ಅಭಿಮತ
ಪ್ರಕಾಶ್ ಹೆಗಡೆ
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪುನಃ ಆಯ್ಕೆಯಾದಾಗಿನಿಂದ ಆಡಳಿತಾತ್ಮಕ ಸುಧಾರಣೆಗಳ ಸರಣಿ ಗಳನ್ನು ಘೋಷಿಸುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಅವುಗಳಲ್ಲಿ ಡೋಜ್ (DOGE: Department of
Government Efficiency) ಜಗದ ಮನಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಡೋಜ್ ಸರಕಾರದ ಸಲಹಾ ಇಲಾಖೆ ಯಾಗಿದ್ದು, ಫೆಡರಲ್ ಸರಕಾರದ ವೆಚ್ಚವನ್ನು ಕಡಿತಗೊಳಿಸಲು ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಲಹಾ ಮಾರ್ಗಗಳನ್ನು ಸೂಚಿಸುವುದೇ ಈ ಇಲಾಖೆಯ ಉದ್ದೇಶವಾಗಿದೆ.
ಈ ಇಲಾಖೆಯ ಮುಖ್ಯಸ್ಥರು ಜನಪ್ರತಿನಿಧಿಗಳಲ್ಲ ಅಥವಾ ಸರಕಾರದ ನೌಕರರೂ ಅಲ್ಲ. ಖಾಸಗೀ ವಲಯದ ತಮ್ಮದೇ ಆದ ಯಶಸ್ವಿ ಉದ್ಯಮಗಳನ್ನು ಅಚ್ಚಕಟ್ಟಾಗಿ ನಿರ್ವಹಿಸಿ ಸಾಧಿಸಿದ ದಿಗ್ಗಜರಾದ ಎಲೋನ್ ಮಸ್ಕ್ ಹಾಗೂ
ವಿವೇಕ್ ರಾಮಸ್ವಾಮಿ ಅವರು. ಡೋಜ್ ನೀತಿಯ ಬಾಹ್ಯರೇಖೆಗಳು ಹಾಗೂ ಚೌಕಟ್ಟುಗಳು ಇಲಾಖೆಯ ಯಶಸ್ಸಿನ
ಮುನ್ಸೂಚನೆಗಳೆನ್ನಬಹುದು.
ಅಮೆರಿಕದಲ್ಲಿ ಹೆಚ್ಚಿನ ಕಾನೂನು ಮತ್ತು ಶಾಸನಗಳು ಕಾಂಗ್ರೆಸ್ ಜಾರಿಗೆ ತಂದಿಲ್ಲ. ಅದೇ ರೀತಿ, ಸರಕಾರದ ನಿರ್ಧಾರಗಳು ಹಾಗೂ ವೆಚ್ಚಗಳನ್ನು ಚುನಾಯಿತ ಆಧ್ಯಕ್ಷರಿಂದ ಅಥವಾ ಅವರ ರಾಜಕೀಯ ನೇಮಕಾತಿ ಯಿಂದಲೂ ಮಾಡಲಾಗುವುದಿಲ್ಲ. ಇವೆಲ್ಲವೂ ಸಾವಿರಾರು ಸರಕಾರೀ ನಾಗರಿಕ ಆಧಿಕಾರಿಗಳು ಘೋಷಿಸಿದ
ನಿಬಂಧನೆಗಳಾಗಿವೆ. ಭಾರತದಲ್ಲಿಯೂ ಇಂತಹದೇ ಮಾದರಿ.
