Sunday, 29th December 2024

DK Shivakumar: ಕಾಂಗ್ರೆಸ್ ಅಧಿವೇಶನದಲ್ಲಿ ಮಹಿಳೆಯರನ್ನು ತಳ್ಳಿದ ಡಿಕೆಶಿ; ಬಿಜೆಪಿ ಹಂಚಿಕೊಂಡ ವಿಡಿಯೊ ಇಲ್ಲಿದೆ

DK Shivakumar

ಬೆಂಗಳೂರು: ರಾಜ್ಯದ ಆಡಳಿತರೂಢ ಕಾಂಗ್ರೆಸ್‌ ಮತ್ತು ವಿಪಕ್ಷ ಬಿಜೆಪಿ ನಡುವೆ ಪ್ರತಿದಿನ ಒಂದಲ್ಲ ವಿಚಾರಕ್ಕೆ ವಾಗ್ವಾದ ನಡೆಯುತ್ತಲೇ ಇರುತ್ತದೆ. ಇದೀಗ ಬಿಜೆಪಿಯು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಅವರದ್ದು ಗೂಂಡಾ ವರ್ತನೆ ಎಂದು ದೂರಿ ಅದಕ್ಕೆ ಸಾಕ್ಷಿ ಎಂಬಂತೆ ವಿಡಿಯೊವೊಂದನ್ನು ಹಂಚಿಕೊಂಡಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ (Viral Video). ಈ ವಿಡಿಯೊದಲ್ಲಿ ಡಿಕೆಶಿ ಮಹಿಳೆಯರನ್ನು ತಳ್ಳುತ್ತಿರುವುದು ಕಂಡು ಬಂದಿದೆ. ಸದ್ಯ ಈ ದೃಶ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್​ ಅಧಿವೇಶನಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬೃಹತ್​ ಸಮಾವೇಶವನ್ನು ಕಾಂಗ್ರೆಸ್​ ಆಯೋಜಿಸಿತ್ತು. ಈ ಅಧಿವೇಶನದ ಸಂದರ್ಭದಲ್ಲಿ ಡಿಕೆಶಿ ಮಹಿಳೆಯರನ್ನ ತಳ್ಳಿ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಬಿಜೆಪಿ ವಿಡಿಯೊವನ್ನು ಹಂಚಿಕೊಂಡಿದೆ.

ವಿಡಿಯೊದಲ್ಲಿ ಏನಿದೆ?

ಕಾರ್ಯಕರ್ತೆಯರು ಗುಂಪಿನತ್ತ ನಡೆದು ಬಂದ ಡಿಕೆಶಿ ಮಹಿಳೆಯರನ್ನು ಕೈಯಿಂದ ತಳ್ಳುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ʼʼಅವಮಾನಕರ! ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು
ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಮತ್ತು ತಮ್ಮ ಬಾಸ್ ಅನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಕಾರ್ಯಕರ್ತೆಯರನ್ನು ಪಕ್ಕಕ್ಕೆ ತಳ್ಳಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರು ಅನುಭವಿಸಿದ ಅಗೌರವ ಇದು. ತಮ್ಮದೇ ಪಕ್ಷದ ಸದಸ್ಯರು ಇಂತಹ ಅವಮಾನವನ್ನು ಎದುರಿಸಿದರೆ, ಕಾಂಗ್ರೆಸ್ ಆಡಳಿತದಲ್ಲಿ ದೇಶಾದ್ಯಂತ ಮಹಿಳೆಯರು ಸುರಕ್ಷತೆಯನ್ನು ಹೇಗೆ ನಿರೀಕ್ಷಿಸಬಹುದು?ʼʼ ಎಂದು ಬಿಜೆಪಿ ಬರೆದುಕೊಂಡು ವಿಡಿಯೊವನ್ನು ಹಂಚಿಕೊಂಡಿದೆ. ಜತೆಗೆ AntiWomenCongress ಹ್ಯಾಶ್‌ ಟ್ಯಾಗ್‌ ಬಳಸಿದೆ.

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿ ಕಾರಿದ್ದಾರೆ. ಮಹಿಳೆಯರ ವಿರುದ್ದ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಡಿಯೊವನ್ನು 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಬಿಜೆಪಿ ನಾಯಕ ಅಮಿತ್‌ ಮಾಳವಿಯಾ ಅವರೂ ತಮ್ಮ ಎಕ್ಸ್‌ ಖಾತೆಯಲ್ಲಿ ಈ ದೃಶ್ಯವನ್ನು ಹಂಚಿಕೊಂಡು ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ʼʼಇದು ಕಾಂಗ್ರೆಸ್‌ನ ಮಹಿಳಾ ಸಬಲೀಕರಣದ ಕಲ್ಪನೆ. ಈ ವಿಡಿಯೊದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಕಾರ್ಯಕರ್ತೆಯರನ್ನು ದನಗಳಂತೆ ದೂಡುತ್ತಿರುವುದನ್ನು ಕಾಣಬಹುದು. ಇದು ನಾಚಿಕೆಗೇಡಿನ ಸಂಗತಿʼʼ ಎಂದು ಬರೆದುಕೊಂಡಿದ್ದಾರೆ. ಸದ್ಯ ಡಿಕೆಶಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಸುದ್ದಿಯನ್ನೂ ಓದಿ: Manmohan Singh: ಮನಮೋಹನ್ ಸಿಂಗ್ ಸ್ಮರಣಾರ್ಥ ಆರ್ಥಿಕ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಸ್ಥಾಪನೆ: ಡಿಕೆಶಿ