ್ಟಿಗೆ ಶ್ರಮಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಚಿಕ್ಕಬಳ್ಳಾಪುರ ಕಚೇರಿಯ ದೂ.ಸಂ: ೭೦೨೬೯೬೯೬೬೯ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಗಣೇಶ್.ಆರ್, ಇನ್ಸ್ಟಾ ಲಿಂಬ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳು, ನಗರಸಭೆ ಕಾರ್ಯಾಲಯದ ಸಿಬ್ಬಂದಿಗಳು ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು, ಚಿಕ್ಕಬಳ್ಳಾಪುರ ನಗರ UಖW’s ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಭಾಗವಹಿಸಿದ್ದರು.