ರಾಷ್ಟ್ರೀಯ ಆಯವ್ಯಯ ವರ್ಷಕ್ಕೊಮ್ಮೆ ಉನ್ನತ ಮಟ್ಟದ ಸಂಸತ್ತಿನಲ್ಲಿ ಅಂಗೀಕಾರವಾದೊಡನೆ ಸಂಬಂಧಿಸಿದ ಇಲಾಖೆಯ ನಾಗರಿಕ ಅಧಿಕಾರಿಗಳಿಗೆ(Bureaucrats) ವರ್ಗಾವಣೆಯಾಗುತ್ತದೆ. ಅಲ್ಲಿಂದ ಮುಂದೆ ಖರ್ಚಿನ ವಹಿ ವಾಟು, ಸರಕಾರಿ ಶಾಸನಗಳ ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸುವುದು ಈ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಕೇಂದ್ರ ಹಣಕಾಸು ಸಚಿವಾಲಯವು, ವೆಚ್ಚ ಇಲಾಖೆಯೆಂಬ ಪ್ರತ್ಯೇಕ ವಿಭಾಗವನ್ನು ಹೊಂದಿದೆ.
ಈ ಇಲಾಖೆಯು ಸಾರ್ವಜನಿಕ ಸೇವೆಗಳ ವೆಚ್ಚ ಮತ್ತು ಬೆಲೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸಚಿವಾಲಯಗಳು ಹಾಗೂ ಇತರೆ ಇಲಾಖೆಗಳಿಗೆ ಸಹಾಯಮಾಡುತ್ತದೆ. ಆದರೆ ಅನೇಕ ಅಧಿಕಾರಿಗಳು ರಾಜಕೀಯ ಒತ್ತಡಕ್ಕೊ, ಇಲ್ಲ ಮಾಧ್ಯಮಗಳ ಟೀಕೆಗೊ ಒಳಗಾಗದಿರಲು ಸುರಕ್ಷಿತ ಮಾರ್ಗದ ಮೊರೆಹೋಗಿ ತಟಸ್ಥರಾಗಿದ್ದು ಬಿಡುತ್ತಾರೆ. ಇನ್ನು ಕೆಲವೊಮ್ಮೆ ರಾಜಕೀಯ ಪ್ರೇರಿತ ನಿಬಂಧನೆಗಳಾಗಿದ್ದರೆ, ಅನುಷ್ಠಾನಗೊಳಿಸಲು ನ್ಯಾಯಾಂಗದ ನಿರ್ಧಾರಕ್ಕಾಗಿ
ಕಾಯುತ್ತಾರೆ. ಬಹಳಷ್ಟು ಸರಕಾರಿ ಕಾರ್ಯಕ್ರಮಗಳು ಈ ರೀತಿಯ ರೆಡ್ ಟೇಪಿಸಮ್ ಸುರುಳಿಯಲ್ಲಿ ಮಂದಗತಿ ಯಲ್ಲಿ ಸಾಗುತ್ತವೆ ಅಥವಾ ಕಳೆದುಹೋಗುತ್ತವೆ.
ಭಾರತದಲ್ಲಿಯೂ ನಾವು ಡೋಜ್ ರೀತಿಯಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರಲು ಯೋಚಿಸಬಹುದಲ್ಲವೇ? ಡೋಜ್ ಇನ್(DOGEIN: Department of Government Efficiency&India) ಎಂಬ ನಾಮಾಂಕಿತ ಈ ಇಲಾಖೆಗೆ ಸಮಂಜಸವೇ? ಆದರೆ ಇಲಾಖೆಯ ಮುಖ್ಯಸ್ಥರು ಯಾವುದೇ ರಾಜಕೀಯ, ನ್ಯಾಯಾಂಗ ಅಥವಾ ಬ್ಯೂರೋಕ್ರಾಟಿಕ್ ಅಧಿಕಾರಿಗಳಾಗಿರಬಾರದು. ವೆಚ್ಚಗಳನ್ನು ನಿಯಂತ್ರಿಸಿ, ಪರಿಣಾಮಕಾರಿಯಾಗಿ ಸಂಸ್ಥೆಗಳನ್ನು ನಡೆಸಿ ಸಾಬೀತು ಪಡಿಸಿ ಪೂರ್ವನಿದರ್ಶನಗಳನ್ನು ಪ್ರದರ್ಶಿಸಿದವರಿರಬೇಕು. ಇಲಾಖೆಯ ಮುಖ್ಯಸ್ಥರಾಗಿ ಯಶಸ್ವೀ ಉದ್ಯಮಿಗಳಾದ ನಾರಾಯಣ್ ಮೂರ್ತಿ, ಆನಂದ್ ಮಹೇಂದ್ರ, ಟಾಟಾ ಸನ್ಸ್‌ನ ಚೇರ್ಮನ್‌ರಾದ ಚಂದ್ರಶೇಖರನ್‌ರಂತಹ ಯಾವುದೇ ಕಪ್ಪುಚುಕ್ಕೆಯಿರದವರನ್ನು ನೇಮಿಸಿದರೆ ಯಶಸ್ಸು ಶತಃಸಿದ್ಧ.
