ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯಲ್ಲಿ ಪರಿಣಾಮಕಾರಿಯಾಗಿ ಬೌಲ್ ಮಾಡುವಲ್ಲಿ ವಿಫಲರಾಗುತ್ತಿರುವ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಪ್ಲೇಯಿಂಗ್ XIನಿಂದ ಕೈ ಬಿಡಬೇಕೆಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಗ್ರಹಿಸಿದ್ದಾರೆ.
ಈ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಅವರಿಂದ ಇನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ. ಅವರು ಇಲ್ಲಿಯ ತನಕ ಆಡಿದ ಮೂರು ಟೆಸ್ಟ್ ಪಂದ್ಯಗಳಿಂದ ಕೇವಲ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಹೊಸ ಚೆಂಡಿನಲ್ಲಿ ಬೌಲ್ ಮಾಡುವಾಗ ಅವರು ಅಷ್ಟೊಂದು ಪರಿಣಾಮಕಾರಿಯಾಗಿ ಇನ್ನು ಕಂಡು ಬಂದಿಲ್ಲ. ಅದರಲ್ಲಿಯೂ ಲೈನ್ ಅಂಡ್ ಲೆನ್ತ್ ನಲ್ಲಿ ಅವರು ಎಡವುತ್ತಿದ್ದಾರೆ. ಕೊನೆಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ತೋರಿದ್ದ ಪ್ರದರ್ಶನವನ್ನು ಈ ಬಾರಿ ಮುಂದುವರಿಸುವಲ್ಲಿ ಹೈದರಾಬಾದ್ ಮೂಲದ ವೇಗಿ ವಿಫಲರಾಗಿದ್ದಾರೆ. ಆದರೂ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಬೆಂಬಲಿಸುತ್ತಿದೆ.
ಅದರಲ್ಲಿಯೂ ವಿಶೇಷವಾಗಿ ಮೆಲ್ಬರ್ನ್ ಟೆಸ್ಟ್‌ನಲ್ಲಿ ಅವರು ತಮ್ಮ ಬೌಲಿಂಗ್ ವೈಖರಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅಲ್ಲದೆ ಆಕ್ರಮಣಕಾರಿಯಾಗಿಯೂ ಅವರು ಕಾಣುತ್ತಿಲ್ಲ. ಅಲ್ಲದೆ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಎದುರು ಸಿರಾಜ್ ಮಂಕಾಗಿ ಕಂಡಿದ್ದರು ಹಾಗೂ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 23 ಓವರ್‌ಗಳನ್ನು ಬೌಲ್ ಮಾಡಿ 122 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದರಲ್ಲಿ ಅವರು ವೈಡ್ ಎಸೆತಗಳನ್ನು ಹಾಕಿದ್ದಾರೆ.
ಮೊಹಮ್ಮದ್ ಸಿರಾಜ್‌ರನ್ನು ಕೈ ಬಿಡಿ ಎಂದ ಗವಾಸ್ಕರ್
“ಮೊಹಮ್ಮದ್ ಸಿರಾಜ್‌ಗೆ ಸ್ವಲ್ಪ ವಿರಾಮ ಅಗತ್ಯವಿದೆ ಎಂದು ನನಗೆ ಅನಿಸುತ್ತಿದೆ. ಕೇವಲ ವಿರಾಮ ಮಾತ್ರವಲ್ಲ, ತಂಡದಲ್ಲಿ ಉತ್ತಮ ಪ್ರದರ್ಶನ ತೋರಿಲ್ಲವಾದರೆ, ನಿಮ್ಮನ್ನು ಕೈ ಬಿಡಲಾಗುತ್ತದೆ ಎಂದು ಅವರಿಗೆ ಹೇಳಬೇಕಾದ ಅಗತ್ಯವಿದೆ. ನಿಮ್ಮ ಬೌಲಿಂಗ್ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ ಹಾಗಾಗಿ ನಿಮ್ಮನ್ನು ಹೊರಗಿಡಬೇಕಾಗುತ್ತದೆ ಎಂದು ನೀವು ನೇರವಾಗಿ ಹೇಳಬೇಕು. ಒಂದು ವೇಳೆ ವಿರಾಮ ಎಂದು ಹೇಳಿದರೆ, ಇದು ಇನ್ನುಳಿದ ಆಟಗಾರರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಹಾಗೂ ನಾವು ತಂಡದಲ್ಲಿ ಉಳಿಯಲು ನಮ್ಮ ಪ್ರದರ್ಶನದಲ್ಲಿ ಸುಧಾರಣೆ ಕಾಣಬೇಕಿಲ್ಲ ಎಂದು ತಿಳಿದುಕೊಳ್ಳುತ್ತಾರೆ,” ಎಂದು ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
“ನೋಡಿ, ಫಾಸ್ಟ್ ಬೌಲಿಂಗ್‌ಗೆ ನೆರವಾಗುವ ಪಿಚ್‌ಗಳಲ್ಲಿ ನಾವು ನಿರೀಕ್ಷೆ ಮಾಡಿದ ರೀತಿಯಲ್ಲಿ ನೀವು ಬೌಲ್ ಮಾಡುತ್ತಿಲ್ಲ. ಈ ರೀತಿ ಮೊಹಮ್ಮದ್ ಸಿರಾಜ್‌ಗೆ ಹೇಳಬೇಕಾದ ಅಗತ್ಯವಿದೆ. ನೀವು ಫಾಸ್ಟ್ ಬೌಲಿಂಗ್ ವಿಭಾಗದಲ್ಲಿ ಎರಡು ಬದಲಾವಣೆಯನ್ನು ಬಯಸಿದರೆ, ಹರ್ಷಿತ್ ರಾಣಾ ಹಾಗೂ ಪ್ರಸಿಧ್ ಕೃಷ್ಣ ಅವರನ್ನು ಆಯ್ಕೆ ಮಾಡಬಹುದು. ಈ ಇಬ್ಬರೂ ಜಸ್‌ಪ್ರೀತ್ ಬುಮ್ರಾಗೆ ಸಾಥ್ ನೀಡಬಲ್ಲರು. ಹಾಗಾಗಿ ನೀವು ಈ ಕೆಲಸವನ್ನು ಮಾಡಿ,” ಎಂದು ಬ್ಯಾಟಿಂಗ್ ದಿಗ್ಗಜ ಆಗ್ರಹಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 474 ರನ್‌ಗಳನ್ನು ಕಲೆ ಹಾಕಿತು. ಆಸ್ಟ್ರೇಲಿಯಾ ಪರ ಸ್ಟೀವನ್ ಸ್ಮಿತ್ 140 ರನ್‌ಗಳನ್ನು ಕಲೆ ಹಾಕಿದರು ಹಾಗೂ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಒಟ್ಟಾರೆ ಜಸ್‌ಪ್ರೀತ್ ಬುಮ್ರಾ ಬೌಲ್ ಮಾಡಿದ 28.4 ಓವರ್‌ಗಳಿಗೆ 99 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು, ಇವರ ಜೊತೆಗೆ ರವೀಂದ್ರ ಜಡೇಜಾ ಅವರು ಮೂರು ವಿಕೆಟ್ ಪಡೆದರೆ, ಆಕಾಶ ದೀಪ್ ಎರಡು ವಿಕೆಟ್ ತನ್ನದಾಗಿಸಿಕೊಂಡರು.
ಈ ಸುದ್ದಿಯನ್ನು ಓದಿ: IND vs AUS: ಎರಡನೇ ದಿನವೂ ಹಿನ್ನಡೆ, ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಸಂಕಷ್ಟ!