ಕೇಂದ್ರ ಸರಕಾರದ ಒಟ್ಟು ವೆಚ್ದದ ಬಜೆಟ್ ಸುಮಾರು ನಲವತ್ತಾರು ಲಕ್ಷ ಕೋಟಿ ರುಪಾಯಿಗಳು. ಇದರ ಒಂದು
ಭಾಗವಾದ ಕೇಂದ್ರ ಸರಕಾರದ ನೌಕರರ ಸಂಬಳ ಸಂಭಂಧಿತ ಖರ್ಚು ಸುಮಾರು ಎಂಟು ಲಕ್ಷ ಕೋಟಿ ರುಪಾಯಿ ಗಳು. ಈ ಮೊಬಲಗಲ್ಲಿ ಶೇ.2 ಉಳಿತಾಯವಾದರೂ ಸುಮಾರು ತೊಂಭತ್ತೆರಡು ಸಾವಿರ ಕೋಟಿ ರುಪಾಯಿಗಳಷ್ಟು ಬೇರೆಯ ಮೌಲವರ್ಧಿತ ಕಾರ್ಯಗಳಿಗೆ ಲಭ್ಯವಾಗುತ್ತದೆ. ಈ ಮೊತ್ತ ಭಾರತದ ಅರ್ಧ ತಿಂಗಳ ಜಿಎಸ್‌ಟಿ ಸಂಗ್ರಹಣೆಷ್ಟಿದೆ. ಹಾಗೆಯೇ ಸರಕಾರದಲ್ಲಿ ಬಹಳಷ್ಟು ಸುಪ್ತ ಇಲಾಖೆಗಳಿವೆ.
ಸಕಾರಣವಿಲ್ಲದೆಯೇ ಅಥವಾ ತಮ್ಮ ಇರುವಿಕೆಯನ್ನು ತೋರಿಸುವಂತಹ ಇಲಾಖೆಗಳೂ ಇವೆ. ಕೆಲಸವಿಲ್ಲದೆಯೆ ಬಜೆಟ್ ಹಂಚಿಕೆ ಪಡೆದು ಹಣವನ್ನು ಖರ್ಚು ಮಾಡುವಂತಹವು. ಇಂತಹ ಇಲಾಖೆಗಳನ್ನು ಉತ್ಪಾದಕತೆಯೆಡೆಗೆ ನಡೆಸುವ ಸಲಹೆಗಳು ಅಗತ್ಯವಾಗಿದೆ. ಹಾಗೆಯೇ ಸರಕಾರೀ ನೌಕರರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ವಿಆರ್‌ಎಸ್ ನಂತಹ ಕ್ರಮಗಳನ್ನು ಜಾರಿಗೊಳಿಸಿ ಖರ್ಚನ್ನು ಕಡಿತಗೊಳಿಸಬಹುದು.
ಸರಕಾರೀ ನೌಕರರನ್ನು ಮುಂದುವರಿದ ಉಚ್ಚ ಮಟ್ಟದ ಎಆಇ ಸಂಬಂಧಿತ ತರಬೇತಿ ನೀಡಿ ಅವರ ಕಾರ್ಯಕ್ಷಮತೆ ಯನ್ನು ನವೀಕರಿಸಬಹುದು. ಹೆಚ್ಚುವರಿ ನೌಕರರನ್ನು ಗುರುತಿಸಿ ಅವರ ಅಗತ್ಯವಿರುವೆಡೆ ವರ್ಗಾವಣೆ ಮಾಡಿ ಹೆಚ್ಚು ಉತ್ಪಾದಕ ನೌಕರರನ್ನಾಗಿ ಪರಿವರ್ತಿಸಬಹುದು. ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಸರಕಾರದ ಕಲ್ಯಾಣ ಯೋಜನೆಗಳನ್ನು ಸರಿಯಾದ ವರ್ಗಕ್ಕೆ ತಲುಪುವಂತೆ ಮಾಡಿ ಅನಗತ್ಯ ಸೋರಿಕೆಗಳನ್ನು ತಡೆಗಟ್ಟುವು ದಷ್ಟೇ ಅಲ್ಲದೇ ಯೋಜನೆಗಳು ಸಮರ್ಪಕವಾಗಿ ಸಾಗಿಕೊಂಡು ಯಶಸ್ಸಿನ ಹಾದಿ ಹಿಡಿಯುವಂತೆ ಕಾರ್ಯ ನಿರ್ವಹಣೆ ಮಾಡಬಹುದು. ಏಕ ಗವಾಕ್ಷ ಅನುಮತಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಹೀಗೇ ಅಸಂಖ್ಯಾತ ಸುಧಾರಣೆಗಳನ್ನು ಕಂಡುಕೊಳ್ಳಬಹುದು.
ಕೇಂದ್ರ ಸರಕಾರದ ಪ್ರಯತ್ನ ಈ ದಿಶೆಯಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರವಾಗಿದೆ. ಜಗವೇ ಬೆರಗಾಗಿ ನೋಡುತ್ತಿರುವ ಆಧಾರ್ ನೋಂದಣಿ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕಲ್ಯಾಣ ಯೋಜನೆಗಳ ಸಂಬಂಧಿತ ವರ್ಗಾವಣೆಗಳು, ಹಾಗೂ ಡಿಜಿಟಲ್ ಪಾವತಿಗಳು ಅಭಿವೃದ್ಧಿ ಕ್ರಾಂತಿಯ ಅಲೆಯನ್ನು ಸೃಷ್ಟಿಸಿವೆ.
ಡೋಜ್-ಇನ್ ಇಲಾಖೆಯ ಸಲಹೆಯಿಂದ ಹೊಸ ದಿಕ್ಕು ಮತ್ತು ವೇಗ ದೊರಕಬಹುದು. ರಾಜ್ಯ ಸರಕಾರಗಳೂ ಸಹ ಇದೇ ರೀತಿಯ ಪರಿವರ್ತನಾ ಮಾರ್ಗವನ್ನು ಅನುಸರಿಸಿದರೆ ಭಾರತದ ಬೆಳವಣಿಗೆಯೊಂದೇ ಅಲ್ಲದೇ, ನಾಗರಿಕರ ಜೀವನ ಮಟ್ಟ ಸುಧಾರಿಸಿ ಮುಂದುವರಿದ ರಾಷ್ಟ್ರಗಳ ಸರಿಸುಮಾರಿಗೆ ತಲುಪಬಲ್ಲದು. ಭಾರತದ ಜಿಡಿಪಿ ಇಂದಿರು ವುದಕ್ಕಿಂತ ವೇಗವಾಗಿ ಚಲಿಸುವ ಸಾಧ್ಯತೆಯಂತೂ ಖಚಿತ. ಗೋಲು ದೂರವಿಲ್ಲ. ಗೋಲು ಅಸಾಧ್ಯ ವೇನಲ್ಲ. ಒಬ್ಬರು ಇನ್ನೊಬ್ಬರ ಕಾಲೆಳೆಯದೆಯೆ ಒಟ್ಟಾಗಿ ಸಾಗಬೇಕಷ್ಟೆ.
(ಲೇಖಕರು: ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಹವ್ಯಾಸಿ ಬರಹಗಾರ)
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